ಸಾರಾಂಶ
ಸುರಪುರ : ತಾಲೂಕಿನ ಕೆಂಭಾವಿ ಪಟ್ಟಣದಲ್ಲಿ ನೂತನವಾಗಿ ನಿರ್ಮಾಣವಾದ ಉತ್ತರಾದಿಮಠದ ಯತಿ ಚತುಷ್ಠಯರ ವೃಂದಾವನ ಸನ್ನಿಧಾನದ ಪ್ರಮೋದ ಮಂದಿರ ಹಾಗೂ ದಿ. ಲಕ್ಷ್ಮಿದೇವಿ ವಾಮನರಾವ್ ದೇಶಪಾಂಡೆ ಅವರ ಸ್ಮರಣಾರ್ಥ ನಿರ್ಮಿಸಿದ ಸಭಾ ಭವನದ ಮೊದಲನೆ ಮಹಡಿಯನ್ನು ಉತ್ತರಾದಿ ಮಠಾಧೀಶ ಶ್ರೀ ಸತ್ಯಾತ್ಮತೀರ್ಥ ಮಹಾಸ್ವಾಮಿಗಳು ಉದ್ಘಾಟಿಸಿದರು.
ಮುಂಜಾನೆ ಪ್ರತಿಷ್ಠಾಪನಾ ಹೋಮದ ಪೂರ್ಣಾಹುತಿ ನೆರವೇರಿಸಿ ನಂತರ ಗರ್ಭ ಗುಡಿಯಲ್ಲಿ ಸತ್ಯನಾರಾಯಣ, ಸುಮಧ್ವ ಮಾರುತಿ, ಜಯತೀರ್ಥರು, ರಘೂತ್ತಮ ತೀರ್ಥರು, ರಾಘವೇಂದ್ರ ತೀರ್ಥರು ಹಾಗೂ ಸತ್ಯಪ್ರಮೋದ ತೀರ್ಥರ ಮೃತ್ತಿಕಾ ವೃಂದಾವನ ಪ್ರಾಣ ಪ್ರತಿಷ್ಠಾಪನೆಯನ್ನು ಸಕಲ ಧಾರ್ಮಿಕ ವಿಧಿ-ವಿಧಾನದ ಮೂಲಕ ನೆರವೇರಿಸಿದರು.ಪ್ರತಿಷ್ಠಾಪನಾ ಕಾರ್ಯ ನೆರವೇರಿಸಿದ ಸತ್ಯಾತ್ಮತೀರ್ಥ ಶ್ರೀಗಳು, ಸತ್ಯಂ ಪರಂ ಧೀಮಹಿ ಎಂಬ ಭಾಗವತದಲ್ಲಿ ತಿಳಿಸಿರುವಂತೆ ಸತ್ಯನಾಮಕನಾದ ಭಗವಂತನನ್ನು ನಾವು ನಿತ್ಯದಲ್ಲಿ ಭಕ್ತಿಯಿಂದ ಪೂಜೆ ಮಾಡಬೇಕು. ಜೀವನದ ಗುರಿ ತಲುಪಬೇಕಾದರೆ ವಿಶ್ವಾಸ ಮುಖ್ಯ. ವಿಶ್ವಾಸ ನಮ್ಮಲ್ಲಿ ಬರಬೇಕಾದರೆ ಭಗವಂತನಲ್ಲಿ ಅಚಲ ಭಕ್ತಿ ಮುಖ್ಯ ಭಕ್ತಿ ಬರಬೇಕಾದರೆ ಸಂಸ್ಕಾರ ಮುಖ್ಯ ನಾರಾಯಣ ಎಂದರೆ ಪರಿಪೂರ್ಣ ಗುಣಗಳಿಂದ ಕೂಡಿದವ, ಪರಮಾತ್ಮನಲ್ಲಿ ಸಾಕಷ್ಟು ಶಕ್ತಿ ಇದ್ದು, ಅಂಥ ಒಂದು ಶಕ್ತಿ ನಮ್ಮಲ್ಲಿ ಬರಬೇಕಾದರೆ ಬದುಕಿನಲ್ಲಿ ದಾನ, ಧರ್ಮ, ಪರೋಪಕಾರಗಳನ್ನು ಮಾಡಬೇಕು ಎಂದರು. ಮಣ್ಣೂರ ವೇದೇಶತೀರ್ಥ ವಿದ್ಯಾಪೀಠದ ಕುಲಪತಿ ಪಂ. ಅನಂತಾಚಾರ್ಯ ಅಕಮಂಚಿ ಅವರ ನೇತೃತ್ವದಲ್ಲಿ ಪಂ. ಸರ್ವೇಶಾಚಾರ್ಯರು ಸೇರಿ ಹಲವು ವಿದ್ವಾಂಸರು ಮತ್ತು ಋತ್ವಿಜರು ಸತ್ಯನಾರಾಯಣ, ಸುಮಧ್ವ ಮಾರುತಿ ಹಾಗೂ ಯತಿ ಚತುಷ್ಠಯರ ಮೃತ್ತಿಕಾ ವೃಂದಾವನ ಪ್ರತಿಷ್ಠಾಪನೆಯ ಪೂಜಾ ಕೈಂಕರ್ಯ ನೆರವೇರಿಸಿದರು. ನಂತರ ಸತ್ಯಾತ್ಮತೀರ್ಥರಿಂದ ದೇವರ ವಿಗ್ರಹಗಳಿಗೆ ಹಾಗೂ ಯತಿ ಚತುಷ್ಠಯರ ವೃಂದವನಕ್ಕೆ ಪಂಚಾಮೃತ ಅಭಿಷೇಕ ಅಲಂಕಾರ, ಸಂಸ್ಥಾನ ಪೂಜೆ, ಮುದ್ರಾಧಾರಣೆ, ತೀರ್ಥ ಪ್ರಸಾದ, ಅನೇಕ ಭಕ್ತರಿಗೆ ಮತ್ತು ದಾನಿಗಳಿಗೆ ಶ್ರೀಗಳಿಂದ ಫಲಮಂತ್ರಾಕ್ಷತೆ ಸೇರಿದಂತೆ ಹಲವು ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.
ಮಳಖೇಡ ಉತ್ತರಾದಿ ಮಠದ ವ್ಯವಸ್ಥಾಪಕ ಪಂ ವೆಂಕಣ್ಣಾಚಾರ್ಯ ಪೂಜಾರ, ಮಠಾಧಿಕಾರಿ ರಾಮಾಚಾರ್ಯ ಘಂಟಿ, ತಾಲೂಕಾ ಮಠಾಧಿಕಾರಿ ನಗರಾಜಾಚಾರ್ಯ ಪಾಲ್ಮೂರ, ತಿರುಮಲಾಚಾರ್ಯ ಜೋಷಿ, ವಾಮನರಾವ ದೇಶಪಾಂಡೆ, ಬಾಳಕೃಷ್ಣರಾವ ಕುಲಕರ್ಣಿ, ನರಸಿಂಹರಾವ ಕುಲಕರ್ಣಿ, ಹಣಮಂತರಾವ ಕುಲಕರ್ಣಿ, ಮಲ್ಲಾರಾವ ಕುಲಕರ್ಣಿ, ಹಳ್ಳೇರಾವ ಕುಲಕರ್ಣಿ, ಜಯಸತ್ಯಪ್ರಮೋದ ಸೇವಾ ಸಂಘ, ಶ್ರೀ ಸತ್ಯಪ್ರಮೋದ ಯುವ ಸೇನೆ ಹಾಗೂ ಪ್ರಮೋದನಿ ಮಹಿಳಾ ಭಜನಾ ಮಂಡಳಿಯ ಸದಸ್ಯರು ಇದ್ದರು.