ಡೀಸೆಲ್​ ದರ ಏರಿಕೆ ಹಾಗೂ ನಿರ್ವಹಣಾ ವೆಚ್ಚಗಳು ಹೆಚ್ಚಾಗಿರುವುದರಿಂದ ರಾಜ್ಯಾದ್ಯಂತ ಚಾಲನೆಯಲ್ಲಿರುವ ಎಲ್ಲಾ ಖಾಸಗಿ ಮಜಲು ವಾಹನ (ಡೇ ಸರ್ವಿಸ್​) ಬಸ್​ಗಳ ಪ್ರಯಾಣ ದರವನ್ನು ಶೇ.3 ರಿಂದ 8ರವರೆಗೆ ಪರಿಷ್ಕರಿಸಿ ಮಂಗಳವಾರದಿಂದ (ಜೂ.9) ಹೊಸ ದರ ಜಾರಿಗೆ ತರಲಾಗುತ್ತಿದೆ

 ಉಡುಪಿ : ಡೀಸೆಲ್​ ದರ ಏರಿಕೆ ಹಾಗೂ ನಿರ್ವಹಣಾ ವೆಚ್ಚಗಳು ಹೆಚ್ಚಾಗಿರುವುದರಿಂದ ರಾಜ್ಯಾದ್ಯಂತ ಚಾಲನೆಯಲ್ಲಿರುವ ಎಲ್ಲಾ ಖಾಸಗಿ ಮಜಲು ವಾಹನ (ಡೇ ಸರ್ವಿಸ್​) ಬಸ್​ಗಳ ಪ್ರಯಾಣ ದರವನ್ನು ಶೇ.3 ರಿಂದ 8ರವರೆಗೆ ಪರಿಷ್ಕರಿಸಿ ಮಂಗಳವಾರದಿಂದ (ಜೂ.9) ಹೊಸ ದರ ಜಾರಿಗೆ ತರಲಾಗುತ್ತಿದೆ ಎಂದು ರಾಜ್ಯ ಖಾಸಗಿ ಬಸ್​ ಮಾಲೀಕರ ಸಂಘಗಳ ಒಕ್ಕೂಟದ ಅಧ್ಯಕ್ಷ ಕುಯಿಲಾಡಿ ಸುರೇಶ್​ ನಾಯಕ್​ ತಿಳಿಸಿದರು.

ರಾಜ್ಯಾದ್ಯಂತ 5300 ಬಸ್​ಗಳು ಒಕ್ಕೂಟದ ವ್ಯಾಪ್ತಿಯಲ್ಲಿ

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯಾದ್ಯಂತ 5300 ಬಸ್​ಗಳು ಒಕ್ಕೂಟದ ವ್ಯಾಪ್ತಿಯಲ್ಲಿದ್ದು, ರಾಜ್ಯ ಸರ್ಕಾರ ಒಂದು ವರ್ಷದ ಹಿಂದೆ 3 ರು. ಹಾಗೂ ಕೇಂದ್ರ ಸರ್ಕಾರ 4 ಬಾರಿ 8.17 ರು. ಡೀಸೆಲ್​ ದರ ಏರಿಕೆ ಮಾಡಿದೆ. ವಾಹನದ ಬಿಡಿ ಭಾಗಗಳ ದರ, ಟೈರ್​,ಟೈರ್​ ರಿಸೋಲಿಂಗ್​ ದರ, ಟೋಲ್​ ದರ, ನೌಕರರ ವೇತನ, ಸರ್ಕಾರದ ತೆರಿಗೆ ಸಹಿತ ದೈನಂದಿನ ವೆಚ್ಚಗಳಲ್ಲಿ ತೀವ್ರ ಏರಿಕೆಯಾಗಿರುವುದರಿಂದ ಬಸ್​ ಟಿಕೆಟ್​ ದರ ಹೆಚ್ಚಿಸಲು ಅನಿವಾರ್ಯವಾಗಿ ನಿರ್ಧರಿಸಲಾಗಿದೆ ಎಂದರು. ಶಾಲಾ ವಿದ್ಯಾರ್ಥಿಗಳಿಗೆ ಮುಂಚಿತವಾಗಿ ಸಿಗುತ್ತಿದ್ದ ರಿಯಾಯಿತಿ ಮುಂದುವರಿಯಲಿದೆ ಎಂದು ಮಾಹಿತಿ ನೀಡಿದರು.

 ಪ್ರತಿ ಕಿ.ಮೀ.ಗೆ ಕನಿಷ್ಟ 0.25 ಪೈಸೆಯವರೆಗೆ ಸೆಸ್

ರಾಜ್ಯ ಸರ್ಕಾರದ ಅಧಿಸೂಚನೆ ಪ್ರಕಾರ ಪ್ರತಿ ಪ್ರಯಾಣಿಕರಿಗೆ 4 ಪೈಸೆಯಂತೆ ಪ್ರತಿ ಕಿ.ಮೀ.ಗೆ ಕನಿಷ್ಟ 0.25 ಪೈಸೆಯವರೆಗೆ ಸೆಸ್​ ಹಾಕಲು ಅವಕಾಶವಿದ್ದು, ಹಾಲಿ ದರದ ಮೇಲೆ ಶೇ.3ರಿಂದ 8ರವರೆಗೆ ದರ ಪರಿಷ್ಕರಣೆ ಮಾಡಲಾಗಿದೆ ಎಂದರು.