ಕನ್ನಡಪ್ರಭ ವಾರ್ತೆ ಹನೂರು

ಲಾರಿ ಚಾಲಕನೊಂದಿಗೆ ಅಸಭ್ಯವಾಗಿ ವರ್ತಿಸಿ ಹಣಕ್ಕೆ ಬೇಡಿಕೆ ಇಟ್ಟ ಆರೋಪದ ಹಿನ್ನೆಲೆಯಲ್ಲಿ ಮಲೆ ಮಹದೇಶ್ವರ ಬೆಟ್ಟ ಪೊಲೀಸ್ ಠಾಣೆಯ ಮುಖ್ಯಪೇದೆ ಸಿದ್ದರಾಜು ಅವರನ್ನು ಕೊಳ್ಳೇಗಾಲ ಉಪ ವಿಭಾಗದ ಡಿವೈಎಸ್ಪಿ ಮೋಹನ್ ಅವರು ಅಮಾನತುಗೊಳಿಸಿದ್ದಾರೆ.ಘಟನೆಯು ಹನೂರು ತಾಲೂಕಿನ ಪಾಲಾರ್‌ ಚೆಕ್‌ಪೋಸ್ಟ್‌ನಲ್ಲಿ ನಡೆದಿದ್ದು, ಜೋಳ ತುಂಬಿಕೊಂಡು ತಮಿಳುನಾಡಿಗೆ ತೆರಳುತ್ತಿದ್ದ ಲಾರಿ ಚಾಲಕನಿಂದ ಸಿದ್ದರಾಜು ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಚಾಲಕ ನೀಡಿದ 50 ರುಪಾಯಿಯನ್ನು ನಿರಾಕರಿಸಿ 200 ರು. ನೀಡಬೇಕು. ಇಲ್ಲದಿದ್ದರೆ ಲಾರಿ ಬಿಡುವುದಿಲ್ಲ ಎಂದು ಧಮ್ಕಿ ಹಾಕಿದ್ದಾರೆ ಎನ್ನಲಾಗಿದೆ.ಈ ವೇಳೆ ನಡೆದ ವಾಗ್ವಾದವನ್ನು ಲಾರಿ ಚಾಲಕ ಸುಲ್ತಾನ್ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ವಿಡಿಯೋ ಆಧರಿಸಿ ಕ್ರಮ ಕೈಗೊಂಡ ಡಿವೈಎಸ್ಪಿ ಮೋಹನ್ ಅವರು ಕರ್ತವ್ಯ ಲೋಪ ಹಾಗೂ ಅಸಭ್ಯ ವರ್ತನೆ ಹಿನ್ನೆಲೆಯಲ್ಲಿ ಮುಖ್ಯಪೇದೆ ಸಿದ್ದರಾಜು ಅವರನ್ನು ಅಮಾನತುಗೊಳಿಸಿದ್ದಾರೆ.