ಸಾರಾಂಶ
ಧಾರವಾಡ:
ಸಾಮಾಜಿಕ ಹಾಗೂ ಆರ್ಥಿಕ ಗಣತಿ ಹೆಸರಿನಲ್ಲಿ ರಾಜ್ಯದಲ್ಲಿ ಹಿಂದೂಗಳನ್ನು ಮತಾಂತರ ಮಾಡಲು ಪ್ರೋತ್ಸಾಹಿಸುವಂತೆ ಗಣತಿ ನಡೆದಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದ್ದಾರೆ.ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರವೇ ಜಾತಿ ಗಣತಿ ಮಾಡಲು ನಿರ್ಧರಿಸಿದೆ. ಹೀಗಾಗಿ ಜಾತಿ ಗಣತಿಗೆ ನಮ್ಮ ವಿರೋಧವಿಲ್ಲ. ಆದರೆ, ಇದೀಗ ನಡೆಯುತ್ತಿರುವ ಗಣತಿಯಲ್ಲಿ ವೈಯಕ್ತಿಕ ಪ್ರಶ್ನೆಗಳನ್ನು ಸೇರಿಸಲಾಗಿದೆ. ಕ್ರಿಶ್ಚಿಯನ್ ಲಿಂಗಾಯತ, ಕ್ರಿಶ್ಚಿಯನ್ ಬ್ರಾಹ್ಮಣ ಅಂದರೇನು ಅರ್ಥ? ನೀವು ಯಾವುದಾದರೂ ಸಾಮಾಜಿಕ ಸಂಘಟನೆಗೆ ಸೇರಿದ್ದೀರಾ? ಎನ್ನುವ ಪ್ರಶ್ನೆಗಳು ಬೇಕಿತ್ತಾ ಎಂದು ಪ್ರಶ್ನಿಸಿದರು.
ಜಾತಿಗೆ ಸಂಬಂಧಿಸಿದ ಮಾಹಿತಿ ನೀಡಲು ತಕರಾರಿಲ್ಲ. ಆದರೆ, ಅನಾವಶ್ಯಕ ಪ್ರಶ್ನೆಗಳಿಗೆ ನಮ್ಮ ತಕರಾರಿದೆ. ಹೀಗಾಗಿ ಅಂತಹ ಪ್ರಶ್ನೆಗಳಿಗೆ ನಮ್ಮ ವಿರೋಧವಿದೆ. ಹಿಂದೂ ಸಮಾಜವನ್ನು ಇಬ್ಭಾಗ ಮಾಡಬೇಕೆನ್ನುವ ಪ್ರಯತ್ನದಲ್ಲಿ ಜಾತಿ ಗಣತಿ ಸಹ ಒಂದು ಎಂದು ಗಣತಿ ಬಗ್ಗೆ ಅವರ ಮತ್ತೊಮ್ಮೆ ಬೇಸರ ವ್ಯಕ್ತಪಡಿಸಿದರು.ನಾನೇ ಐದು ವರ್ಷ ಮುಖ್ಯಮಂತ್ರಿ ಎನ್ನುವ ಸಿದ್ದರಾಮಯ್ಯ ವಿಷಯಕ್ಕೆ ಪ್ರತಿಕ್ರಿಯೆ ನೀಡಿದ ಜೋಶಿ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಬೆಂಬಲಿಗರು ಮುಂದಿನ ತಿಂಗಳು ಮುಖ್ಯಮಂತ್ರಿ ಬದಲಾವಣೆ ಎಂದು ಹೇಳುತ್ತಿದ್ದಾರೆ. ಆದರೆ, ಸಿದ್ದರಾಮಯ್ಯ ಇಲ್ಲ ಎನ್ನುತ್ತಿದ್ದಾರೆ. ತಮ್ಮ ಸೀಟು ಉಳಿಸಿಕೊಳ್ಳಲು ಈ ಗಣತಿ ಮಾಡುತ್ತಿದ್ದಾರೆ. ಆದರೆ, ನಮಗೆ ಗಣತಿ ವಿರೋಧಿಗಳು ಎಂದು ಹೇಳುತ್ತಿದ್ದಾರೆ. ಒಕ್ಕಲಿಗ ಸ್ವಾಮಿಗಳು, ಡಿಕೆಶಿ ಇದ್ದ ಸಭೆಯಲ್ಲಿ ಗಣತಿ ಮುಂದೂಡಬೇಕೆಂದು ಹೇಳಿದರಲ್ಲವೇ? ಇದರ ಅರ್ಥವೇನು? ಹಾಗಾದರೆ ಡಿಕೆಶಿ ಗಣತಿ ವಿರೋಧಿ ಅಲ್ಲದೇ ಇನ್ನೇನು ಎಂದರು.
ಮುಖ್ಯಮಂತ್ರಿ ಕುರ್ಚಿ ಹೋಗಲಿದೆ ಎನ್ನುವ ಭಯಕ್ಕೆ ಹಾಗೂ ರುಹುಲ್ ಗಾಂಧಿ, ಸೋನಿಯಾ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ಮೆಚ್ಚಿಸಲು ಜಾತಿ ಗಣತಿ ಮಾಡಲಾಗುತ್ತಿದೆ ಎಂದೂ ಜೋಶಿ ಆರೋಪಿಸಿದರು.