ಯಲ್ಲಾಪುರ: ಹಳ್ಳಿಗಳು ಬರಡಾಗುತ್ತಿರುವ ಕಾಲಘಟ್ಟದಲ್ಲಿ ಮನೆಯಂಗಳದಲ್ಲಿ ಸಾಹಿತ್ಯ ಚಿಂತನೆ ಆಶಾದಾಯಕ ಬೆಳವಣಿಗೆ. ಸಾಹಿತ್ಯಕ್ಕೆ ಅಗಾಧವಾದ ಶಕ್ತಿಯಿದೆ ಎಂದು ವಿಶ್ವದರ್ಶನ ಕನ್ನಡ ಮಾಧ್ಯಮ ಪ್ರೌಢಶಾಲೆಯ ಮುಖ್ಯಾಧ್ಯಾಪಕಿ ಮುಕ್ತಾ ಶಂಕರ ಹೇಳಿದರು.

ಅವರು ವಜ್ರಳ್ಳಿ ಗ್ರಾಪಂ ವ್ಯಾಪ್ತಿಯ ಬೀಗಾರ ಶಿವರಾಮ ಗಾಂವ್ಕರ ಕಲ್ಮನೆಯವರ ಮನೆಯಲ್ಲಿ ೩ನೇ ವರ್ಷದ ಸಾಹಿತ್ಯ ಚಿಂತನದ ಕವಿಗೋಷ್ಠಿ ಮತ್ತು ಬಾಗಿನಕಟ್ಟಾದ ಶ್ರೇಷ್ಠ ಕೃಷಿಕ, ಉತ್ತಮ ಕೃಷಿ ಪ್ರಶಸ್ತಿ ಪುರಸ್ಕೃತ ಸುಬ್ರಹ್ಮಣ್ಯ ಗಾಂವ್ಕರ ಸನ್ಮಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕೇವಲ ಅಕ್ಷರ ಪ್ರಾಸ ಬಂದರೆ ಕಾವ್ಯ ಆಗದು. ಕಾವ್ಯಾತ್ಮತೆ ಇರಬೇಕು. ಅಂತಹ ಕಾವ್ಯ ಬರಬೇಕಾದರೆ ಪರಿಪೂರ್ಣ ಅಧ್ಯಯನ, ನಿರಂತರ ಓದುವಿಕೆ ಇರಬೇಕು. ಯುವ ಜನಾಂಗ ಕೃಷಿಯಿಂದ ವಿಮುಖರಾಗುತ್ತಿರುವ ಇಂತಹ ಗ್ರಾಮದಲ್ಲಿ ಕೃಷಿಕರೊಬ್ಬರು ಎಲ್ಲರಿಗೂ ಪ್ರೇರಣೆಯಾಗಿ, ಊರಿನಲ್ಲಿಯೇ ಸನ್ಮಾನಿತರಾಗುತ್ತಿರುವುದು ಅತ್ಯಂತ ಹೆಮ್ಮೆಯ ಸಂಗತಿ. ಅವರಿಂದ ನಮ್ಮ ಯುವಕರು ಪ್ರೇರಿತರಾಗಲಿ ಎಂದು ಹೇಳಿದರು. ತಾವೇ ಬರೆದ ''''''''ಸೀತಾರಾಮಯಣ'''''''' ಕೃತಿಯ ಆಯ್ದ ಪದ್ಯಗಳನ್ನು ವಾಚಿಸಿದರು.

ಪತ್ರಕರ್ತ, ಕವಿ ಸುಬ್ರಾಯ ಬಿದ್ರೇಮನೆ ಆಶಯ ಭಾಷಣ ಮಾಡಿದರು.

ಸನ್ಮಾನಿತ ಸುಬ್ರಹ್ಮಣ್ಯ ಗಾಂವ್ಕರ ಮಾತನಾಡಿದರು.


ಕವಿಗಳಾದ ಕಾವೇರಿ ಸೋಮನಳ್ಳಿ, ಎಸ್.ಆರ್.ಎನ್.ಮೂರ್ತಿ ಕೈಗಾ, ಆರ್.ಜಿ.ಭಟ್ಟ ಬೆಳಸೂರು, ಗಣಪತಿ ಮೆಣಸುಮನೆ, ಪ್ರತಿಮಾ ಕೋಮಾರ ಸ್ವರಚಿತ ಕವನ ವಾಚಿಸಿದರು. ಭೂಮಿಕಾ ಭಟ್ಟ ಪ್ರಾರ್ಥಿಸಿದರು. ಡಾ.ರವೀಂದ್ರ ಭಟ್ಟ ಪರಿಚಯಿಸಿದರು. ಮಾನಸಾ ಬೋಳಗುಡ್ಡೆ ಸನ್ಮಾನ ಪತ್ರ ವಾಚಿಸಿದರು. ಸಂಘಟಕ ಶಿವರಾಮ ಗಾಂವ್ಕರ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ವಿನಯಶ್ರೀ ಗಾಂವ್ಕರ ನಿರ್ವಹಿಸಿದರು. ಸುಬ್ರಾಯ ಭಟ್ಟ ಬೀಗಾರ ವಂದಿಸಿದರು.

ಬೀಗಾರಿನಲ್ಲಿ ಸಾಹಿತ್ಯ ಚಿಂತನದ ಕವಿಗೋಷ್ಠಿಯಲ್ಲಿ ಮುಕ್ತಾ ಶಂಕರ ಮಾತನಾಡಿದರು.