ಮಂಗಳೂರು ಬೆಂಗಳೂರು ನಡುವಣ ಸಂಪರ್ಕ ಸಾಧಿಸುವ ರಾಷ್ಟ್ರೀಯ ಹೆದ್ದಾರಿ ೭೫ರ ಚತುಷ್ಪಥ ಕಾಮಗಾರಿ ಅಂತಿಮ ಹಂತ ತಲುಪಿದ್ದು, ಹೆದ್ದಾರಿಯಲ್ಲಿನ ಊರುಗಳನ್ನು ನಮೂದಿಸುವ ನಾಮಫಲಕಗಳ ಅಳವಡಿಕೆಯ ವೇಳೆ ಉಪ್ಪಿನಂಗಡಿಯ ಹೆಸರು ಮರೆಯಾಗಿದ್ದು, ಬದಲಾದ ಬೌಗೋಳಿಕ ಸ್ಥಿತಿಗತಿಯ ನಡುವೆ ಉಪ್ಪಿನಂಗಡಿಗೆಂದು ಬಂದವರು ಉಪ್ಪಿನಂಗಡಿಯನ್ನು ದಾಟಿ ಹೋಗುವಂತಹ ಸ್ಥಿತಿ ನಿರ್ಮಾಣವಾಗಿದೆ.
ಉಪ್ಪಿನಂಗಡಿ: ಮಂಗಳೂರು ಬೆಂಗಳೂರು ನಡುವಣ ಸಂಪರ್ಕ ಸಾಧಿಸುವ ರಾಷ್ಟ್ರೀಯ ಹೆದ್ದಾರಿ ೭೫ರ ಚತುಷ್ಪಥ ಕಾಮಗಾರಿ ಅಂತಿಮ ಹಂತ ತಲುಪಿದ್ದು, ಹೆದ್ದಾರಿಯಲ್ಲಿನ ಊರುಗಳನ್ನು ನಮೂದಿಸುವ ನಾಮಫಲಕಗಳ ಅಳವಡಿಕೆಯ ವೇಳೆ ಉಪ್ಪಿನಂಗಡಿಯ ಹೆಸರು ಮರೆಯಾಗಿದ್ದು, ಬದಲಾದ ಬೌಗೋಳಿಕ ಸ್ಥಿತಿಗತಿಯ ನಡುವೆ ಉಪ್ಪಿನಂಗಡಿಗೆಂದು ಬಂದವರು ಉಪ್ಪಿನಂಗಡಿಯನ್ನು ದಾಟಿ ಹೋಗುವಂತಹ ಸ್ಥಿತಿ ನಿರ್ಮಾಣವಾಗಿದೆ.
ಆಂಗ್ಲಾಡಳಿತ ಕಾಲದಲ್ಲಿ ತಾಲೂಕು ಕೇಂದ್ರವಾಗಿದ್ದ ಉಪ್ಪಿನಂಗಡಿ ನೇತ್ರಾವತಿ ಹಾಗೂ ಕುಮಾರಧಾರ ನದಿಗಳ ಸಂಗಮ ತಾಣದಿಂದ ಪ್ರಸಿದ್ದವಾಗಿದ್ದು , ರಸ್ತೆಗಳಿಲ್ಲದ ಅಂದಿನ ಕಾಲಘಟ್ಟದಲ್ಲಿ ದೋಣಿ ಮೂಲಕ ನದಿ ಸಾರಿಗೆ ವ್ಯವಸ್ಥೆ ಚಾಲ್ತಿಯಲ್ಲಿದ್ದ ಆ ದಿನಗಳಲ್ಲಿ ಪ್ರಮುಖ ವ್ಯಾಪಾರಕೇಂದ್ರವಾಗಿಯೂ ಹೆಸರು ಪಡೆದಿತ್ತು. ಆದರೆ ಸತತ ಕಾಡಿದ ನೆರೆ ಯಿಂದಾಗಿ ದಾಖಲೆಗಳ ಸಂರಕ್ಷಣೆಯ ನೆಲೆಗಟ್ಟಿನಲ್ಲಿ ತಾಲೂಕು ಕೇಂದ್ರವನ್ನು ಪುತ್ತೂರಿಗೆ ಸ್ಥಳಾಂತರಿಸಲಾಗಿತ್ತು. ಆದಾಗ್ಯೂ ಪುತ್ತೂರು, ಬೆಳ್ತಂಗಡಿ, ಬಂಟ್ವಾಳ , ಕಡಬ ತಾಲೂಕುಗಳ ಹಲವು ಗ್ರಾಮಗಳಿಗೆ ಪ್ರಮುಖ ವ್ಯವಹಾರ ಕೇಂದ್ರವಾಗಿ ಉಪ್ಪಿನಂಗಡಿ ಇಂದಿಗೂ ಪ್ರಾಮುಖ್ಯತೆಯನ್ನು ಪಡೆದಿದೆ.ಧಾರ್ಮಿಕವಾಗಿಯೂ ಹಲವಾರು ಪುಣ್ಯ ಕ್ಷೇತ್ರಗಳ ಸಂಪರ್ಕ ಕೊಂಡಿಯಾಗಿ, ದಕ್ಷಿಣಕಾಶಿ ಎಂದೇ ಹೆಸರುವಾಸಿಯಾದ ಇಲ್ಲಿಗೆ ಗತಿಸಿದವರ ಮೋಕ್ಷ ಕಾರ್ಯಕ್ಕಾಗಿ ದಿನ ನಿತ್ಯ ಪರ ಊರಿನ ನೂರಾರು ಭಕ್ತರು ಆಗಮಿಸುತ್ತಿರುತ್ತಾರೆ. ಅಂತವರಿಗೆ ಪ್ರಸಕ್ತ ಅಗಲೀಕರಣಗೊಂಡ ಹೆದ್ದಾರಿಯಲ್ಲಿ ಉಪ್ಪಿನಂಗಡಿ ಎಂಬ ಊರು ಎಲ್ಲಿದೆ ಎನ್ನುವುದು ತಿಳಿಯದೆ ಹೆದ್ದಾರಿಯ ಎತ್ತರಿಸಿದ ರಸ್ತೆಯಲ್ಲಿ ಸಾಗಿ ಅನಗತ್ಯ ಸುತ್ತಾಟ ನಡೆಸುವಂತಾಗಿದೆ. ಈ ಗೊಂದಲವನ್ನು ತಪ್ಪಿಸುವ ಸಲುವಾಗಿ ಹೆದ್ದಾರಿಯ ಆಯಕಟ್ಟಿನ ಬಳಿ ಉಪ್ಪಿನಂಗಡಿಗೆ ಇರುವ ದೂರವನ್ನು ದಾಖಲಿಸುವುದು, ಹಾಗೂ ಉಪ್ಪಿನಂಗಡಿ ಪರಿಸರದಲ್ಲಿ ಉಪ್ಪಿನಂಗಡಿ ಎಂಬ ನಾಮ ಫಲಕವನ್ನು ಅಳವಡಿಸುವ ಕಾರ್ಯ ಮಾಡಬೇಕಾಗಿದೆ. ಈ ತನಕ ಹೆದ್ದಾರಿ ಇಲಾಖೆಯಿಂದ ಈ ಕಾರ್ಯ ನಡೆಯದೆ ಇರುವುದರಿಂದ ದೂರದ ಊರಿನ ಪ್ರಯಾಣಿಕರು ನಿತ್ಯ ಸಂಕಷ್ಠಕ್ಕೆ ತುತ್ತಾಗುತ್ತಿದ್ದಾರೆ. ಹೆದ್ದಾರಿಯಲ್ಲಿ ಸಿಗುವ ಪ್ರತಿ ಗ್ರಾಮಗಳನ್ನು ಗುರುತಿಸುವಂತೆ ಆಯಾ ಗ್ರಾಮಗಳ ಹೆಸರನ್ನು ದಾಖಲಿಸಲು ಹೆದ್ದಾರಿ ಇಲಾಖೆ ಮುಂದಾಗಬೇಕಾಗಿದೆ.