ವಚನ ಮತ್ತು ಕಾಯಕದ ಮಹತ್ವ ತಿಳಿಸಿದ ಮಾಚಿದೇವ

| Published : Feb 02 2025, 11:46 PM IST

ಸಾರಾಂಶ

ಶರಣರ ವಚನಗಳು ಮನುಷ್ಯನ ಬದುಕಿಗೆ ಜೀವನ ಪಾಠಗಳಿದ್ದಂತೆ ಹಾಗಾಗಿ ವಚನಗಳು ಸಾರ್ವಕಾಲಿಕ ಮಹತ್ವ ಪಡೆದುಕೊಂಡಿವೆ ಎಂದು ತಹಸೀಲ್ದಾರ್ ಎನ್.ಎ.ಕುಂಞ ಅಹಮದ್ ಹೇಳಿದರು.

ಕನ್ನಡಪ್ರಭ ವಾರ್ತೆ ತುರುವೇಕೆರೆ

ಶರಣರ ವಚನಗಳು ಮನುಷ್ಯನ ಬದುಕಿಗೆ ಜೀವನ ಪಾಠಗಳಿದ್ದಂತೆ ಹಾಗಾಗಿ ವಚನಗಳು ಸಾರ್ವಕಾಲಿಕ ಮಹತ್ವ ಪಡೆದುಕೊಂಡಿವೆ ಎಂದು ತಹಸೀಲ್ದಾರ್ ಎನ್.ಎ.ಕುಂಞ ಅಹಮದ್ ಹೇಳಿದರು.ಪಟ್ಟಣದ ತಾಲೂಕು ಕಚೇರಿಯಲ್ಲಿ ತಾಲೂಕು ಆಡಳಿತ ಹಾಗೂ ತಾಲೂಕು ಮಡಿವಾಳ ಮಾಚಿದೇವರ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಮಡಿವಾಳ ಮಾಚಿದೇವರ ಜಯಂತಿಯಲ್ಲಿ ಭಾಗವಹಿಸಿ ಮಾತನಾಡಿದ ಅವರು, 12 ನೇ ಶತಮಾನದಲ್ಲಿ ಬಸವಣ್ಣನವರು, ಮಡಿವಾಳ ಮಾಚಿದೇವರು ಸೇರಿದಂತೆ ಹಲವು ಮಹನೀಯರು ಜನರಿಗೆ ತಮ್ಮ ನುಡಿಗಳ ಮೂಲಕ ವಚನ ಮತ್ತು ಕಾಯಕದ ಮಹತ್ವ ತಿಳಿಸಿದರು ಎಂದರು. ಬಸವಣ್ಣನವರು ಸಮಾಜದಲ್ಲಿ ನೊಂದವರಿಗೆ, ಅಸಹಾಯಕರಿಗೆ, ದೀನ ದಲಿತರಿಗೆ ಶರಣ ತತ್ವ ಭೋದಿಸಿ ಸಮಷ್ಟಿ ಪ್ರಜ್ಞೆಗೆ ಸಾಮಾಜಿಕ ವ್ಯವಸ್ಥೆಯನ್ನು ತರುವ ಪ್ರಯತ್ನ ಮಾಡಿದರು. ಅದರ ಫಲವಾಗಿಯೇ ಸಮಾಜದಲ್ಲಿದ್ದ ಮೇಲು ಕೀಳು, ಶೋಷಣೆ ಸಾಮಾಜಿಕ, ಆರ್ಥಿಕ ಮತ್ತು ಧಾರ್ಮಿಕ ಅಸಮಾನತೆಯನ್ನು ಹೋಗಲಾಡಿಸಲು ಕಲ್ಯಾಣದಲ್ಲಿ ಸಾಮಾಜಿಕ ಕ್ರಾಂತಿ ನಡೆಸಿದರು ಎಂದರು.ದೈಹಿಕ ಶುಚಿತ್ವಕ್ಕಿಂತಲೂ ಅಂತರಂಗದ ಪರಿಶುದ್ಧತೆಯೇ ಮುಖ್ಯವೆಂದು ತಮ್ಮ ವಚನಗಳ ಮೂಲಕ ಮಡಿವಾಳ ಮಾಚಿದೇವ ಅವರು ಸಾರಿ ಹೇಳಿದರು. ತಮ್ಮ ನಿಸ್ವಾರ್ಥ ಕಾಯಕದ ಮೂಲಕ ಆತ್ಮ ಸಂತೃಪ್ತಿ ಅವರು ಕಂಡಿದ್ದಾರೆ ಎಂದರು.ಈ ಸಂದರ್ಭದಲ್ಲಿ ಮಡಿವಾಳ ಮಾಚೀದೇವ ಸಂಘದ ತಾಲೂಕು ಗೌರವಾಧ್ಯಕ್ಷ ಚಂದ್ರಯ್ಯ, ತಾಲೂಕು ಅಧ್ಯಕ್ಷ ಹನುಮಂತಪ್ಪ, ಉಪಾಧ್ಯಕ್ಷ ಮಲ್ಲೇಶಪ್ಪ, ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ್‌, ಖಜಾಂಚಿ ರೇಣುಕಪ್ಪ, ಮಹಿಳಾ ಘಟಕದ ಅಧ್ಯಕ್ಷೆ ಜಯಂತಿ ಪ್ರಕಾಶ್‌, ಉಪಾಧ್ಯಕ್ಷೆ ಮಮತಾ ದೇವರಾಜು, ಕಾರ್ಯದರ್ಶಿ ಮಂಜುಳಾ ಪುಟ್ಟರಾಜು, ಖಜಾಂಚಿ ಗೀತಾ ಗೋವಿಂದಪ್ಪ, ತಾಲೂಕು ಕಚೇರಿ ಸಿಬ್ಬಂದಿ ವತ್ಸಲಾ ಮತ್ತು ಸಮುದಾಯದ ಮುಖಂಡರು ಭಾಗವಹಿಸಿದ್ದರು.