ಸಾರಾಂಶ
ಸೊರಬ: ತಾಲೂಕಿನ ಕುಳವಳ್ಳಿ ಗ್ರಾಮದಲ್ಲಿ ಶವದ ಅಂತ್ಯ ಸಂಸ್ಕಾರ ನಡೆದ ಸ್ಥಳದಲ್ಲಿ ವಾಮಾಚಾರ ನಡೆಸಿರುವ ಘಟನೆ ನಡೆದಿದೆ. ಇದರಿಂದ ಮೃತ ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಭಯದ ವಾತಾವರಣದಲ್ಲಿದ್ದಾರೆ.
ಕುಳವಳ್ಳಿ ಗ್ರಾಮದ ಆಟೋ ಗಣೇಶ್ ಹೊನ್ನುಗುಂಡಿ (೨೮) ಎನ್ನುವ ಯುವಕ ಮೇ ೧೧ ರಂದು ಅನಾರೋಗ್ಯ ಕಾರಣ ಮೃತನಾಗಿದ್ದು, ಅಂದು ಸಂಜೆ ಅವನ ಅಂತ್ಯ ಸಂಸ್ಕಾರ ಗ್ರಾಮದ ಸ್ಮಶಾನದಲ್ಲಿ ನಡೆದಿದೆ.ಮರುದಿನ ಸಮಾದಿ ಪೂಜೆಗೆಂದು ಕುಟುಂಬಸ್ಥರು ತೆರಳಿದಾಗ ಅಂತ್ಯ ಸಂಸ್ಕಾರ ನಡೆದ ಜಾಗದ ಮೇಲೆ ರಂಗೋಲಿ ಮಂಡಲ ಹಾಕಿ, ನಾಲ್ಕು ದಿಕ್ಕುಗಳಲ್ಲಿ ಹಣತೆ ದೀಪ, ನಿಂಬೆ ಹಣ್ಣು, ಮೊಟ್ಟೆ, ಬೊಂಬೆ, ಮೊಳೆ, ವಿಭೂತಿ ಜತೆಗೆ ಪ್ರಾಣಿ ಬಲಿ ನೀಡಿದ ಕುರುಹುಗಳು ಕಂಡು ಬಂದಿದೆ. ಇದನ್ನು ಕಂಡು ಕುಟುಂಬಸ್ಥರು ಬೆಚ್ಚಿದ್ದಾರೆ. ವಾಮಾಚಾರದ ಮೂಲಕ ಹತ್ಯೆ ಮಾಡಿರುವ ಶಂಕೆಯನ್ನು ಕುಟುಂಬಸ್ಥರು ಮತ್ತು ಗ್ರಾಮಸ್ಥರು ಅನುಮಾನ ವ್ಯಕ್ತಪಡಿಸಿದ್ದಾರೆ.
ಅವಿವಾಹಿತನಾದ ಮೃತ ಗಣೇಶನ ತಂದೆ ಕಳೆದ ೩ ವರ್ಷಗಳ ಹಿಂದೆ ಪಾರ್ಶ್ವವಾಯುವಿನಿಂದ ಬಳಲಿ ಮೃತರಾಗಿದ್ದಾರೆ. ತಾಯಿ ನಾಗಮ್ಮ, ಸಹೋದರ ತೋಟೇಶ್ ಇದ್ದಾರೆ.ಈ ಬಗ್ಗೆ ಮೃತ ಗಣೇಶನ ಹಿರಿಯ ಸಹೋದರ ತೋಟೇಶ್ ಹೊನ್ನುಗುಂಡಿ ಪತ್ರಿಕೆಯೊಂದಿಗೆ ಮಾತನಾಡಿ, ಕಳೆದ ೫ ವರ್ಷಗಳಿಂದ ತಮ್ಮ ಸಹೋದರ ಗಣೇಶ್ ತಲೆ ನೋವು, ಮೈ, ಕೈ ಉರಿ ಎಂದು ತೊಳಲಾಡುತ್ತಿದ್ದ. ಶಿವಮೊಗ್ಗ ಮೆಗ್ಗಾನ್, ಬೆಂಗಳೂರು ವಿಕ್ಟೋರಿಯಾ, ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆ ಸೇರಿದಂತೆ ಹಲವೆಡೆ ತಜ್ಞ ವೈದ್ಯರಿಂದ ತಪಾಸಣೆ ನಡೆಸಿದರೂ ಯಾವುದೇ ಸಮಸ್ಯೆ ಇಲ್ಲ ಆರೋಗ್ಯವಾಗಿದ್ದಾರೆ ಎಂದು ತಿಳಿಸಿದ್ದಾರೆ. ಇದಕ್ಕಾಗಿ ಸುಮಾರು ೨೦ ಲಕ್ಷ ರು. ವಿನಿಯೋಗಿಸಲಾಗಿದೆ. ಹೀಗಿದ್ದೂ ಕೂಡಾ ಆಗಾಗ್ಗೆ ವಿಪರೀತ ತಲೆ ನೋವಿನಿಂದ ಬಳಲುತ್ತಿದ್ದ. ಕಳೆದ ಮೇ ೧೧ರಂದು ಮಾತು ಬಾರದೇ, ಕೈ, ಕಾಲು ಸ್ವಾಧೀನ ಕಳೆದುಕೊಂಡು ಮೃತಪಟ್ಟಿದ್ದಾನೆ. ಅವನ ಸಾವಿಗೆ ತಮಗಾಗದವರು ಮಾಡಿರುವ ಮಾಟ, ಮಂತ್ರವೇ ಕಾರಣ ಎಂದು ಅಂತ್ಯ ಸಂಸ್ಕಾರ ನಡೆದ ಸ್ಥಳದಲ್ಲಿ ನಡೆಸಿರುವ ವಾಮಾಚಾರವೇ ತಿಳಿಸುತ್ತದೆ ಎಂದು ತಿಳಿಸಿದ್ದಾರೆ.
ಇಂಥಹ ಘಟನೆಯಿಂದ ಇಡೀ ಗ್ರಾಮ ಭಯದ ವಾತಾವರಣದಲ್ಲಿದ್ದು, ಅಂತ್ಯಸಂಸ್ಕಾರ ನಡೆದ ಸ್ಥಳದಲ್ಲಿ ವಾಮಾಚಾರ ನಡೆಸಿದವರ ಬಗ್ಗೆ ತನಿಖೆ ನಡೆಸುವಂತೆ ತಹಸೀಲ್ದಾರ್ ಮತ್ತು ರಕ್ಷಣಾ ಇಲಾಖೆಗೆ ಮುಂದಿನ ದಿನಗಳಲ್ಲಿ ದೂರು ನೀಡಲಾಗುವುದು ಎಂದು ಕುಟುಂಬದವರು ಮತ್ತು ಕುಳವಳ್ಳಿ ಗ್ರಾಮಸ್ಥರು ತಿಳಿಸಿದ್ದಾರೆ.