ಕಳೆದ ಐದು ತಿಂಗಳಲ್ಲಿ ರಾಜ್ಯದಲ್ಲಿ ಮದ್ಯ ಮಾರಾಟ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿದೆ. ದೇಶೀಯ ಮದ್ಯ(ಐಎಂಎಲ್‌) ಮತ್ತು ಬಿಯರ್‌ ಮಾರಾಟದಲ್ಲಿ ಕೂಡ ಕುಸಿತ ಕಂಡಿರುವುದು ಗಮನಾರ್ಹ. ಮದ್ಯದ ಬೆಲೆ ಹೆಚ್ಚಳ ಮಾರಾಟಕ್ಕೆ ಹೊಡೆತ ನೀಡಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಸಿದ್ದು ಚಿಕ್ಕಬಳ್ಳೇಕೆರೆ

 ಬೆಂಗಳೂರು : ಕಳೆದ ಐದು ತಿಂಗಳಲ್ಲಿ ರಾಜ್ಯದಲ್ಲಿ ಮದ್ಯ ಮಾರಾಟ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿದೆ. ದೇಶೀಯ ಮದ್ಯ(ಐಎಂಎಲ್‌) ಮತ್ತು ಬಿಯರ್‌ ಮಾರಾಟದಲ್ಲಿ ಕೂಡ ಕುಸಿತ ಕಂಡಿರುವುದು ಗಮನಾರ್ಹ. ಮದ್ಯದ ಬೆಲೆ ಹೆಚ್ಚಳ ಮಾರಾಟಕ್ಕೆ ಹೊಡೆತ ನೀಡಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

2024ನೇ ಸಾಲಿನ ಏಪ್ರಿಲ್‌ನಿಂದ ಆಗಸ್ಟ್‌ವರೆಗಿನ ಮಾರಾಟಕ್ಕೆ ಹೋಲಿಸಿದರೆ, ಇದೇ ಅವಧಿಯಲ್ಲಿ 2025ರಲ್ಲಿ ಮದ್ಯ ಮಾರಾಟದಲ್ಲಿ ಭಾರೀ ಇಳಿಕೆ ಕಂಡುಬಂದಿದೆ. ಅದರಲ್ಲೂ ಬಿಯರ್‌ ವಿಷಯಕ್ಕೆ ಬರುವುದಾದರೆ 2024ಕ್ಕೆ ಹೋಲಿಸಿದರೆ ಪ್ರಸಕ್ತ ಭಾರೀ ಪ್ರಮಾಣದಲ್ಲಿ ಮಾರಾಟಕ್ಕೆ ಹೊಡೆತ ಬಿದ್ದಿರುವುದು ಅಬಕಾರಿ ಇಲಾಖೆಯ ಮದ್ಯ ಮಾರಾಟದ ಅಂಕಿ-ಅಂಶ ಗಮನಿಸಿದರೆ ಸ್ಪಷ್ಟವಾಗುತ್ತದೆ.

ಐಎಂಎಲ್‌ ಮದ್ಯದ ವಿಷಯಕ್ಕೆ ಬರುವುದಾದರೆ, 2023ರ ಏಪ್ರಿಲ್‌ನಿಂದ ಆಗಸ್ಟ್‌ವರೆಗೂ ರಾಜ್ಯದಲ್ಲಿ ಒಟ್ಟಾರೆ 295.80 ಲಕ್ಷ ಬಾಕ್ಸ್‌ (ಒಂದು ಬಾಕ್ಸ್‌ಗೆ 8.64 ಲೀಟರ್‌) ಮಾರಾಟವಾಗಿತ್ತು. ಇದೇ ಅವಧಿಯಲ್ಲಿ 2024ರಲ್ಲಿ ಇದು 288.78 ಲಕ್ಷ ಬಾಕ್ಸ್‌ಗೆ ಇಳಿಕೆಯಾಗಿತ್ತು. ಇದೀಗ 2025 ರಲ್ಲಿ ಈ ಪ್ರಮಾಣ 285.01 ಲಕ್ಷ ಬಾಕ್ಸ್‌ಗೆ ಕುಸಿದಿದೆ. ಕಳೆದ ಮೂರು ವರ್ಷದಲ್ಲಿ ಈ ಅವಧಿಯಲ್ಲಿ ದೇಶೀಯ ಮದ್ಯ ಮಾರಾಟ ಇಳಿಕೆಯಾಗುತ್ತಾ ಬಂದಿದೆ.

ಮಾರಾಟ ಕಡಿಮೆಯಾದ್ರೂ ರಾಜಸ್ವ ಹೆಚ್ಚಳ:

ಮದ್ಯದ ಮಾರಾಟ ಕಡಿಮೆಯಾದರೂ ಸರ್ಕಾರದ ಬೊಕ್ಕಸಕ್ಕೆ ಬರಬೇಕಾದ ರಾಜಸ್ವಕ್ಕೇನೂ ಕೊರತೆಯಾಗಿಲ್ಲ. ಏಕೆಂದರೆ, ಸರ್ಕಾರ ಮದ್ಯದ ದರಗಳನ್ನು ಆಗಿಂದಾಗ್ಗೆ ಹೆಚ್ಚಳ ಮಾಡುತ್ತಲೇ ಬಂದಿದೆ. ಇದರಿಂದಾಗಿ ಮದ್ಯ ಮಾರಾಟದ ಪ್ರಮಾಣ ಕಡಿಮೆಯಾದರೂ ಹಣದ ವಹಿವಾಟು ಹೆಚ್ಚಾಗಿ ಬೊಕ್ಕಸಕ್ಕೆ ಅಧಿಕ ರಾಜಸ್ವ ಸಂಗ್ರಹವಾಗಿರುವುದು ಕಂಡುಬಂದಿದೆ.

2024ರಲ್ಲಿ ಏಪ್ರಿಲ್‌ನಿಂದ ಆಗಸ್ಟ್‌ವರೆಗೂ ಐಎಂಎಲ್‌ ಮತ್ತು ಬಿಯರ್‌ ಸೇರಿ 496.69 ಲಕ್ಷ ಬಾಕ್ಸ್‌ ಮದ್ಯ ಮಾರಾಟವಾಗಿದ್ದು, ₹14395.48 ಕೋಟಿ ರಾಜಸ್ವ ಸಂಗ್ರಹಿಸಲಾಗಿದೆ. ಇದೇ ಅವಧಿಯಲ್ಲಿ 2025ರಲ್ಲಿ ಐಎಂಎಲ್‌ ಮತ್ತು ಬಿಯರ್‌ ಸೇರಿ ಕೇವಲ 449.81 ಲಕ್ಷ ಬಾಕ್ಸ್‌ ಮಾತ್ರ ಮದ್ಯ ಮಾರಾಟವಾಗಿದ್ದರೂ ₹16358.76 ಕೋಟಿ ರಾಜಸ್ವ ಬೊಕ್ಕಸಕ್ಕೆ ಬಂದಿದೆ.

ಬಿಯರ್‌ ಮಾರಾಟ‍‍‍‍ವೂ ಇಳಿಕೆ!

ಇನ್ನು ಬಿಯರ್‌ ವಿಷಯಕ್ಕೆ ಬರುವುದಾದರೆ, ಕಳೆದ ಸಾಲಿನ ಏಪ್ರಿಲ್‌ನಿಂದ ಆಗಸ್ಟ್‌ವರೆಗಿನ ಮಾರಾಟಕ್ಕೆ ಹೋಲಿಸಿದರೆ ವಹಿವಾಟು ಪಾತಾಳಕ್ಕೆ ಕುಸಿದಿದೆ. 2024ರಲ್ಲಿ 207.91 ಲಕ್ಷ ಬಾಕ್ಸ್‌ (ಪ್ರತಿ ಬಾಕ್ಸ್‌ನಲ್ಲಿ 7.80 ಲೀಟರ್‌) ವಹಿವಾಟು ನಡೆದಿತ್ತು. ಆದರೆ 2025ರಲ್ಲಿ ಕೇವಲ 164.80 ಲಕ್ಷ ಬಾಕ್ಸ್‌ ಮಾತ್ರ ಮಾರಾಟವಾಗಿದ್ದು, ಕಳೆದ ಸಾಲಿಗೆ ಹೋಲಿಸಿದರೆ ಪ್ರತಿ ತಿಂಗಳಿನಲ್ಲೂ ಇಳಿಕೆ ಕಂಡುಬಂದಿದೆ.

ಮದ್ಯದ ಮೇಲೆ ಹೆಚ್ಚುವರಿ ಅಬಕಾರಿ ಶುಲ್ಕ ವಿಧಿಸಿರುವುದರಿಂದ ಐಎಂಎಲ್‌ ಮತ್ತು ಬಿಯರ್‌ ಮಾರಾಟ ಕಡಿಮೆಯಾಗಿದೆ. ನಕಲಿ ಮದ್ಯದ ಹಾವಳಿಯೂ ಮಾರಾಟದ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ.

-ಬಿ.ಗೋವಿಂದರಾಜ್‌ ಹೆಗ್ಡೆ, ಫೆಡರೇಷನ್‌ ಆಫ್‌ ವೈನ್‌ ಮರ್ಚೆಂಟ್ಸ್‌ ಅಸೋಸಿಯೇಷನ್‌ ಕರ್ನಾಟಕದ ಪ್ರಧಾನ ಕಾರ್ಯದರ್ಶಿ.