ಸಾರಾಂಶ
ಕೊಡಗು ಪ್ರಯಾಣ ಅನುಭವಗಳಿಗಾಗಿ ವಿಶ್ವಾಸಾರ್ಹ ಮೂಲ- ಪ್ರವಾಸೋದ್ಯಮ ಇಲಾಖೆಯ ಅಧಿಕೃತ ವೆಬ್‌ಸೈಟ್ explorekodagu.com ನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಶುಕ್ರವಾರ ಬಿಡುಗಡೆ ಮಾಡಿದರು.
ಕನ್ನಡಪ್ರಭ ವಾರ್ತೆ ಮಡಿಕೇರಿ
ಕೊಡಗು ಪ್ರಯಾಣ ಅನುಭವಗಳಿಗಾಗಿ ವಿಶ್ವಾಸಾರ್ಹ ಮೂಲ- ಪ್ರವಾಸೋದ್ಯಮ ಇಲಾಖೆಯ ಅಧಿಕೃತ ವೆಬ್‌ಸೈಟ್ explorekodagu.com ನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಶುಕ್ರವಾರ ಬಿಡುಗಡೆ ಮಾಡಿದರು. ಈ ವೆಬ್‌ಸೈಟ್‌ನಲ್ಲಿ ಕೊಡಗಿನ ಸುಂದರ ಪ್ರವಾಸಿ ತಾಣಗಳನ್ನು ಅತ್ಯುತ್ತಮವಾಗಿ ಪ್ರದರ್ಶಿಸಲು ಮೀಸಲಾಗಿರುವ ಸಮಗ್ರ ಆನ್‌ಲೈನ್ ವೇದಿಕೆಯಾಗಿದೆ. ಜಿಲ್ಲೆಗೆ ಭೇಟಿ ನೀಡುವ ಪ್ರವಾಸಿಗರಿಗೆ ಉತ್ತಮ ಗುಣಮಟ್ಟದ, ವಿಶ್ವಾಸಾರ್ಹ ಪ್ರಯಾಣ ಅನುಭವವನ್ನು ಖಚಿತಪಡಿಸಿಕೊಳ್ಳಲು ವೆಬ್‌ಸೈಟ್‌ನಲ್ಲಿ ಅಧಿಕೃತವಾಗಿ ನೋಂದಾಯಿತ ಮತ್ತು ಪ್ರಮಾಣೀಕೃತ ಹೋಂಸ್ಟೇಗಳು, ರೆಸಾರ್ಟ್‌ಗಳು, ರೆಸ್ಟೋರೆಂಟ್‌ಗಳು, ಪ್ರವಾಸಿ ಮಾರ್ಗದರ್ಶಿಗಳು, ಟ್ಯಾಕ್ಸಿ ನಿರ್ವಾಹಕರು ಮತ್ತು ಜಿಲ್ಲೆಯ ಅಧಿಕೃತ ಕಾರ್ಯ ಕ್ರಮಗಳನ್ನು ಮಾತ್ರ ಪಟ್ಟಿ ಮಾಡಲಾಗಿದೆ. FSSAI ಪ್ರಮಾಣೀಕೃತ ರೆಸ್ಟೋರೆಂಟ್‌ಗಳು: ಜಿಲ್ಲೆಗೆ ಭೇಟಿ ನೀಡುವ ಪ್ರವಾಸಿಗರಿಗೆ ಆಹಾರ ಸುರಕ್ಷತೆ ಮತ್ತು ಗುಣಮಟ್ಟವನ್ನು ಖಚಿತಪಡಿಸಿಕೊಳ್ಳಲು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ ಪ್ರಮಾಣೀಕರಿಸಿದ ರೆಸ್ಟೋರೆಂಟ್‌ಗಳ ವಿವರವನ್ನು ನೀಡಲಾಗಿದೆ.ಅನುಮೋದಿತ ಪ್ರವಾಸಗಳು: ಪ್ರವಾಸೋದ್ಯಮ ನೀತಿ 2025- 29ರ ಅಡಿಯಲ್ಲಿ ಪ್ರವಾಸೋದ್ಯಮ ಇಲಾಖೆಯಿಂದ ಗುರುತಿಸಲ್ಪಟ್ಟ 778 ಪ್ರವಾಸಿ ತಾಣಗಳಲ್ಲಿ ಕೊಡಗು ಜಿಲ್ಲೆಯಲ್ಲಿ ಗುರುತಿಸಿದ 23 ಪ್ರವಾಸಿ ತಾಣಗಳನ್ನು ಹಾಗೂ ಜಿಲ್ಲಾಧಿಕಾರಿಗಳು ಹಾಗೂ ಅಧ್ಯಕ್ಷರು, ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ, ಕೊಡಗು ಜಿಲ್ಲೆಯ ಮುಖಾಂತರ ಗುರುತಿಸಿರುವ ಪ್ರವಾಸಿ ತಾಣಗಳನ್ನು ಮಾತ್ರ ಪಟ್ಟಿ ಮಾಡಲಾಗಿದೆ.
ಪ್ರವಾಸಿ ಮಾಹಿತಿ: explorekodagu.com ಅಧಿಕೃತ ವೆಬ್‌ಸೈಟ್ ಕೊಡಗು ಜಿಲ್ಲೆಯಲ್ಲಿ ಭೇಟಿ ನೀಡಬೇಕಾದ ಪ್ರವಾಸಿ ತಾಣಗಳ ಬಗ್ಗೆ ಅಮೂಲ್ಯವಾದ ಮಾಹಿತಿಯನ್ನು ನೀಡುತ್ತದೆ. ಪ್ರಯಾಣಿಕರು ತಮ್ಮ ಪ್ರವಾಸವನ್ನು ಆಯೋಜಿಸಲು ಅಗತ್ಯವಿರುವ ಎಲ್ಲ ವಿವರಗಳನ್ನು ಈ ವೆಬ್‌ಸೈಟ್ ನೀಡುತ್ತದೆ.