ಕನ್ನಡಪ್ರಭ ವಾರ್ತೆ, ಗೌರಿಬಿದನೂರು.ತಾಲೂಕಿನ ಹೊಸೂರು ಸರ್ಕಾರಿ ಶಾಲೆಯನ್ನು ಈ ವರ್ಷ ಕೆ.ಪಿ.ಎಸ್. ಮ್ಯಾಗ್ನೆಟ್ ಶಾಲೆ ಮಾಡಲು ನಿರ್ಧರಿಸಿದ್ದು, ಸುತ್ತಲಿನ 8ಕ್ಕೂ ಹೆಚ್ಚು ಶಾಲೆಗಳು ವಿಲೀನಗೊಳ್ಳುವ ಸಾಧ್ಯತೆ ಇದೆ. ಇದನ್ನು ವಿರೋಧಿಸಿ ಮುದುಗೆರೆ, ಹಳೇ ಉಪ್ಪಾರಹಳ್ಳಿ, ರಂಗಪ್ಪನ ಪಾಳ್ಯ, ಗುರುಪನಹಳ್ಳಿ ಶಾಲೆಗಳನ್ನು ಉಳಿಸಿಕೊಳ್ಳಲು ಗ್ರಾಮಸ್ಥರು ಎ.ಐ.ಡಿ.ಎಸ್.ಓ.ನೇತೃತ್ವದಲ್ಲಿ ಪ್ರತಿಭಟನೆ ಮಾಡಿದರು.ಈ ಸಂದರ್ಭದಲ್ಲಿ ಎ.ಐ.ಡಿ.ಎಸ್.ಓ. ರಾಜ್ಯ ಸೆಕ್ರೆಟರಿ ಸದಸ್ಯರಾದ ತುಳಸಿ ಮಾತನಾಡಿ ಬಡಜನರ ಮಕ್ಕಳಿಗೆ ಶಿಕ್ಷಣ ಖಾತ್ರಿಪಡಿಸಬೇಕಿದ್ದ ಸರ್ಕಾರವೇ ಶಿಕ್ಷಣದ ವ್ಯಾಪಾರಕ್ಕೆ ನಿಂತಿದೆ. ಕೆಪಿಎಸ್ ಮ್ಯಾಗ್ನೆಟ್ ಯೋಜನೆ ಹೆಸರಲ್ಲಿ ಹಳ್ಳಿಯ ಶಾಲೆಗಳನ್ನು ಮುಚ್ಚುತ್ತಿದೆ. ಕೆಪಿಎಸ್ ಶಾಲೆಗಳ ಮೇಲುಸ್ತುವಾರಿಯನ್ನು ಹೊರಗುತ್ತಿಗೆ ಕೊಡುವುದರ ಮೂಲಕ ಸಾರ್ವಜನಿಕ ಶಿಕ್ಷಣವನ್ನು ಕಂಪನಿಗಳಿಗೆ ಹಂತ-ಹಂತವಾಗಿ ಖಾಸಗಿ ಕಂಪನಿಗಳಿಗೆ ಧಾರೆಯೆರೆಯುವ ಹುನ್ನಾರ ಮಾಡಲಾಗಿದೆ.
ಈಶ್ವರಚಂದ್ರ ವಿದ್ಯಾಸಾಗರ್, ಜ್ಯೋತಿಬಾಯಿಫುಲೆ. ಸಾವಿತ್ರಿಬಾಯಿಫುಲೆ, ಕುದ್ಮುಲ್ ರಂಗರಾವ್ ಮುಂತಾದವರ ಹೋರಾಟದಿಂದ ಇಂದು ನಮ್ಮ ನಾಡಿನ ಎಲ್ಲ ಮಕ್ಕಳಿಗೆ ಶಿಕ್ಷಣ ದೊರೆಯುತ್ತಿದೆ. ಈ ಮಹನೀಯರಿಗೆ ಅವಮಾನ ಮಾಡಿ ಸರ್ಕಾರವು ಶಾಲೆಗಳನ್ನು ಮುಚ್ಚುತ್ತಿದೆ. ಇಂತಹ ಶಾಲೆಗಳನ್ನು ಮುಚ್ಚುವುದು ಬಡಮಕ್ಕಳ ಭವಿಷ್ಯವನ್ನಷ್ಟೇ ಕತ್ತಲೆಗೆ ದೂಡಿದಂತೆ. ಅಲ್ಲದೇ ಸರ್ಕಾರದ ಈ ನೀತಿಯು ಕಡು ಜನವಿರೋಧಿಯಾಗಿದೆ. ರಾಮನಗರ ಮತ್ತು ಅರಸೀಕೆರೆ ತಾಲೂಕುಗಳಲ್ಲಿ ಶಾಲೆ ಮುಚ್ಚಲು ಊರಿನ ಜನರಿಗೆ ಮೋಸ ಮಾಡಿ ಒಪ್ಪಿಗೆ ಪತ್ರಕ್ಕೆ ಸಹಿ ಮಾಡಿಸಲಾಗಿದೆ. ಈ ಕುರಿತು ಗ್ರಾಮಸ್ಥರು ಎಚ್ಚರವಾಗಿರಬೇಕು. ಸರ್ಕಾರದ ಮೋಸಗಳಿಗೆ ಬಲಿಯಾಗದೇ ಊರಿನ ಶಾಲೆ ಉಳಿಸಲು ಹೋರಾಡಬೇಕು ಎಂದು ಕರೆ ನೀಡಿದರು.ಸರ್ಕಾರಿ ಶಾಲೆ ವಿಲೀನವನ್ನು ಈ ಕೂಡಲೇ ಕೈಬಿಡಬೇಕು ಇದು ಮಕ್ಕಳ ಭವಿಷ್ಯಕ್ಕೆ ಮಾರಕವಾಗಿದೆ. ಸರ್ಕಾರಿ ಶಾಲೆಗಳಿಗೆ ಅವಶ್ಯಕ ಮೂಲಭೂತ ಸೌಕರ್ಯಗಳನ್ನು ಒದಗಿಸಿ ಶಿಕ್ಷಕರ ನೇಮಕ ಮಾಡಬೇಕು.ಸರ್ಕಾರಿ ಶಾಲೆಯನ್ನು ಸಮಾಧಿ ಮಾಡುವುದನ್ನು ನಿಲ್ಲಿಸಬೇಕು ಎಂದು ಸಾರ್ವಜನಿಕ ಶಿಕ್ಷಣ ಉಳಿಸಿ ಜಿಲ್ಲಾ ಸಮಿತಿ ಉಪಾಧ್ಯಕ್ಷ ಹನುಮೇಶ ಹೇಳಿದರು.ಸಾರ್ವಜನಿಕ ಶಿಕ್ಷಣ ಉಳಿಸಿ ಸಮಿತಿಯ ಕೃಷ್ಣ ಮಾತನಾಡಿ ಸರ್ಕಾರಿ ಶಾಲೆ ಮುಚ್ಚಲು ಇಂದು ಎಲ್ಲಾ ರಾಜಕೀಯ ಪಕ್ಷಗಳು ಒಂದಾಗಿವೆ. ಅವರ ಮಕ್ಕಳಿಗೆ ಸರ್ಕಾರಿ ಶಾಲೆಯ ಅವಶ್ಯಕತೆ ಇಲ್ಲ, ಆದರೆ ಸಾವಿರಾರು ಬಡ ರೈತ ಕೂಲಿ ಕಾರ್ಮಿಕರ ಮಕ್ಕಳಿಗೆ ಸರ್ಕಾರಿ ಶಾಲೆಗಳು ಉಳಿಯಬೇಕು. ಇಡೀ ಕರ್ನಾಟಕದ ಜನತೆ ಈ ಯೋಜನೆಯ ವಿರುದ್ಧ ಒಗ್ಗಟ್ಟಾಗಿ ಹೋರಾಡಬೇಕು ಮತ್ತು ನಮ್ಮೂರ ಶಾಲೆ ಉಳಿಸಿಕೊಳ್ಳಲು ಕೊನೆವರೆಗೂ ಜೊತೆಯಾಗಿ ನಿಲ್ಲಬೇಕೆಂದು ಮನವಿ ಮಾಡುತ್ತೇನೆ ಎಂದರು.ಪ್ರತಿಭಟನೆಯಲ್ಲಿ ಎ.ಐ.ಡಿ.ಎಸ್.ಓ. ವಿದ್ಯಾರ್ಥಿ ಸಂಘಟನೆ ಪದಾಧಿಕಾರಿ ಕಿರಣ್ , ಸಾರ್ವಜನಿಕ ಶಿಕ್ಷಣ ಉಳಿಸಿ ಸಮಿತಿಯ ಸದಸ್ಯ ರಾಮ್ ಕುಮಾರ್ ಮತ್ತು ಮುದುಗೆರೆ, ಹಳೇ ಉಪ್ಪಾರಹಳ್ಳಿ, ರಂಗಪ್ಪನ ಪಾಳ್ಯ, ಗುರುಪನಹಳ್ಳಿಯ ವಿದ್ಯಾರ್ಥಿಗಳು, ಪೋಷಕರು, ಹಳೆ ವಿದ್ಯಾರ್ಥಿಗಳು ಮತ್ತು ಗ್ರಾಮಸ್ಥರು ಭಾಗವಹಿಸಿದ್ದರು.ಸರ್ಕಾರಿ ಶಾಲೆ ಉಳಿಸಿಕೊಳ್ಳಲು ಬೀದಿಗಿಳಿದ ಗ್ರಾಮಸ್ಥರು
ಬಡಜನರ ಮಕ್ಕಳಿಗೆ ಶಿಕ್ಷಣ ಖಾತ್ರಿಪಡಿಸಬೇಕಿದ್ದ ಸರ್ಕಾರವೇ ಶಿಕ್ಷಣದ ವ್ಯಾಪಾರಕ್ಕೆ ನಿಂತಿದೆ. ಕೆಪಿಎಸ್ ಮ್ಯಾಗ್ನೆಟ್ ಯೋಜನೆ ಹೆಸರಲ್ಲಿ ಹಳ್ಳಿಯ ಶಾಲೆಗಳನ್ನು ಮುಚ್ಚುತ್ತಿದೆ. ಕೆಪಿಎಸ್ ಶಾಲೆಗಳ ಮೇಲುಸ್ತುವಾರಿಯನ್ನು ಹೊರಗುತ್ತಿಗೆ ಕೊಡುವುದರ ಮೂಲಕ ಸಾರ್ವಜನಿಕ ಶಿಕ್ಷಣವನ್ನು ಕಂಪನಿಗಳಿಗೆ ಹಂತ-ಹಂತವಾಗಿ ಖಾಸಗಿ ಕಂಪನಿಗಳಿಗೆ ಧಾರೆಯೆರೆಯುವ ಹುನ್ನಾರ ಮಾಡಲಾಗಿದೆ.
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.