ಕನ್ನಡಪ್ರಭ ವಾರ್ತೆ ಕುಶಾಲನಗರ ಏ.01ರಿಂದ ಆರಂಭವಾಗಿರುವ ಜನಗಣತಿಯಲ್ಲಿ ಕೊಡಗು ಜಿಲ್ಲೆಯ ಸರ್ವ ನಾಗರಿಕರು ಕಡ್ಡಾಯವಾಗಿ ಪಾಲ್ಗೊಂಡು ಅಗತ್ಯ ಮಾಹಿತಿ‌ ನೀಡಿ ಸಹಕರಿಸುವಂತೆ ಶಾಸಕ ಡಾ.ಮಂತರ್ ಗೌಡ ಅವರು ಕೋರಿದ್ದಾರೆ.ಕುಶಾಲನಗರ ಪುರಸಭೆಯಲ್ಲಿ‌ ನಡೆದ ಸುದ್ದಿಗೋಷ್ಠಿಯಲ್ಲಿ‌ ಮಾತನಾಡಿದ ಅವರು, ಅಭಿವೃದ್ಧಿ ಯೋಜನೆಗಳ ಅನುಷ್ಠಾನಕ್ಕೆ ಗಣತಿ ಕಾರ್ಯ ಅತ್ಯಗತ್ಯ. ಈ ಹಿಂದೆ ರಾಜ್ಯ ಸರ್ಕಾರ ನಡೆಸಿದ ಜಾತಿ ಗಣತಿ ಜಿಲ್ಲೆಯಲ್ಲಿ ಅಲ್ಪ ಪ್ರಮಾಣದಲ್ಲಿ ಹಿನ್ನಡೆ ಉಂಟಾಗಿದೆ. ಮುಂದಿನ ದಿನಗಳಲ್ಲಿ ಕ್ಷೇತ್ರ ಪುನರ್ ವಿಂಗಡಣೆ,‌ ಮೀಸಲಾತಿ ನಿಗದಿ, ಎಸ್ಟಿಪಿ, ಟಿಎಸ್ಪಿ, ಇತರೆ ಅನುದಾನ ಮಂಜೂರಾತಿ ಸೇರಿದಂತೆ ಅಭಿವೃದ್ಧಿ ಯೋಜನೆಗಳ ಅನುಷ್ಠಾನಕ್ಕೆ ಗಣತಿ ಸಹಕಾರಿಯಾಗಲಿರುವ ಹಿನ್ನೆಲೆಯಲ್ಲಿ ಎಲ್ಲರೂ ಕಡ್ಡಾಯವಾಗಿ ಜನಗಣತಿಯಲ್ಲಿ ಭಾಗಿಯಾಗಬೇಕು. ಅದರಲ್ಲೂ ಜಿಲ್ಲೆಯಿಂದ ಹೊರಗಡೆ ನೆಲೆಸಿರುವವರು ಕೊಡಗಿನ‌ ಮೂಲ ವಿಳಾಸ ನೀಡಿ ಘೋಷಣೆ ಮಾಡಿಕೊಳ್ಳಬೇಕಿದೆ ಎಂದು ಮನವಿ ಮಾಡಿದರು.

ಕುಶಾಲನಗರ ತಾಲೂಕು ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಪಿ.ಶಶಿಧರ್ ಮಾತನಾಡಿದರು.ಇದೇ ಸಂದರ್ಭ ಜನಗಣತಿ ಕೈಪಿಡಿ‌ ಬಿಡುಗಡೆಗೊಳಿಸಲಾಯಿತು.

ಗೋಷ್ಠಿಯಲ್ಲಿ ಕುಶಾಲನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಪ್ರಮೋದ್ ಮುತ್ತಪ್ಪ, ತಹಸೀಲ್ದಾರ್ ಕಿರಣ್ ಜಿ ಗೌರಯ್ಯ, ತಾಪಂ ಕಾರ್ಯನಿರ್ವಹಣಾಧಿಕಾರಿ ಪರಮೇಶ್, ಆಡಳಿತಾಧಿಕಾರಿ ಅಬ್ದುಲ್ ನಭಿ, ಪುರಸಭೆ ಮುಖ್ಯಾಧಿಕಾರಿ ಗಿರೀಶ್ ಇದ್ದರು.