ಅಣೆಕಟ್ಟಿನಿಂದ ಪಡೆದ ಭೂಮಿಯಲ್ಲಿ ಇಂದು ೫೩೦ರಿಂದ ೭೩೦ ಎಕರೆ ಪ್ರದೇಶ ಪಾಳು ಬಿದ್ದಿದ್ದು, ಗಿಡಗಡ್ಡೆಗಳಿಂದ ಆವೃತ್ತವಾಗಿದೆ. ಜಿಲ್ಲೆಯ ಹೆಮ್ಮೆ ತಾಣವಾಗಬೇಕಾದ ಗೊರೂರು ಅಣೆಕಟ್ಟಿನ ಸೌಂದರ್ಯ ಹಾಳಾಗಿರುವ ಸ್ಥಿತಿ ಜನರನ್ನು ಬೇಸರಗೊಳಿಸಿದೆ. ಹೀಗಿರುವಾಗ ಕೆ. ಆರ್‌. ಎಸ್. ಬೃಂದಾವನದ ಮಾದರಿಯಲ್ಲಿ ಇಲ್ಲಿ ಪ್ರವಾಸೋದ್ಯಮ ಕೇಂದ್ರ, ಉದ್ಯಾನವನ, ಸಂಗೀತ ಕಾರಂಜಿ, ಸಸ್ಯೋದ್ಯಾನ, ಪಾದಚಾರಿ ಮಾರ್ಗ, ಮಿನಿ ಅಕ್ವೇರಿಯಂ, ಮಕ್ಕಳ ಉದ್ಯಾನ, ಪ್ರಕೃತಿ ಸಂಗ್ರಹಾಲಯ ಮುಂತಾದ ಸೌಲಭ್ಯಗಳೊಂದಿಗೆ ‘ಹೇಮಾವತಿ ಬೃಂದಾವನ’ ಅಭಿವೃದ್ಧಿ ಮಾಡಿದಲ್ಲಿ ಹಾಸನ ಜಿಲ್ಲೆಯ ಆಕರ್ಷಣೆಗೊಳ್ಳಲಿದೆ ಎಂದು ಅಭಿಪ್ರಾಯಪಟ್ಟರು.

ಕನ್ನಡಪ್ರಭ ವಾರ್ತೆ ಹಾಸನ

ಜಿಲ್ಲೆಯಲ್ಲಿ ಪ್ರವಾಸೋದ್ಯಮಕ್ಕೆ ಹೊಸ ಚೈತನ್ಯ ತುಂಬುವ ಮಹತ್ವಾಕಾಂಕ್ಷಿ ಯೋಜನೆಗೆ ಗೊರೂರಿನಲ್ಲಿರುವ ಹೇಮಾವತಿ ಅಣೆಕಟ್ಟಿನ 530 ಎಕರೆ ಪಾಳು ಪ್ರದೇಶದಲ್ಲಿ ಹೇಮಾವತಿ ಬೃಂದಾವನ ನಿರ್ಮಿಸಲು ಸರ್ಕಾರದಿಂದ ೨೦೦ ಕೋಟಿ ರು. ಅನುದಾನ ನೀಡುವಂತೆ ಸರ್ಕಾರಕ್ಕೆ ಗೊರೂರು ಹೇಮಾವತಿ ಬೃಂದಾವನ ನಿರ್ಮಾಣ ಹೋರಾಟ ಹಾಗೂ ಮೂಲಭೂತ ಸೌಕರ್ಯ ಅಭಿವೃದ್ಧಿ ಸಮಿತಿ ಗೌರವಾಧ್ಯಕ್ಷ ಜಿ. ಆರ್‌. ಹೇಮರಾಜು ಮನವಿ ಮಾಡಿದರು.

ಪತ್ರಿಕಾಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿ, ಹೇಮಾವತಿ ಜಲಾಶಯ ಯೋಜನೆ ಆರಂಭವಾಗಿ ಈಗಾಗಲೇ ೬೦ ವರ್ಷಗಳಾದರೂ, ಅಣೆಕಟ್ಟಿನ ಮುಂಭಾಗ ಹಾಗೂ ಹಿನ್ನಿರಿಗೆ ಬಳಸಿ ಸರ್ಕಾರ ಸ್ವಾಧೀನಪಡಿಸಿಕೊಂಡ ಸುಮಾರು ೭೫೦ ಎಕರೆ ಭೂಮಿಯಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳು ಜರುಗದಿರುವುದು ಸ್ಥಳೀಯರಲ್ಲಿ ಅಸಮಾಧಾನ ಮೂಡಿಸಿದೆ. ಇದೇ ಉದ್ದೇಶಕ್ಕಾಗಿ ೨೦೨೩ ಡಿಸೆಂಬರ್ ೧೪ರಂದು ಗೊರೂರಿನ ಹೇಮಾವತಿ ಜಲಾಶಯ ಯೋಜನಾ ಕಚೇರಿ ಎದುರು ಜನರು ಶಾಂತಿಯುತ ಪ್ರತಿಭಟನೆ ನಡೆಸಿ ಸರ್ಕಾರ ತಕ್ಷಣ ಕ್ರಮಕ್ಕೆ ಬರಬೇಕೆಂದು ಒತ್ತಾಯಿಸಲಾಗಿತ್ತು ಎಂದರು.

ಅಣೆಕಟ್ಟಿನಿಂದ ಪಡೆದ ಭೂಮಿಯಲ್ಲಿ ಇಂದು ೫೩೦ರಿಂದ ೭೩೦ ಎಕರೆ ಪ್ರದೇಶ ಪಾಳು ಬಿದ್ದಿದ್ದು, ಗಿಡಗಡ್ಡೆಗಳಿಂದ ಆವೃತ್ತವಾಗಿದೆ. ಜಿಲ್ಲೆಯ ಹೆಮ್ಮೆ ತಾಣವಾಗಬೇಕಾದ ಗೊರೂರು ಅಣೆಕಟ್ಟಿನ ಸೌಂದರ್ಯ ಹಾಳಾಗಿರುವ ಸ್ಥಿತಿ ಜನರನ್ನು ಬೇಸರಗೊಳಿಸಿದೆ. ಹೀಗಿರುವಾಗ ಕೆ. ಆರ್‌. ಎಸ್. ಬೃಂದಾವನದ ಮಾದರಿಯಲ್ಲಿ ಇಲ್ಲಿ ಪ್ರವಾಸೋದ್ಯಮ ಕೇಂದ್ರ, ಉದ್ಯಾನವನ, ಸಂಗೀತ ಕಾರಂಜಿ, ಸಸ್ಯೋದ್ಯಾನ, ಪಾದಚಾರಿ ಮಾರ್ಗ, ಮಿನಿ ಅಕ್ವೇರಿಯಂ, ಮಕ್ಕಳ ಉದ್ಯಾನ, ಪ್ರಕೃತಿ ಸಂಗ್ರಹಾಲಯ ಮುಂತಾದ ಸೌಲಭ್ಯಗಳೊಂದಿಗೆ ‘ಹೇಮಾವತಿ ಬೃಂದಾವನ’ ಅಭಿವೃದ್ಧಿ ಮಾಡಿದಲ್ಲಿ ಹಾಸನ ಜಿಲ್ಲೆಯ ಆಕರ್ಷಣೆಗೊಳ್ಳಲಿದೆ ಎಂದು ಅಭಿಪ್ರಾಯಪಟ್ಟರು. ಸಮಿತಿಯ ಗೌರವಾಧ್ಯಕ್ಷರು, ಅಧ್ಯಕ್ಷರು, ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಾಗೂ ಗ್ರಾಮಸ್ಥರು ಒಟ್ಟಾಗಿ ಮುಖ್ಯಮಂತ್ರಿಗಳಿಗೆ ಸಲ್ಲಿಸಿರುವ ಮನವಿಯಲ್ಲಿ ಹೇಮಾವತಿ ನದಿ ಜಿಲ್ಲೆಯ ಜೀವನಾಡಿ.

ಅಣೆಕಟ್ಟಿನ ಸುತ್ತಲಿನ ಭೂಮಿಯನ್ನು ನೂರು ವರ್ಷಗಳ ವೀಕ್ಷಣೆಯೊಂದಿಗೆ ಅಭಿವೃದ್ಧಿಪಡಿಸಿದರೆ ಹಾಸನ ಪ್ರವಾಸೋದ್ಯಮ ನಕ್ಷೆಯಲ್ಲಿ ಹೊಸ ಗುರುತನ್ನು ಪಡೆಯಲಿದೆ ಎಂದು ಹೇಳಿದರು. ಈ ಯೋಜನೆ ಜಾರಿಗೆ ಬಂದ್ರೆ ಸ್ಥಳೀಯರಿಗೆ ಉದ್ಯೋಗಾವಕಾಶ, ವ್ಯಾಪಾರಸ್ಥರಿಗೆ ಚಟುವಟಿಕೆ, ಜಿಲ್ಲೆಗೆ ಪ್ರವಾಸಿಗರ ಪ್ರವಾಹ ಮತ್ತು ಐತಿಹಾಸಿಕ ಪ್ರದೇಶಕ್ಕೆ ಹೊಸ ಚೈತನ್ಯ ಸಿಗಲಿದೆ ಎಂದು ಜನರು ನಿರೀಕ್ಷೆ ವ್ಯಕ್ತಪಡಿಸಿದರು. ಸರ್ಕಾರ ಯೋಜನೆಗೆ ಸ್ಪಂದಿಸುವತ್ತ ಕಣ್ಣು ಹಿಡಿದಿರುವ ಗೊರೂರು ಜನರು ನಮ್ಮ ಕನಸಿನ ಹೇಮಾವತಿ ಬೃಂದಾವನಕ್ಕೆ ಈ ಬಾರಿ ಸರ್ಕಾರ ಹಸಿರು ನಿಶಾನೆ ತೋರಿಸಲಿ ಎಂದು ಕೋರಿದರು.

ಪತ್ರಿಕಾಗೋಷ್ಠಿಯಲ್ಲಿ ಗೊರೂರು ಹೇಮಾವತಿ ಬೃಂದಾವನ ನಿರ್ಮಾಣ ಹೋರಾಟ ಹಾಗೂ ಮೂಲಭೂತ ಸೌಕರ್ಯ ಅಭಿವೃದ್ಧಿ ಸಮಿತಿ ಅಧ್ಯಕ್ಷ ನಿಂಗರಾಜು, ಉಪಾಧ್ಯಕ್ಷ ಮಲ್ಲೇಶ್, ಆನಂದ್, ಜಯಂತ್ ಇತರರು ಉಪಸ್ಥಿತರಿದ್ದರು.