ಲಿಂಗಾಯತ ಪ್ರತ್ಯೇಕ ಶಬ್ದ ಬಳಸುವವರು ಸಮಾಜಕ್ಕೆ ಕಂಟಕ

| Published : Oct 03 2025, 01:07 AM IST

ಲಿಂಗಾಯತ ಪ್ರತ್ಯೇಕ ಶಬ್ದ ಬಳಸುವವರು ಸಮಾಜಕ್ಕೆ ಕಂಟಕ
Share this Article
  • FB
  • TW
  • Linkdin
  • Email

ಸಾರಾಂಶ

ಬಸವ ಸಂಸ್ಕೃತಿ ಯಾತ್ರೆ ಎಂಬ ಹೆಸರಿನಲ್ಲಿ ಹೊರಟಿದ್ದು, ಈ ಮೂಲಕ ಲಿಂಗಾಯತ ಸಮಾಜಕ್ಕೆ ಅವರು ಕೊಡಲಿ ಪೆಟ್ಟು ಕೊಡಲಿದ್ದಾರೆ. ಬಸವ ಸಂಸ್ಕೃತಿ ಯಾತ್ರೆಗೆ ಸಮಾಜ ಬೆಲೆ ಕೊಡಬಾರದು.

ಧಾರವಾಡ:

ವೀರಶೈವ-ಲಿಂಗಾಯತ ಒಂದೇಯಾಗಿದ್ದು, ಲಿಂಗಾಯತ ಎಂದು ಪ್ರತ್ಯೇಕ ಶಬ್ದ ಬಳಸುವವರು ಯಾವುದೋ ಆಮಿಷಕ್ಕೆ ಒಳಗಾಗಿದ್ದಾರೆ. ಅಲ್ಲದೇ, ವೀರಶೈವ-ಲಿಂಗಾಯತ ಸಮಾಜಕ್ಕೆ ಅವರು ಕಂಟಕ‌ವು ಹೌದು ಎಂದು ಶಿರಹಟ್ಟಿಯ ಫಕೀರ ದಿಂಗಾಲೇಶ್ವರ ಸ್ವಾಮೀಜಿ ಹೇಳಿದ್ದಾರೆ.

ಬುಧವಾರ ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಸವ ಸಂಸ್ಕೃತಿ ಯಾತ್ರೆ ಎಂಬ ಹೆಸರಿನಲ್ಲಿ ಹೊರಟಿದ್ದು, ಈ ಮೂಲಕ ಲಿಂಗಾಯತ ಸಮಾಜಕ್ಕೆ ಅವರು ಕೊಡಲಿ ಪೆಟ್ಟು ಕೊಡಲಿದ್ದಾರೆ. ಬಸವ ಸಂಸ್ಕೃತಿ ಯಾತ್ರೆಗೆ ಸಮಾಜ ಬೆಲೆ ಕೊಡಬಾರದು. ಅವರ ಮಾತನ್ನು ಗಮನದಲ್ಲಿಟ್ಟುಕೊಳ್ಳಬಾರದು. ಸದಾ‌ಕಾಲ ಸಮಾಜ ಹಾಳು ಮಾಡುವ‌ ಗುಂಪಾಗಿ ಇವರು ಹೊರಹೊಮ್ಮಿದ್ದಾರೆ. ವೀರಶೈವ-ಲಿಂಗಾಯತ ಇಬ್ಭಾಗವಾದರೆ ಸಮಾಜಕ್ಕೆ ಒಳ್ಳೆಯದಾಗಲು ಸಾಧ್ಯವಿಲ್ಲ ಎಂದ ಸ್ವಾಮೀಜಿ, ಧರ್ಮದ ಕಾಲಂನಲ್ಲಿ ಹಿಂದೂ, ಜಾತಿ ಕಾಲಂನಲ್ಲಿ‌ ವೀರಶೈವ ಲಿಂಗಾಯತ ಹಾಗೂ ಉಪಜಾತಿ ಕಾಲಂನಲ್ಲಿ ನಿಮ್ಮ ಪಂಗಡದ ಹೆಸರು ಬರೆಸಬೇಕು. ಇದನ್ನು ಸಮಾಜ ಅರ್ಥ ಮಾಡಿಕೊಳ್ಳಬೇಕು ಎಂದರು.

ಜಾತಿ ಸಮೀಕ್ಷೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಸ್ವಾಮೀಜಿ, ಏಳು ಕೋಟಿ ಜನಸಂಖ್ಯೆ ಇರುವ ಕರ್ನಾಟಕದಲ್ಲಿ ಕೆಲವೇ ದಿನಗಳಲ್ಲಿ ಸಮೀಕ್ಷೆ ಮಾಡುತ್ತೇವೆ ಎನ್ನುವುದು ಎಷ್ಟರ ಮಟ್ಟಿಗೆ ಸರಿ? ಸಮೀಕ್ಷೆ ಮಾಡುವ ಗಣತಿದಾರರು ಮನೆಗೆ ಬಂದಾಗ ಅವರ‌ ನೋವು ನೋಡಿದರೆ ಅಗತ್ಯತೆ ಇತ್ತಾ ಎನಿಸುತ್ತದೆ. ಸಮೀಕ್ಷೆಯಿಂದ ಏನೂ ಪ್ರಯೋಜನ ಇಲ್ಲ, ಸಮಾಜಕ್ಕೆ‌ ಇದರಿಂದ ಅನುಕೂಲಕ್ಕಿಂತ ಅನಾನುಕೂಲವೇ ಜಾಸ್ತಿ. ಸರ್ಕಾರ ಇಷ್ಟು ತರಾತುರಿಯಲ್ಲಿ ಏತಕ್ಕೆ ಮಾಡುತ್ತಿದೆ? ಎಂದು ಪ್ರಶ್ನಿಸಿದರು.

ಸಂಸ್ಕೃತಿ ದ್ರೋಹಿಗಳು:

ಮಠ-ಮಾನ್ಯಗಳಲ್ಲಿ ಆನೆಗಳನ್ನು ಬಳಸಬಾರದು ಎನ್ನುವ ಮೇನಕಾ ಗಾಂಧಿ ವಿಚಾರವಾಗಿ ಖಾರವಾಗಿಯೇ ಉತ್ತರಿಸಿದ ದಿಂಗಾಲೇಶ್ವರ ಸ್ವಾಮೀಜಿ, ಇವರೆಲ್ಲ ದೇಶದ್ರೋಹಿ ಮಾತ್ರವಲ್ಲದೇ ಸಂಸ್ಕೃತಿ ದ್ರೋಹಿಗಳು. ಸಾವಿರಾರು ವರ್ಷಗಳ ಪರಂಪರೆಗೆ ಧಕ್ಕೆ ತರುವ ಮಾತುಗಳನ್ನಾಡುತ್ತಿದ್ದಾರೆ. ಮೇನಕಾ ಗಾಂಧಿ ಪ್ರಾಣಿ ಪ್ರಿಯೆ ಹೆಣ್ಣು ಇರಲಿ. ಆದರೆ, ಧಾರ್ಮಿಕ ಸ್ಥಳದಲ್ಲಿ ಇರುವ ಪ್ರಾಣಿಗಳನ್ನು ಹೊರಗೆ ಕಳಿಸುವ ಸಾಹಸ ಮಾಡುತ್ತಿದ್ದಾರೆ. ಇವರಿಗೆ ಅಯೋಗ್ಯ ಎನ್ನುವುದಕ್ಕಿಂತ ಕೆಳಮಟ್ಟದ ಶಬ್ದ ಬಳಸಬಹುದಾಗಿತ್ತು. ಅದಕ್ಕೆ ಅಯೋಗ್ಯಳು ಎನ್ನುವ ಮಾತು ಹೇಳಿದ್ದೇನೆ. ಯಾವುದೇ ಸರ್ಕಾರ ಧರ್ಮದ ವಿಚಾರದಲ್ಲಿ ಕೈಹಾಕಿದರೆ ಮುಂದೆ ದುಃಖ ಅನುಭವಿಸುತ್ತವೆ ಎಂದು ಎಚ್ಚರಿಸಿದರು.