ತೆಂಗು ಬೆಳೆಗಳಿಗೆ ಸಕಾಲದಲ್ಲಿ ಪೋಷಕಾಂಶಗಳ ನಿರ್ವಹಣೆ ಮಾಡಿ: ಹನುಮೇಗೌಡ

| Published : Feb 17 2025, 12:33 AM IST

ತೆಂಗು ಬೆಳೆಗಳಿಗೆ ಸಕಾಲದಲ್ಲಿ ಪೋಷಕಾಂಶಗಳ ನಿರ್ವಹಣೆ ಮಾಡಿ: ಹನುಮೇಗೌಡ
Share this Article
  • FB
  • TW
  • Linkdin
  • Email

ಸಾರಾಂಶ

ತೆಂಗು ಅಭಿವೃದ್ಧಿ ಮಂಡಳಿ ತೆಂಗಿನ ಬೆಳೆಗಳಿಗೆ ಸಮಗ್ರ ಪೋಷಕಾಂಶ ನಿರ್ವಹಣೆ ಮತ್ತು ಕೀಟಗಳ ಹಾವಳಿ ತಡೆಗಟ್ಟುವ ಬಗ್ಗೆ ರೈತರಲ್ಲಿ ಜಾಗೃತಿ ಮೂಡಿಸುವ ಕಾರ್ಯಾಗಾರ ಹಮ್ಮಿಕೊಂಡ ನಂತರ ಬೆಳೆ ರಕ್ಷಣೆಯೊಂದಿಗೆ ತೆಂಗಿನ ಬೆಳೆಗೆ ಉತ್ತಮ ಬೆಲೆ ಬರುವಂತಾಗಿದೆ.

ಕನ್ನಡಪ್ರಭ ವಾರ್ತೆ ಮದ್ದೂರು

ರೈತರು ತೆಂಗು ಬೆಳೆಗಳಿಗೆ ಸಕಾಲದಲ್ಲಿ ಪೋಷಕಾಂಶಗಳ ನಿರ್ವಹಣೆ ಮಾಡದಿದ್ದಲ್ಲಿ ಇಳುವರಿ ಕುಂಠಿತಗೊಳ್ಳುವ ಸಾಧ್ಯತೆ ಹೆಚ್ಚಾಗಿದೆ ಎಂದು ತೆಂಗು ಅಭಿವೃದ್ಧಿ ಮಂಡಳಿ ಮುಖ್ಯಾಧಿಕಾರಿ ಹನುಮೇಗೌಡ ಎಚ್ಚರಿಸಿದರು.

ಪಟ್ಟಣದ ಎಪಿಎಂಸಿ ಎಳನೀರು ಮಾರುಕಟ್ಟೆ ಪ್ರಾಂಗಣದಲ್ಲಿ ತೆಂಗು ಅಭಿವೃದ್ಧಿ ಮಂಡಳಿ ಹಾಗೂ ತೋಟಗಾರಿಕೆ ಇಲಾಖೆ ಸಹಯೋಗದಲ್ಲಿ ನಡೆದ ಸಿಡಿಬಿ ತೆಂಗು ಸುರಕ್ಷಾ ಯೋಜನೆ ಅಡಿ ವಿಮಾ ಸೌಲಭ್ಯಕ್ಕೆ ಚಾಲನೆ ನೀಡಿ ಮಾತನಾಡಿ, ಕೃಷಿಕರು ತೆಂಗು ಬೆಳೆಗಳಿಗೆ ಸಮಗ್ರವಾಗಿ ಪೋಷಕಾಂಶ, ಕೀಟ ರೋಗ ನಿಯಂತ್ರಣ ಹಾಗೂ ನೀರು ನಿರ್ವಹಣೆ ಪದ್ಧತಿ ಅನುಸರಿಸಬೇಕು. ಇದರಿಂದ ತೆಂಗು ಮರಗಳ ರಕ್ಷಣೆ, ಸಾಧ್ಯವಾಗುತ್ತದೆ ಎಂದರು.

ಕಳೆದ ಹತ್ತು ಹದಿನೈದು ವರ್ಷಗಳ ಹಿಂದಿನ ತೆಂಗಿನ ಉತ್ಪಾದನೆ ಅವಲೋಕನ ಮಾಡಿದರೆ ತೆಂಗಿನಕಾಯಿಗಳ ಬೆಲೆ ಕಡಿಮೆ ಇತ್ತು. ನಂತರ ವರ್ಷಗಳಲ್ಲಿ ಎಳನೀರು ಮತ್ತು ತೆಂಗಿನ ಕಾಯಿಗಳಿಗೆ ಉತ್ತಮ ಬೆಲೆ ಬಂದಿದೆ ಎಂದರು.

ತೆಂಗು ಅಭಿವೃದ್ಧಿ ಮಂಡಳಿ ತೆಂಗಿನ ಬೆಳೆಗಳಿಗೆ ಸಮಗ್ರ ಪೋಷಕಾಂಶ ನಿರ್ವಹಣೆ ಮತ್ತು ಕೀಟಗಳ ಹಾವಳಿ ತಡೆಗಟ್ಟುವ ಬಗ್ಗೆ ರೈತರಲ್ಲಿ ಜಾಗೃತಿ ಮೂಡಿಸುವ ಕಾರ್ಯಾಗಾರ ಹಮ್ಮಿಕೊಂಡ ನಂತರ ಬೆಳೆ ರಕ್ಷಣೆಯೊಂದಿಗೆ ತೆಂಗಿನ ಬೆಳೆಗೆ ಉತ್ತಮ ಬೆಲೆ ಬರುವಂತಾಗಿದೆ ಎಂದರು.

ತೆಂಗಿನ ತಂತ್ರಜ್ಞಾನ ಅಭಿಯಾನ, ಸಂರಕ್ಷಣೆ ಮಾಡುವುದು, ತೆಂಗಿನ ಸಸಿಗಳ ಉತ್ಪಾದನೆ ಮತ್ತು ವಿತರಣೆ ಸೇರಿದಂತೆ ಅನೇಕ ಕಾರ್ಯಕ್ರಮ ಹಮ್ಮಿಕೊಂಡ ನಂತರ ರೈತರು ಆಸಕ್ತಿವಹಿಸಿ ತೆಂಗು ಬೆಳೆಗಳ ರಕ್ಷಣೆಗೆ ಮುಂದಾಗಿದ್ದಾರೆ ಎಂದರು.

ಎಪಿಎಂಸಿ ವರ್ತಕರ ಸಂಘದ ಅಧ್ಯಕ್ಷ ಸಿ.ಎಚ್.ರವಿ ಚನ್ನಸಂದ್ರ ಮಾತನಾಡಿ, ಮುಂದಿನ ದಿನಗಳಲ್ಲಿ ತೆಂಗಿನ ಉತ್ಪಾದನೆ ಕುಂಠಿತಗೊಂಡಲ್ಲಿ, ಬೆಳೆಗಳನ್ನು ನಂಬಿಕೊಂಡು ಜೀವನ ನಡೆಸುತ್ತಿರುವ ಸಾವಿರಾರು ಮಂದಿ ರೈತರು ಮತ್ತು ವ್ಯಾಪಾರಿಗಳು ನಿರುದ್ಯೋಗಿಗಳಾಗುವ ಸಾಧ್ಯತೆ ಇದೆ. ರೈತರು ತೆಂಗಿನ ಮರಗಳ ರಕ್ಷಣೆಗೆ ಹೆಚ್ಚು ಒತ್ತು ನೀಡಬೇಕು ಎಂದರು.

ಕಾರ್ಯಕ್ರಮದಲ್ಲಿ ತೆಂಗು ಅಭಿವೃದ್ಧಿ ಮಂಡಳಿ ಉಪ ನಿರ್ದೇಶಕಿ ರಿಚಿ, ಜಯನ್ ಸಾತ್, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕಿ ರೂಪಶ್ರೀ, ಹಿರಿಯ ತೋಟಗಾರಿಕೆ ನಿರ್ದೇಶಕಿ ರೇಖಾ, ಎಪಿಎಂಸಿ ಮಾರುಕಟ್ಟೆ ಕಾರ್ಯದರ್ಶಿ ಆರ್.ಲತಾಕುಮಾರಿ, ವರ್ತಕರ ಸಂಘದ ಉಪಾಧ್ಯಕ್ಷ ಉಮೇಶ, ನಿರ್ದೇಶಕ ಶಿವಣ್ಣ, ತೋಟಗಾರಿಕೆ ಸಹಾಯಕಿ ಪದ್ಮ, ಸಿಬ್ಬಂದಿ ಭಾಗವಹಿಸಿದ್ದರು.