ಸಂಡೂರಿನ ಅಸ್ಪೃಶ್ಯತಾ ನಿವಾರಣೆ ಮೆಚ್ಚಿದ ಗಾಂಧೀಜಿ

| Published : Oct 03 2025, 01:07 AM IST

ಸಾರಾಂಶ

ದಕ್ಷಿಣ ಭಾರತದ ಒಂದು ಪುಟ್ಟ ಸಂಡೂರು ಸಂಸ್ಥಾನ ಹರಿಜನರಿಗೆ ದೇವಸ್ಥಾನದಲ್ಲಿ ಮುಕ್ತ ಪ್ರವೇಶ ನೀಡಿತು.

ವಿ.ಎಂ. ನಾಗಭೂಷಣ

ಸಂಡೂರು: ದಕ್ಷಿಣ ಭಾರತದ ಒಂದು ಪುಟ್ಟ ಸಂಡೂರು ಸಂಸ್ಥಾನ ಹರಿಜನರಿಗೆ ದೇವಸ್ಥಾನದಲ್ಲಿ ಮುಕ್ತ ಪ್ರವೇಶ ನೀಡಿತು. ಆಕಾಶವೇನೂ ಕಳಚಿ ಬೀಳಲಿಲ್ಲ ಎಂದು ಮಹಾತ್ಮ ಗಾಂಧಿಜಿಯರು ಬರೆದಿದ್ದಾರೆ.

ಮಹಾತ್ಮ ಗಾಂಧೀಜಿಯವರ ಅಭಿಪ್ರಾಯದಲ್ಲಿ ವ್ಯಕ್ತವಾದ ದಕ್ಷಿಣ ಭಾರತದ ಪುಟ್ಟ ಸಂಸ್ಥಾನ ಅದು ಸಂಡೂರು ಸಂಸ್ಥಾನ. 1934ರಲ್ಲಿ ಮಹಾತ್ಮ ಗಾಂಧೀಜಿಯವರು ಸಂಡೂರಿಗೆ ಭೇಟಿ ಕೊಟ್ಟಿದ್ದರು. ಅಷ್ಟೊತ್ತಿಗೆ ಆಗಲೇ ಸಂಡೂರು ಸಂಸ್ಥಾನದಲ್ಲಿ ಆಳ್ವಿಕೆ ನಡೆಸುತ್ತಿದ್ದ ಘೋರ್ಪಡೆ ರಾಜ ವಂಶದವರು ಇಲ್ಲಿನ ದೇವಸ್ಥಾನಗಳಲ್ಲಿ ಹರಿಜನರಿಗೆ ಮುಕ್ತ ಪ್ರವೇಶಕ್ಕೆ ಅವಕಾಶ ಕಲ್ಪಿಸಿದ್ದರು. ತಮ್ಮ ಸಂಡೂರು ಭೇಟಿಯ ಸಂದರ್ಭದಲ್ಲಿ ಈ ಅಂಶವನ್ನು ತಿಳಿದ ಮಹಾತ್ಮ ಗಾಂಧೀಜಿಯವರು ಸಂಡೂರು ಘೋರ್ಪಡೆ ರಾಜ ಸಂಸ್ಥಾನ ಕುರಿತು ತಮ್ಮ ಅಭಿಪ್ರಾಯವನ್ನು ಉಲ್ಲೇಖಿಸಿದ್ದಾರೆ.

ಮಹಾತ್ಮ ಗಾಂಧೀಜಿಯವರ ಸಂಡೂರು ಭೇಟಿಯನ್ನು ಚಿರಸ್ಥಾಯಿಯನ್ನಾಗಿಸಲು ಸಂಡೂರಿನಲ್ಲಿರುವ ಆದರ್ಶ ಕಲ್ಯಾಣ ಮಂಟಪದ ಆವರಣದಲ್ಲಿ ಬೃಹತ್ ಗಾತ್ರದ ಮಹಾತ್ಮ ಗಾಂಧೀಜಿಯವರ ಪ್ರತಿಮೆಯನ್ನು ಪ್ರತಿಷ್ಠಾಪಿಸಲಾಗಿದೆ. ಮಹಾತ್ಮ ಗಾಂಧೀಜಿಯವರ 125ನೇ ಜನ್ಮ ದಿನಾಚರಣೆ ಅಂಗವಾಗಿ 1995ರ ಅಕ್ಟೋಬರ್‌ 11ರಂದು ಅಂದಿನ ಶಾಸಕರಾಗಿದ್ದ ಎಂ.ವೈ. ಘೋರ್ಪಡೆ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಆಗಿನ ರಾಜ್ಯದ ರಾಜ್ಯಪಾಲರಾಗಿದ್ದ ಖುರ್ಷಿದ್ ಆಲಂ ಖಾನ್ ಮಹಾತ್ಮ ಗಾಂಧೀಜಿ ಪ್ರತಿಮೆಯನ್ನು ಅನಾವರಣಗೊಳಿಸಿದರು.

ಮಹಾತ್ಮ ಗಾಂಧೀಜಿಯವರ ಪ್ರತಿಮೆ ಇರುವ ಸ್ಥಳದಲ್ಲಿನ ಆದರ್ಶ ಕಲ್ಯಾಣ ಮಂಟಪದ ಭಿತ್ತಿಯ ಮೇಲೆ ವಿವಿಧ ಧರ್ಮ ಗ್ರಂಥಗಳ ಉಕ್ತಿಗಳನ್ನು ಬರೆಯಿಸಲಾಗಿದೆ. ಮಹಾತ್ಮ ಗಾಂಧೀಜಿಯವರ ಗ್ರಾಮ ಸ್ವರಾಜ್ಯ ಕಲ್ಪನೆಯನ್ನು ಸಾಕಾರಗೊಳಿಸಲು, ಎಂ.ವೈ. ಘೋರ್ಪಡೆಯವರು ಆದರ್ಶ ಕಲ್ಯಾಣ ಮಂಟಪದ ಪಕ್ಕದಲ್ಲಿ ಕರ ಕುಶಲ ಕೇಂದ್ರವನ್ನು ಆರಂಭಿಸಿದ್ದಾರೆ. ಇಲ್ಲಿ ಖಾದಿ ಬಟ್ಟೆ ಉತ್ಪಾದನೆ, ಶಿಲಾಮೂರ್ತಿ ಕೆತ್ತನೆ, ಲಂಬಾಣಿ ಕಸೂತಿ ಮುಂತಾದ ಕರಕುಶಲ ವಸ್ತುಗಳನ್ನು ತಯಾರಿಸಲಾಗುತ್ತಿದೆ. ಇಲ್ಲಿನ ಉತ್ಪನ್ನಗಳು ದೇಶ ವಿದೇಶಗಳಲ್ಲಿ ಹೆಸರನ್ನು ಗಳಿಸಿವೆ.

ಇತ್ತೀಚೆಗೆ ಮತ್ತೊಂದು ಮಹಾತ್ಮ ಗಾಂಧೀಜಿ ಪ್ರತಿಮೆಯನ್ನು ಸಂಡೂರು-ಯಶವಂತನಗರ ಮಾರ್ಗ ಮಧ್ಯದಲ್ಲಿ ಬರುವ ಪ್ರಕೃತಿ ವೀಕ್ಷಣಾ ಗೋಪುರದ ಕೆಳಗೆ ಪ್ರತಿಷ್ಠಾಪಿಸಲಾಗಿದೆ. ಸುತ್ತಲೂ ಹಸಿರುಟ್ಟ ಗುಡ್ಡಬೆಟ್ಟಗಳಿಂದ ಆವೃತವಾಗಿರುವ ವ್ಯೂವ್ ಪಾಯಿಂಟ್ (ಪ್ರಕೃತಿ ವೀಕ್ಷಣಾ ಗೋಪುರ) ಆಕರ್ಷಣೀಯ ಕೇಂದ್ರವಾಗಿದೆ.

ಓಯಸಿಸ್:

ಸಂಡೂರಿನ ನಿಸರ್ಗ ಸೌಂದರ್ಯದಿಂದ ಆಕರ್ಷಿತರಾಗಿದ್ದ ಮಹಾತ್ಮ ಗಾಂಧೀಜಿಯವರು ಸಂಡೂರನ್ನು ಓಯಸಿಸ್ ಎಂಬು ಬಣ್ಣಿಸಿದ್ದಾರೆ.

ಮಹಾತ್ಮ ಗಾಂಧೀಜಿಯವರು ಸ್ವಾತಂತ್ರ್ಯದ ಪೂರ್ವದಲ್ಲಿ ಸಂಡೂರಿಗೆ ಆಗಮಿಸಿದ್ದರು. ಅವರನ್ನು ಇಲ್ಲಿನ ಸಂಸ್ಕೃತಿ ಹಾಗೂ ನಿಸರ್ಗ ಸೌಂದರ್ಯ ಆಕರ್ಷಿಸಿತ್ತು ಎಂಬುದು ಅವರ ಮಾತುಗಳಿಂದ ತಿಳಿದು ಬರುತ್ತಿದೆ. ಮಹಾತ್ಮ ಗಾಂಧೀಜಿಯವರು ಸಂಡೂರಿಗೆ ಆಗಮಿಸಿ, ಉಳಿದುಕೊಂಡಿದ್ದರು ಎಂಬ ವಿಷಯ ಇಲ್ಲಿನ ಯುವ ಜನತೆಯನ್ನು ಹಾಗೂ ಮಕ್ಕಳನ್ನು ಪುಳಕಿತರನ್ನಾಗಿಸುತ್ತದೆ. ಮಹಾತ್ಮ ಗಾಂಧೀಜಿಯವರ ಸ್ವರಾಜ್ಯ ಹಾಗೂ ಸ್ವಾವಲಂಬನೆಯ ಮೌಲ್ಯಗಳು ಎಲ್ಲರಲ್ಲೂ ನೆಲೆಗೊಳ್ಳಲಿ.