೪೫ ಭತ್ತದ ತಳಿಗಳು, ೩ ಹೈಬ್ರೀಡ್, ೫೦ ತಾಂತ್ರಿಕತೆಗಳು, ಕಬ್ಬಿನಲ್ಲಿ ೧೭ ತಳಿಗಳು, ೨೦ ತಂತ್ರಜ್ಞಾನಗಳು, ಮುಸುಕಿನ ಜೋಳದಲ್ಲಿ ೪ ತಳಿಗಳು, ಮೇವಿನ ಬೆಳೆಗಳಲ್ಲಿ ೪, ಸೂರ್ಯಕಾಂತಿ ಸಂಕರಣ ತಳಿ, ಚಾಮರಾಜನಗರದ ಕಪ್ಪು ಅರಿಶಿಣ ತಳಿಯ ಬೆಳೆಗಳನ್ನು ಅಭಿವೃದ್ಧಿಪಡಿಸಿ ಪ್ರದರ್ಶನಕ್ಕೆ ಇಡಲಾಗಿತ್ತು.

ಕನ್ನಡಪ್ರಭ ವಾರ್ತೆ ಮಂಡ್ಯ

ಕೃಷಿ ವಿಶ್ವವಿದ್ಯಾನಿಲಯದ ವತಿಯಿಂದ ಮೊದಲ ಬಾರಿಗೆ ಆಯೋಜಿಸಿರುವ ಕೃಷಿ ಮೇಳ ಹಲವು ವಿಶೇಷತೆಗಳನ್ನು ಒಳಗೊಂಡು ಎಲ್ಲರ ಗಮನಸೆಳೆಯುತ್ತಿದೆ. ವಿವಿಧ ಬೆಳೆಗಳಿಗೆ ಹರಡಬಹುದಾದ ಕೀಟಗಳ ಕಲಾಕೃತಿಗಳನ್ನು ಪ್ರದರ್ಶಿಸಿ ವಿಸ್ಮಯಕಾರಿ ಕೀಟ ಪ್ರಪಂಚ ಸೃಷ್ಟಿ, ಒಂದೇ ಗಿಡದಲ್ಲಿ ಕಸಿ ಮಾಡಿ ಬೆಳೆದ ಬದನೆಕಾಯಿ ಮತ್ತು ಟಮೋಟೋ, ಗುಜರಾತ್‌ನ ಹಲವು ದೇಶಿ ತಳಿ ಗೋವುಗಳ ಪ್ರದರ್ಶನ ಹೀಗೆ ಕೃಷಿ ಮೇಳ ಹಲವು ವೈಶಿಷ್ಟ್ಯತೆಗಳನ್ನು ತುಂಬಿಕೊಂಡಿತ್ತು.

೪೫ ಭತ್ತದ ತಳಿಗಳು, ೩ ಹೈಬ್ರೀಡ್, ೫೦ ತಾಂತ್ರಿಕತೆಗಳು, ಕಬ್ಬಿನಲ್ಲಿ ೧೭ ತಳಿಗಳು, ೨೦ ತಂತ್ರಜ್ಞಾನಗಳು, ಮುಸುಕಿನ ಜೋಳದಲ್ಲಿ ೪ ತಳಿಗಳು, ಮೇವಿನ ಬೆಳೆಗಳಲ್ಲಿ ೪, ಸೂರ್ಯಕಾಂತಿ ಸಂಕರಣ ತಳಿ, ಚಾಮರಾಜನಗರದ ಕಪ್ಪು ಅರಿಶಿಣ ತಳಿಯ ಬೆಳೆಗಳನ್ನು ಅಭಿವೃದ್ಧಿಪಡಿಸಿ ಪ್ರದರ್ಶನಕ್ಕೆ ಇಡಲಾಗಿತ್ತು.

ವಿಸ್ಮಯಕಾರಿ ಕೀಟ ಪ್ರಪಂಚ:

ಕೃಷಿ ಮೇಳದಲ್ಲಿ ವಿಸ್ಮಯ ಕೀಟ ಪ್ರಪಂಚ ಎಂಬ ಆಕರ್ಷಕ ಮಳಿಗೆಯನ್ನು ತೆರೆಯಲಾಗಿತ್ತು. ಈ ಮಳಿಗೆಯಲ್ಲಿ ಸುಮಾರು ೫೦೦ಕ್ಕೂ ಹೆಚ್ಚು ಕೀಟಗಳಿಂದ ಅರಳಿದ ಕಲಾಕೃತಿಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ. ಹಾಗೆಯೇ ಈ ಮಳಿಗೆಯಲ್ಲಿ ಸುಮಾರು ೩೦೦ ಕ್ಕೂ ಹೆಚ್ಚು ಕೀಟಗಳ ಬಗ್ಗೆ ವಿಸ್ಮಯ ವಿಷಯಗಳನ್ನೊಳಗೊಂಡ ಮಾಹಿತಿ ಫಲಕಗಳನ್ನು ಅಳವಡಿಸಿದೆ. ಸುಮಾರು ೩೫ ,೦೦೦ ಕ್ಕೂ ಹೆಚ್ಚು ಕೀಟಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ. ಸಾಮಾನ್ಯವಾಗಿ ರೈತರಿಗೆ ಮತ್ತು ಶಾಲಾ ಮಕ್ಕಳಿಗೆ ಇರುವ ಭಯವನ್ನು ನಿವಾರಿಸಲು ಹಾಗೂ ರೈತರಿಗೆ ಅನುಕೂಲ ಮಾಡಿಕೊಡುವ ಪರಭಕ್ಷಕ ಕೀಟಗಳ ಪರತಂತ್ರ ಜೀವಿಗಳು, ಪರಾಗಸ್ಪರ್ಶಿಗಳು, ಉತ್ಪಾದಕ ಕೀಟಗಳು, ಮಣ್ಣಿನ ಫಲವತ್ತತೆ ಹೆಚ್ಚಿಸುವ ಕೀಟಗಳು, ಸಾಮಾಜಿಕ ಕೀಟಗಳು, ಬೆಳೆಗಳಲ್ಲಿ ರೋಗಗಳನ್ನು ಹರಡುವ ಕೀಟಗಳು ಮತ್ತು ಮನುಷ್ಯನಲ್ಲಿ ಸಾಂಕ್ರಾಮಿಕ ರೋಗವನ್ನು ಹರಡುವ ಕೀಟಗಳನ್ನು ಪ್ರದರ್ಶನದಲ್ಲಿಟ್ಟು ಅವುಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಲಾಗುತ್ತಿದೆ.

ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಆಡಳಿತ ಅಧಿಕಾರಿ ಎಂ.ಗಿರಿಕುಮಾರ್‌ರವರು, ತಮ್ಮ ಬಿಡುವಿನ ವೇಳೆಯಲ್ಲಿ ಮತ್ತು ಚಿತ್ರಕಲೆ ರಚಿಸುವ ಆಸಕ್ತಿಯಿಂದ ರಚಿಸಿರುವ ವಿವಿಧ ಕೀಟ ಪ್ರಭೇಧಗಳ ಕಲಾಕೃತಿಗಳನ್ನು ನೋಡಬಹುದಾಗಿದೆ. ಈ ಸುಂದರವಾದ ವಿಸ್ಮಯ ಕೀಟ ಪ್ರಪಂಚ ಮಳಿಗೆಯನ್ನು ಕಳೆದ ೨ ತಿಂಗಳಿನಿಂದ ಸತತವಾಗಿ ಕೀಟ ಶಾಸ್ತ್ರ ವಿಭಾಗದ ಅಧ್ಯಾಪಕರು ಮತ್ತು ಅದರಲ್ಲೂ ಪ್ರಮುಖವಾಗಿ ಪ್ರಥಮ ವರ್ಷದ ಎಂ.ಎಸ್ಸಿ. (ಕೀಟಶಾಸ್ತ್ರ) ವಿಭಾಗದ ವಿದ್ಯಾರ್ಥಿಗಳ ಪರಿಶ್ರಮದಿಂದ ಮೂಡಿಬಂದಿದೆ, ಸಾರ್ವಜನಿಕರು ರೈತರು ಹಾಗೂ ಶಾಲಾ ಮಕ್ಕಳಿಂದ ಅಭೂತಪೂರ್ವ ಪ್ರಶಂಸೆ ವ್ಯಕ್ತವಾಗಿದೆ.

ಒಂದೇ ಗಿಡದಲ್ಲಿ ಬದನೆ- ಟೊಮ್ಯಾಟೋ

ಕೃಷಿ ಮೇಳದಲ್ಲಿ ಒಂದೇ ಗಿಡದಲ್ಲಿ ಕಸಿ ಮಾಡಿ ಬೆಳೆಸಲಾದ ಬದನೆಕಾಯಿ ಹಾಗೂ ಟೊಮ್ಯಾಟೋ ಬೆಳೆ ಎಲ್ಲರ ಗಮನಸೆಳೆಯಿತು. ಟೊಮ್ಯಾಟೋ ಅಥವಾ ಬದನೆಗಿಡ ಬೆಳೆದ ನಂತರ ಅದನ್ನು ಕಸಿ ಮಾಡುವ ಮೂಲಕ ಒಂದೇ ಗಿಡದಲ್ಲಿ ಎರಡೂ ಬೆಳೆಗಳನ್ನು ಬೆಳೆಯುವ ಹೊಸ ವಿಧಾನವನ್ನು ರೈತರಿಗೆ ಪರಿಚಯಿಸಲಾಯಿತು. ಎರಡೂ ಬೆಳೆಗಳು ಉತ್ತಮವಾಗಿ ಮೂಡಿರುವುದನ್ನು ಪ್ರಾತ್ಯಕ್ಷಿಕೆ ಮೂಲಕ ಪ್ರದರ್ಶಿಸಲಾಯಿತು. ರೈತರಿಗೆ ಬೆಳೆಯುವ ವಿಧಾನದ ಬಗ್ಗೆ ಮಾಹಿತಿಯನ್ನು ದೊರಕಿಸಿಕೊಡಲಾಯಿತು.

ದೇಶಿ ತಳಿ ಗೋವುಗಳ ಆಕರ್ಷಣೆ

ಕೃಷಿ ಮೇಳದಲ್ಲಿ ದೇಶಿ0 ತಳಿ ಗೋವುಗಳು ಜನರನ್ನು ಅಬ್ಬಬ್ಬಾ ಎನ್ನುವಂತೆ ಮಾಡಿದವು. ಬೇಗೂರಿನ ಶ್ರೀ ಕೃಷ್ಣ ಗೋಶಾಲೆಯವರು ಗುಜರಾತ್ ಮೂಲದ ಗಂಗಾತೀರ, ಕಾಂಕ್ರೇಜ್, ತಾರ್‌ಪಾರ್‌ಕಾರ್, ಕಿಲಾರಿ, ಪಂಚ ಕಲ್ಯಾಣಿ ಜಫಾರಾಬಾದಿ ಎಮ್ಮೆ, ರಾಠಿ, ಮಹಾರಾಷ್ಟ್ರ ಮೂಲದ ಢಾಂಗಿ ತಳಿಗಳು ರೈತರನ್ನು ವಿಶೇಷವಾಗಿ ಆಕರ್ಷಿಸಿದವು.

ಗುಜರಾತ್‌ನ ಪೋರ್‌ಬಂದರ್‌ನಿಂದ ತಂದಿರುವ ಜಫರಾಬಾದಿ ಎಮ್ಮೆ ನಿತ್ಯ ೨೫ ರಿಂದ ೩೦ ಲೀಟರ್ ಹಾಲನ್ನು ನೀಡಲಿದೆ. ಯಮರೂಪಿಯಂತಿರುವ ಎಮ್ಮೆಯ ಬೆಲೆ ೫ ರಿಂದ ೬ ಲಕ್ಷ ರು.ಗಳಾಗಿದೆ. ಈ ದೇಶಿ ತಳಿಯ ಗೋವುಗಳು ಕೂಡ ನಿತ್ಯ ೨೦ ರಿಂದ ೨೫ ಲೀಟರ್ ಹಾಲನ್ನು ನೀಡುತ್ತವೆ. ಮತ್ತೆ ಕೆಲವು ದೇಶಿ ಗೋವುಗಳಾದ ರುದ್ರಂ, ಲಕ್ಷ್ಮೀ ತಳಿಯ ಹಸುಗಳು ನಿತ್ಯ ೬ ರಿಂದ ೭ ಲೀಟರ್ ಹಾಲನ್ನು ನೀಡುತ್ತವೆ. ದೇಶಿ ತಳಿಯ ಗೋವುಗಳ ಹಾಲಿನಲ್ಲಿ ಹೆಚ್ಚು ಪೋಷಕಾಂಶಗಳಿವೆ. ದೇಶಿಯ ಗೋವುಗಳಿಂದ ಸಿಗುವ ಗೋ- ಮೂತ್ರ, ಸಗಣಿಯಿಂದ ಗೋವಿನ ಉತ್ಪನ್ನಗಳನ್ನು ತಯಾರಿಸಿ ಮಾರಾಟಕ್ಕೂ ಇಟ್ಟಿದ್ದರು.

ಮಂಗಗಳನ್ನು ಓಡಿಸುವ ಕೋವಿ

ಮಂಗಗಳನ್ನು ಓಡಿಸುವ ಕೋವಿಯನ್ನು ಪುತ್ತೂರು ಮೂಲದ ಕೆ.ಪಿ.ಭಟ್ ಅವರು ಅಭಿವೃದ್ಧಿಪಡಿಸಿದ್ದಾರೆ. ಸ್ಟೀಲ್ ಪೈಪ್‌ನಲ್ಲಿ ಪಟಾಕಿ ಹಾಗೂ ಹಸಿ ಎಲೆಗಳು, ಕಲ್ಲುಗಳನ್ನಿಟ್ಟು ಪಟಾಕಿಗೆ ಬೆಂಕಿ ಹಚ್ಚಿ ಗುರಿ ಇಟ್ಟು ಕಲ್ಲು ಹೊಡೆಯುವುದು. ಸ್ಟೈನ್‌ಲೆಸ್‌ಸ್ಟೀಲ್ ಪೈಪ್‌ನಿಂದ ತಯಾರಿಸಿದ ಸದೃಢವಾದ ಕೋವಿ ೧೨೦ ಅಡಿಯವರೆಗೆ ಗುರಿ ತಲುಪುತ್ತದೆ. ಯಾವುದೇ ಪರವಾನಗಿಯ ಅಗತ್ಯವಿಲ್ಲದ ಈ ಕೋವಿ ಕೇವಲ ಶಬ್ಧದಿಂದ ಮಾತ್ರ ಮಂಗಗಳು ಮತ್ತು ಕಾಡು ಪ್ರಾಣಿಗಳನ್ನು ಓಡಿಸುವ ರೈತ ಮಿತ್ರ ಏಕೈಕ ಕೋವಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.