ಕನ್ನಡಪ್ರಭ ವಾರ್ತೆ ಮಳವಳ್ಳಿ

ಪಟ್ಟಣದ ಕನಕಪುರ ರಸ್ತೆಯ ಕೀರ್ತಿನಗರದ ಸ.ನಂ.509ರಲ್ಲಿ 2.17.08 ಎಕರೆ ವಿಸ್ತೀರ್ಣದ ಶ್ರೀಲಕ್ಷ್ಮಿನರಸಿಂಹ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘಕ್ಕೆ ಸೇರಿರುವ ಜಾಗದಲ್ಲಿ ಒತ್ತುವರಿಯಾಗಿದ್ದ ಸುಮಾರು 31 ಗುಂಟೆ ಜಾಗವನ್ನು ಮಂಗಳವಾರ ಮರುವಶಕ್ಕೆ ಪಡೆಯಲಾಯಿತು.

ಸಂಘಕ್ಕೆ ಸೇರಿದ ಪಟ್ಟಣದ ಕನಕಪುರ ರಸ್ತೆಯ ಕೀರ್ತಿನಗರದ ಸ.ನಂ.509ರಲ್ಲಿ 2.17.08 ಎಕರೆ ವಿಸ್ತೀರ್ಣದ ಜಾಗವಿತ್ತು. ಅದರಲ್ಲಿ ಸುಮಾರು 31 ಗುಂಟೆ ಜಾಗ ಒತ್ತುವರಿಯಾಗಿತ್ತು. ಈ ಸಂಬಂಧ ಕಳೆದ ಹಲವು ವರ್ಷಗಳಿಂದ ಒತ್ತುವರಿದಾರರು ಹಾಗೂ ಸಂಘದ ಅಧಿಕಾರಿಗಳ ನಡುವೆ ಕಾನೂನು ಹೋರಾಟ ನಡೆಯುತ್ತಿತ್ತು.

ಮಂಡ್ಯದ ಉಪ ವಿಭಾಗಾಧಿಕಾರಿಗಳ ನ್ಯಾಯಾಲಯದ ಆದೇಶದ ಮೇರೆಗೆ ವೃತ್ತ ಮೇಲ್ವಿಚಾರಕ ವಿ.ಪಿ.ಉಮೇಶ್ ಮತ್ತು ಕಾರ್ಯನಿರ್ವಾಹಕ ಅಧಿಕಾರಿ ಎಂ.ಎಚ್.ಪ್ರೇಮಕುಮಾರಿ ಅವರು ಸಂಘದ ಆಸ್ತಿಯ ಉಳಿವಿಗಾಗಿ ನಡೆಸಿದ ಪ್ರಯತ್ನದ ಫಲವಾಗಿ ಮಂಗಳವಾರ ತಹಸಿಲ್ದಾರ್ ಎಸ್.ವಿ.ಲೋಕೇಶ್ ಅವರ ಆದೇಶದ ಮೇರೆಗೆ ಪೊಲೀಸ್ ರಕ್ಷಣೆಯೊಂದಿಗೆ ಕಂದಾಯ ನಿರೀಕ್ಷಕ ಚೇತನ್ ನೇತೃತ್ವದಲ್ಲಿ ತಾಲೂಕು ಭೂಮಾಪಕ ಬೀರೇಶ್ ಅವರು ಸರ್ವೆ ಕಾರ್ಯ ನಡೆಸಿ ಒತ್ತುವರಿಯಾಗಿದ್ದ ಸುಮಾರು 31ಗುಂಟೆ ಜಾಗವನ್ನು ಸಂಘದ ವಶಕ್ಕೆ ಪಡೆದುಕೊಂಡರು.

ವೃತ್ತ ಮೇಲ್ವಿಚಾರಕ ವಿ.ಪಿ.ಉಮೇಶ್ ಹಾಗೂ ಸಂಘದ ಸಿಇಒ ಎಂ.ಎಚ್.ಪ್ರೇಮಕುಮಾರಿ ಮಾತನಾಡಿ, ಒತ್ತುವರಿಯಾಗಿದ್ದ ಜಾಗವನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ವಾಣಿಜ್ಯ ಉದ್ದೇಶಕ್ಕೆ ಬಳಸಲಾಗುವುದು ಎಂದು ಹೇಳಿದರು.


ಇದೇ ವೇಳೆ ಅಧಿಕಾರಿಗಳ ಸಮ್ಮುಖದಲ್ಲಿ ಒತ್ತುವರಿ ತೆರವುಗೊಳಿಸಿದ ಜಾಗಕ್ಕೆ ಇದು ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಆಸ್ತಿ ಎಂದು ನಾಮಫಲಕ ಹಾಕಲಾಯಿತು.