ಕನ್ನಡಪ್ರಭ ವಾರ್ತೆ ಹರಿಹರ

ಆಳ್ವಿಕರ ಗದ್ದುಗೆಯು ಜನರ ಅಜ್ಞಾನದ ಮೇಲೆ ನಿಂತಿದೆ ಎಂಬ ಮಾತಿನಂತೆ ಎಲ್ಲ ಕಾಲಕ್ಕೂ ಆಳ್ವಿಕರು ಜನರನ್ನು ಅಜ್ಞಾನಿಗಳನ್ನಾಗಿ ಮಾಡಲು ಯತ್ನಿಸಿದ್ದಾರೆ ಎಂದು ಎಐಡಿಎಸ್ಒ ಜಿಲ್ಲಾ ಅಧ್ಯಕ್ಷೆ ಪೂಜಾ ನಂದಿಹಳ್ಳಿ ಬೇಸರ ವ್ಯಕ್ತಪಡಿಸಿದರು.

ಹರಿಹರ ತಾಲೂಕಿನ ಸಲಗನಹಳ್ಳಿ ಮತ್ತು ಷಂಶಿಪುರ ಗ್ರಾಮದಲ್ಲಿ ಗುರುವಾರ ಕೆಪಿಎಸ್ ಮ್ಯಾಗ್ನೆಟ್ ಯೋಜನೆ ಹೆಸರಲ್ಲಿ ಊರಿನ ಶಾಲೆ ಮುಚ್ಚುವುದನ್ನು ವಿರೋಧಿಸಿ ಗ್ರಾಮಸ್ಥರು ಎಐಡಿಎಸ್‌ಒ ನೇತೃತ್ವದಲ್ಲಿ ನಡೆಸಿದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.

ಷಂಶಿಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ 80 ವರ್ಷಗಳು ತುಂಬಿವೆ. ಶಾಲೆಯ ಅಮೃತ ಮಹೋತ್ಸವದ ಹಿನ್ನೆಲೆಯಿಂದ ಸರ್ಕಾರವು ಶಾಲೆಗೆ ಅಭಿವೃದ್ಧಿಯ ಕೊಡುಗೆ ನೀಡಬೇಕಿತ್ತು. ಆದರೆ ಅದಕ್ಕೆ ವಿರುದ್ಧವಾಗಿ ಕೆಪಿಎಸ್ ಮ್ಯಾಗ್ನೆಟ್ ಯೋಜನೆ ಹೆಸರಲ್ಲಿ ಊರಿನ ಶಾಲೆಯನ್ನು ಮುಚ್ಚಲಾಗುತ್ತಿದೆ. ಈ ನಡೆ ಸರಿಯಲ್ಲ ಎಂದು ಕಿಡಿಕಾರಿದರು.

ಊರಿನಲ್ಲಿ ಶಾಲೆಗಳಿದ್ದರೆ, ಬಡಮಕ್ಕಳು ಜ್ಞಾನಾರ್ಜನೆ ಮಾಡುತ್ತಾರೆ. ಪ್ರಪಂಚವನ್ನು ವಸ್ತುನಿಷ್ಠವಾಗಿ ಅರಿಯುವ ಸಾಮರ್ಥ್ಯವನ್ನು ಗಳಿಸಿ, ಸಮಸ್ಯೆಗಳನ್ನು ಕಂಡಾಗ ಸರ್ಕಾರಗಳನ್ನು ಪ್ರಶ್ನೆ ಮಾಡುತ್ತಾರೆ. ಈ ಪ್ರಶ್ನೆಗಳಿಗೆ ಸರ್ಕಾರವು ಹೆದರುತ್ತಿದೆ. ಸರ್ಕಾರಗಳ ಅನ್ಯಾಯದ ವಿರುದ್ಧ ಇಂದಿನ ಮಕ್ಕಳು ನಾಳೆ ಹೋರಾಟ ಹೂಡುತ್ತಾರೆ ಎಂದು ಸರ್ಕಾರವು ಭಯಗ್ರಸ್ತವಾಗಿದೆ. ಈ ಭಯದಿಂದ ಊರಿನ ಶಾಲೆಗಳನ್ನು ಮುಚ್ಚಿ ಬಡಮಕ್ಕಳನ್ನು ಅಜ್ಞಾನಕ್ಕೆ ತಳ್ಳುವ ಕುಕೃತ್ಯಕ್ಕೆ ಸರ್ಕಾರ ಮುಂದಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.


ಸಲಗನಹಳ್ಳಿಯಲ್ಲಿ ಸಾರ್ವಜನಿಕ ಶಿಕ್ಷಣ ಉಳಿಸಿ ಸಮಿತಿ ಸದಸ್ಯ ಅನಿಲ್ ಮಾತನಾಡಿ, ರಾಜ್ಯ ಸರ್ಕಾರವು ಕೆಪಿಎಸ್ ಮ್ಯಾಗ್ನೆಟ್ ಯೋಜನೆಯಡಿ 40,000ಕ್ಕೂ ಅಧಿಕ ಸರ್ಕಾರಿ ಶಾಲೆಗಳನ್ನು ಮುಚ್ಚಿ ಕೇವಲ ಗ್ರಾಮ ಪಂಚಾಯಿತಿ ಒಂದರಂತೆ 6,000 ಮ್ಯಾಗ್ನೆಟ್ ಶಾಲೆಗಳನ್ನು ಹೊಸದಾಗಿ ಕಟ್ಟಲಾಗುತ್ತಿದೆ. ಈಗ ಇರುವ ಶಾಲೆಗಳ ಅಭಿವೃದ್ಧಿಗೆ ಮ್ಯಾಗ್ನೆಟ್ ಯೋಜನೆಯ ಹಣವನ್ನು ಬಳಸಬಾರದೆಂದು ಕಟ್ಟುನಿಟ್ಟಿನ ಆದೇಶ ಹೊರಡಿಸಲಾಗಿದೆ. ಜೀವ ಕೊಟ್ಟಾದರೂ ಸರಿ ಊರಿನ ಶಾಲೆಗಳನ್ನು ಉಳಿಸಿಕೊಳ್ಳಬೇಕು ಎಂದು ತಿಳಿಸಿದರು.

ಷಂಶಿಪುರದ ಮಾಜಿ ಗ್ರಾಮ ಪಂಚಾಯಿತಿ ಸದಸ್ಯ ರೇವಣಸಿದ್ದಪ್ಪ ಎಸ್.ಜಿ., ಮಾತನಾಡಿ, ಶಾಲೆ ಮುಚ್ಚಿದರೆ ನಮ್ಮ ಮಕ್ಕಳು ಶಿಕ್ಷಣದ ಅವಕಾಶದಿಂದ ವಂಚಿತರಾಗುತ್ತಾರೆ. ಆದ್ದರಿಂದ ನಾವೆಲ್ಲ ಒಂದಾಗಿ ಕೆಪಿಎಸ್ ಮ್ಯಾಗ್ನೆಟ್ ಯೋಜನೆ ವಿರುದ್ಧ ಹೋರಾಡಬೇಕು ಎಂದು ಮನವಿ ಮಾಡಿದರು.

ಸಲಗನಹಳ್ಳಿ ಮಾಜಿ ಗ್ರಾಪಂ ಸದಸ್ಯ ವಿಜಯಕುಮಾರ ಮಾತನಾಡಿ, ನಮ್ಮೂರ ಶಾಲೆ ನಮ್ಮ ಹಕ್ಕು ಯಾವುದೇ ಕಾರಣಕ್ಕೂ ಮುಚ್ಚಲು ಬಿಡುವುದಿಲ್ಲ. ನಮಗೆ ಯಾವ ಬಸ್ಸು ಬೇಡ, ಕಂಪ್ಯೂಟರ್ ಬೇಡ, ನಮ್ಮೂರ ಶಾಲೆ ನಮ್ಮಲ್ಲೇ ಉಳಿಯಲಿ. ಕೆಪಿಎಸ್ ಮ್ಯಾಗ್ನೆಟ್ ಯೋಜನೆ ರದ್ದಾಗುವವರೆಗೂ ಹಂತ ಹಂತವಾಗಿ ಹೋರಾಟವನ್ನು ಮುಂದುವರಿಸಬೇಕೆಂದು ಗ್ರಾಮಸ್ಥರು ನಿರ್ಧರಿಸಿದ್ದಾರೆ ಎಂದರು.

ಸಲಗನಹಳ್ಳಿ ಅಧ್ಯಕ್ಷ ವಿಜಯ ಕುಮಾರ, ಕಾರ್ಯದರ್ಶಿ ಬಸವರಾಜ ಹಾಗೂ ಷಂಶಿಪುರ ಅಧ್ಯಕ್ಷ ರೇವಣಸಿದ್ದಪ್ಪ ಎಸ್ ಜಿ, ಕಾರ್ಯದರ್ಶಿ ಕೆಂಚಮ್ಮ ರಾಜಪ್ಪ ಮರಾಠಿ ಹಾಗೂ ಎಸ್‌ಡಿಎಂಸಿ ಅಧ್ಯಕ್ಷ ಗುರುಮೂರ್ತಿ, ಗ್ರಾಮಸ್ಥರಾದ ಕಾಂತೇಶ ವೈಜಿ., ಚಂದ್ರಶೇಖರ್, ಮಹೇಂದ್ರಪ್ಪ, ಎಚ್.ಎಸ್. ಶ್ರಿನಿವಾಸ, ಪಿ.ಎನ್. ಮೌನೇಶ, ಲತಾ ಮತ್ತು ವಿದ್ಯಾರ್ಥಿಗಳ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.