ನಾಡಿನ ಕೇಂದ್ರ ಬಿಂದು ದಾವಣಗೆರೆಯಲ್ಲಿ ಶ್ರೀ ಶರಣ ಆದಿಜಾಂಬವ ಮಾದಿಗ ಮಹಾಸಂಸ್ಥಾನ ಮಠದ ಸ್ಥಾಪನೆ ಕುರಿತಂತೆ ಫೆ.10ರಂದು ನಗರದ ಶ್ರೀ ಶಿವಯೋಗಿ ಮಂದಿರದಲ್ಲಿ ಸಮಾಜದ ಪೂರ್ವಭಾವಿ ಸಭೆ ನಡೆಯಲಿದೆ ಎಂದು ಮಾದಿಗ ಮಹಾಸಭಾ ಜಿಲ್ಲಾಧ್ಯಕ್ಷ ಬಿ.ಎಚ್. ವೀರಭದ್ರಪ್ಪ ಹೇಳಿದ್ದಾರೆ.

- ದಾವಣಗೆರೆ ಅಥವಾ ಹರಿಹರದಲ್ಲಿ ಪೀಠ ಸ್ಥಾಪನೆ ಬಗ್ಗೆ ಚರ್ಚೆ: ಬಿ.ಎಚ್.ವೀರಭದ್ರಪ್ಪ - - -

ಕನ್ನಡಪ್ರಭ ವಾರ್ತೆ ದಾವಣಗೆರೆ

ನಾಡಿನ ಕೇಂದ್ರ ಬಿಂದು ದಾವಣಗೆರೆಯಲ್ಲಿ ಶ್ರೀ ಶರಣ ಆದಿಜಾಂಬವ ಮಾದಿಗ ಮಹಾಸಂಸ್ಥಾನ ಮಠದ ಸ್ಥಾಪನೆ ಕುರಿತಂತೆ ಫೆ.10ರಂದು ನಗರದ ಶ್ರೀ ಶಿವಯೋಗಿ ಮಂದಿರದಲ್ಲಿ ಸಮಾಜದ ಪೂರ್ವಭಾವಿ ಸಭೆ ನಡೆಯಲಿದೆ ಎಂದು ಮಾದಿಗ ಮಹಾಸಭಾ ಜಿಲ್ಲಾಧ್ಯಕ್ಷ ಬಿ.ಎಚ್. ವೀರಭದ್ರಪ್ಪ ಹೇಳಿದರು.

ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳಗ್ಗೆ 11 ಗಂಟೆಗೆ ಚಿತ್ರದುರ್ಗ ಶ್ರೀ ಮಾದಾರ ಚನ್ನಯ್ಯ ಸ್ವಾಮೀಜಿ, ಕೋಡಿಹಳ್ಳಿ ಪೀಠದ ಶ್ರೀ ಷಡಕ್ಷರಿ ಮುನಿ ಸ್ವಾಮೀಜಿ ಸಾನ್ನಿಧ್ಯದಲ್ಲಿ ಸಮಾಜದ ಮುಖಂಡರು, ಗಣ್ಯರು ಅಂದಿನ ಸಭೆಯಲ್ಲಿ ಶಾಖಾ ಮಠದ ಸ್ಥಾಪನೆ, ಮರಿಗಳನ್ನು ಬಿಡುವ ಬಗ್ಗೆ ಚರ್ಚಿಸಲಿದ್ದಾರೆ ಎಂದರು.

ಅನಾದಿಯಿಂದಲೂ ಶೋಷಣೆಗೆ ಒಳಗಾಗುತ್ತಾ ಬಂದ ಮಾದಿಗ ಸಮಾಜದಲ್ಲಿ ಶಿಕ್ಷಣ ಮಹತ್ವ ಸೇರಿದಂತೆ ಜಾಗೃತಿ ಮೂಡಿಸಲು ಸಮಾಜದ ಕೇರಿ ಕೇರಿಗಳಲ್ಲಿ ಸುತ್ತಾಡಿ, ಸಮಾಜವನ್ನು ಸಂಘಟಿಸುವ, ಸಮಾಜ ಬಾಂಧವರಿಗೆ ಶಿಕ್ಷಣದ ಮಹತ್ವ ತಿಳಿಸುವ ಮೂಲಕ ಸಮಾಜವನ್ನು ಶೈಕ್ಷಣಿಕವಾಗಿಯೂ ಮುಖ್ಯವಾಹಿನಿಗೆ ತರುವಂತಹ ಗುರುಗಳ ಆಯ್ಕೆಗೆ ಮಹಾಸಭಾ ಒತ್ತು ನೀಡಿದೆ. ಈ ನಿಟ್ಟಿನಲ್ಲಿ ದಾವಣಗೆರೆ ಅಥವಾ ಹರಿಹರದಲ್ಲಿ ಶಾಖಾ ಮಠ ಸ್ಥಾಪಿಸುವ ಉದ್ದೇಶವಿದೆ ಎಂದರು.

ದಾವಣಗೆರೆ ಶ್ರೀ ಶಿವಯೋಗಿ ಮಂದಿರದಲ್ಲಿ ನಡೆಯುವ ಸಮಾಜದ ಸಭೆಯಲ್ಲಿ ಎಲ್ಲರೂ ಒಮ್ಮತದ ತೀರ್ಮಾನ ಕೈಗೊಂಡು, ನಾಲ್ಕು ಕಡೆ ನೋಡಿರುವ ಮರಿಗಳ ಪೈಕಿ ಓರ್ವರನ್ನು ಆಯ್ಕೆ ಮಾಡಲಾಗುವುದು. ಆಯ್ಕೆ ಆಗುವಂತಹ ಮರಿಗೆ ಕಾಶಿಗೆ ಒಂದು ವರ್ಷದ ಕಾಲ ಅಧ್ಯಯನಕ್ಕಾಗಿ ಕಳಿಸಲಾಗುವುದು ಎಂದು ತಿಳಿಸಿದರು.

ಹಿರಿಯೂರು, ಚಿತ್ರದುರ್ಗ, ಅರಣಿ ಹಾಗೂ ಆಂಧ್ರದ ಕಡಪದಲ್ಲಿರುವ ಸಮಾಜದ ಮಠಗಳಲ್ಲಿರುವ ಸಮಾಜದ ಯಾರಾದರೂ ಒಬ್ಬರನ್ನು ಶಾಖಾ ಮಠಕ್ಕೆ ಸ್ವಾಮೀಜಿಯಾಗಿ ಮಾಡಲಾಗುವುದು. ಕಾಶಿಯಲ್ಲಿ ಒಂದು ವರ್ಷ ಅಧ್ಯಯನ ಮುಗಿಸಿಕೊಂಡು ಸ್ವಾಮೀಜಿ ದಾವಣಗೆರೆಗೆ ವಾಪಸ್‌ ಬರುವಷ್ಟರಲ್ಲೇ ಶ್ರೀಪೀಠವನ್ನು ಸ್ಥಾಪಿಸಲಾಗುವುದು. ತಾತ್ಕಾಲಿಕವಾಗಿ ಶ್ರೀ ಶಿವಯೋಗಿ ಮಂದಿರ ಅಥವಾ ವಿರಕ್ತ ಮಠದಲ್ಲಿ ಸ್ವಾಮೀಜಿ ಇರುವಂತೆ ವ್ಯವಸ್ಥೆ ಕಲ್ಪಿಸುತ್ತೇವೆ. ಶಾಖಾ ಮಠ ಸ್ಥಾಪನೆಯಿಂದ ಉತ್ತರ ಕರ್ನಾಟಕ, ಹೈದ್ರಾಬಾದ್ ಕರ್ನಾಟಕ, ಮಲೆನಾಡು ಭಾಗದ ಸಮಾಜ ಬಾಂಧವರಿಗೂ ಅನುಕೂಲ ಆಗುತ್ತದೆ ಎಂದು ಬಿ.ಎಚ್.ವೀರಭದ್ರಪ್ಪ ಹೇಳಿದರು.

ಮಹಾಸಭಾ ಗೌರವಾಧ್ಯಕ್ಷ, ನಿವೃತ್ತ ಪೊಲೀಸ್ ಅಧೀಕ್ಷಕ ರವಿನಾರಾಯಣ ಮಾತನಾಡಿ, ಮುಂದೆ ಗುರಿ, ಹಿಂದೆ ಗುರು ಇಲ್ಲದ್ದು, ಅನೇಕ ಕಾರಣಗಳಿಂದಾಗಿ ಒಡೆದು ಹೋಗಿದ್ದ ಮಾದಿಗ ಸಮಾಜವನ್ನು ಒಗ್ಗೂಡಿಸುವ ಮತ್ತು ಸಮಾಜ ಬಾಂಧವರಲ್ಲಿ ಶಿಕ್ಷಣದ ಮಹತ್ವ ತಿಳಿಸಿ, ಜಾಗೃತಿಗೊಳಿಸುವ ಉದ್ದೇಶದಿಂದ ಶಾಖಾ ಮಠ ಸ್ಥಾಪಿಸಲಾಗುವುದು. ಸ್ವಾಮೀಜಿಯಾದವರು ಐಷಾರಾಮಿ ಜೀವನದಿಂದ ದೂರ ಇರಬೇಕು. ರಾಜಕೀಯ ಹೊರತಾಗಿರಬೇಕು ಎಂದರು.

ಖುದ್ದಾಗಿ ಸ್ವಾಮೀಜಿಯವರೇ ನಮ್ಮ ಸಮಾಜದ ಕೇರಿ ಕೇರಿಗಳಲ್ಲಿ ಸಾಗಿ, ಸಮಾಜದ ಬಗ್ಗೆ ಜಾಗೃತಿ ಮೂಡಿಸುವ, ಸಂಘಟಿಸುವ ಕೆಲಸ ಮಾಡಬೇಕು. ಅತಿ ಮುಖ್ಯವಾಗಿ ಶಿಕ್ಷಣದ ಅಗತ್ಯತೆ, ಅನಿವಾರ್ಯತೆ ತಿಳಿಸುವ ಕೆಲಸ ಮಾಡಬೇಕು. ಜನ ಮತ್ತು ಜನಾಂಗದ ಬಗ್ಗೆ ಮಾತ್ರ ಸ್ವಾಮೀಜಿ ಗಮನಹರಿಸಬೇಕು. ಅಂತಹ ಸ್ವಾಮೀಜಿಯನ್ನೇ ಮಹಾಸಭಾ ಹಾಗೂ ಸಮಾಜ ಆಯ್ಕೆ ಮಾಡಬೇಕೆಂಬುದು ನಮ್ಮೆಲ್ಲರ ಗುರಿ, ಉದ್ದೇಶವೂ ಆಗಿದೆ ಎಂದು ಸ್ಪಷ್ಪಪಡಿಸಿದರು.

ಮಹಾಸಭಾದ ಉಪಾಧ್ಯಕ್ಷರಾದ ಎಲ್.ಎಂ.ಹನುಮಂತಪ್ಪ, ಕೆ.ಚಂದ್ರಪ್ಪ ಪೇಪರ್, ಶೇಖರಪ್ಪ, ಆರ್.ಸುರೇಶ ಕುಣಬೆಳಕೆರೆ, ಎಲ್.ಡಿ.ಗೋಣೆಪ್ಪ, ಪ್ರಧಾನ ಕಾರ್ಯದರ್ಶಿ ಹೆಗ್ಗೆರೆ ರಂಗಪ್ಪ, ಖಜಾಂಚಿ ಎಸ್.ಮಲ್ಲಿಕಾರ್ಜುನ, ಸಿ.ಬಸವರಾಜ, ಕಡತಿ ಅಂಜಿನಪ್ಪ, ಜಿ.ರಾಜೇಶ, ಟಿ.ರುದ್ರೇಶ ಗುತ್ತಿದುರ್ಗ, ನಲ್ಲೂರು ಶೇಖರಪ್ಪ, ಜಗಳೂರು ಶಂಭುಲಿಂಗಪ್ಪ, ಕೋಗಲೂರು ಪ್ರಕಾಶ, ಮಂಜಪ್ಪ, ಪಿ.ರುದ್ರಪ್ಪ, ಗೋವಿಂದರಾಜ, ಮಂಜುನಾಥ, ಕಾರಿಗನೂರು ನಾಗರಾಜ, ಹರಿಹರ ಬೇವಿನಹಳ್ಳಿ ಶಿವರಾಂ, ದೇವೇಂದ್ರಪ್ಪ, ಗಾಂಧಿ ನಗರ ಸುರೇಶ, ನಾಗರಾಜ ಇತರರು ಇದ್ದರು.

- - -

-1ಕೆಡಿವಿಜಿ5: ದಾವಣಗೆರೆಯಲ್ಲಿ ಭಾನುವಾರ ಜಿಲ್ಲಾ ಮಾದಿಗ ಮಹಾಸಭಾ ಜಿಲ್ಲಾಧ್ಯಕ್ಷ ಬಿ.ಎಚ್.ವೀರಭದ್ರಪ್ಪ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. , ಗೌರವಾಧ್ಯಕ್ಷ, ನಿವೃತ್ತ ಎಸ್ಪಿ ರವಿನಾರಾಯಣ ಇತರರು ಇದ್ದರು.