ಕನ್ನಡಪ್ರಭ ವಾರ್ತೆ ದಾವಣಗೆರೆ
ಜೂನ್ 5ರಂದು ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಪರಿಸರ ಸಂರಕ್ಷಣೆ ಮತ್ತು ಹಸಿರು ವಾತಾವರಣ ನಿರ್ಮಾಣದ ಉದ್ದೇಶದಿಂದ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸರ್ಕಾರಿ ಕಟ್ಟಡಗಳ ಆವರಣದಲ್ಲಿ ಸಸಿ ನೆಡುವ ಕಾರ್ಯಕ್ರಮದಡಿ ಗುರುವಾರ ಶಾಸಕ ಸಮರ್ಥ್ ಶಾಮನೂರು ಮಲ್ಲಿಕಾರ್ಜುನ್ ಸಸಿ ವಿತರಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ಈ ಸಂದರ್ಭ ಶಾಸಕರು ಮಾತನಾಡಿ, ವಿಶ್ವ ಪರಿಸರ ದಿನ ಅಂಗವಾಗಿ ಸಾಮಾಜಿಕ ಅರಣ್ಯ ಇಲಾಖೆ, ತೋಟಗಾರಿಕೆ ಇಲಾಖೆ ಹಾಗೂ ದಾವಣಗೆರೆ ಮಹಾನಗರ ಪಾಲಿಕೆ ಆಶ್ರಯದಲ್ಲಿ ದಾವಣಗೆರೆ ದಕ್ಷಿಣ ಕ್ಷೇತ್ರ ವ್ಯಾಪ್ತಿಯ ಸರ್ಕಾರಿ ಶಾಲೆಗಳು, ಕಾಲೇಜುಗಳು, ಆಸ್ಪತ್ರೆಗಳು, ಪಶು ಆಸ್ಪತ್ರೆಗಳು, ಗ್ರಾಮ ಪಂಚಾಯಿತಿಗಳು ಹಾಗೂ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಆವರಣಗಳಲ್ಲಿ ಸಸಿ ನೆಡುವ ಉದ್ದೇಶ ಹೊಂದಲಾಗಿದೆ. ಈ ಮೂಲಕ ಹಸಿರೀಕರಣಕ್ಕೆ ಮುಂದಾಗಿದ್ದೇವೆ ಎಂದು ತಿಳಿಸಿದರು.
"ಪ್ರಕೃತಿಯಿಂದ ಸ್ಫೂರ್ತಿ. ಹವಾಮಾನಕ್ಕಾಗಿ. ನಮ್ಮ ಭವಿಷ್ಯಕ್ಕಾಗಿ "2026ರ ವಿಶ್ವ ಪರಿಸರ ದಿನ ಎಂಬುದು ಧ್ಯೇಯವಾಕ್ಯವಾಗಿದೆ. ಈ ನಿಟ್ಟಿನಲ್ಲಿ ಕೇವಲ ಒಂದು ದಿನಕ್ಕೆ ಪರಿಸರ ದಿನ ಆಚರಣೆ ಸೀಮಿತಗೊಳಿಸದೇ ವರ್ಷವಿಡೀ ಹಸಿರೀಕರಣಕ್ಕೆ ಮುಂದಾಗಿ ವಿವಿಧ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ ಎಂದರು.ಸಾಮಾಜಿಕ ಅರಣ್ಯ ಇಲಾಖೆಯ ಡಿಸಿಎಫ್ ನವೀನ್ ಮಾತನಾಡಿ, ಪ್ರಕೃತಿಯನ್ನು ನಾವು ಕಾಪಾಡಿದರೆ ಪ್ರಕೃತಿ ನಮ್ಮನ್ನು ಕಾಪಾಡಲಿದೆ. ಇದನ್ನು ತಿಳಿದು ಪರಿಸರಕ್ಕೆ ಧಕ್ಕೆ ಆಗುವ ಯಾವುದೇ ಕೆಲಸ ಮಾಡದಂತೆ ಜಾಗೃತಿ ಮೂಡಿಸಬೇಕೆಂದು ಯುವಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಯೂಬ್ ಪೈಲ್ವಾನ್, ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಸಾಗರ್, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ವರುಣ್ ಬೆಣ್ಣೆಹಳ್ಳಿ, ಮಹಾನಗರ ಪಾಲಿಕೆ ಮಾಜಿ ಮಹಾಪೌರ ಚಮನ್ ಸಾಬ್, ಜಾಕೀರ್ ಅಲಿ, ಸೈಯದ್ ಚಾರ್ಲಿ, ಮೀನಾಕ್ಷಿ ಜಗದೀಶ್, ಕಾಂಗ್ರೆಸ್ ಮುಖಂಡ ಬೆಳ್ಳೂಡಿ ಬಸವರಾಜ, ದಾವಣಗೆರೆ ದಕ್ಷಿಣ ಕ್ಷೇತ್ರದ ಯುವ ಕಾಂಗ್ರೆಸ್ ಅಧ್ಯಕ್ಷ ಜಾಫರ್, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಕೃಷ್ಣಪ್ರಸಾದ್ ಸೇರಿದಂತೆ ದಕ್ಷಿಣ ಕ್ಷೇತ್ರ ವ್ಯಾಪ್ತಿಯ ಸರ್ಕಾರಿ ಶಾಲೆಗಳು, ಕಾಲೇಜುಗಳು, ಆಸ್ಪತ್ರೆಗಳು, ಪಶು ಆಸ್ಪತ್ರೆಗಳು, ಗ್ರಾಮ ಪಂಚಾಯಿತಿಗಳು ಹಾಗೂ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಮುಖ್ಯಸ್ಥರು, ಅಧಿಕಾರಿಗಳು ಭಾಗವಹಿಸಿದ್ದರು.