ಮಂಗಳೂರು: ಮಂಗಳೂರು ಕಮಿಷನರೇಟ್ ವ್ಯಾಪ್ತಿಯ ಉರ್ವ ಪೊಲೀಸ್ ಠಾಣೆಯ ಎರಡು ನಿರ್ಮಾಣ ಕಾಮಗಾರಿ ಸ್ಥಳದಲ್ಲಿ ಒಟ್ಟು 11 ಮಂದಿ ಬಾಂಗ್ಲಾದೇಶಿಯರು ಇರುವುದನ್ನು ಪತ್ತೆ ಹಚ್ಚಿರುವ ಪೊಲೀಸರು ಅವರನ್ನು ವಶಕ್ಕೆ ಪಡೆದಿದ್ದಾರೆ. ಈ ಮೂಲಕ ಕಮಿಷನರೇಟ್ ವ್ಯಾಪ್ತಿಯಲ್ಲಿ ನಾಲ್ಕು ದಿನದ ಅಂತರದಲ್ಲಿ 19 ಅಕ್ರಮ ಬಾಂಗ್ಲಾದೇಶಿಯರು ಪತ್ತೆಯಾಗಿದ್ದಾರೆ.ಬಾಂಗ್ಲಾದೇಶದ ಕೌಸರ್ ಅಲಿ (21), ಮಹಮ್ಮದ್ ನುರ್ ಅಮಿನ್ (34), ಮಹಮ್ಮದ್ ನಹಿದುಲ್ ಇಸ್ಲಾಮ್ (22), ಮಹಮ್ಮದ್ ಹುಮಯೊನ್ ಕೊಬಿರ್ (22), ಮಹಮ್ಮದ್ ರೊಮ್‌ಜನ್ ಅಲಿ (23), ಮಹಮ್ಮದ್ ಅಬ್ದುಲ್ ರಹಮನ್ ರೋಯೆಲ್ (19), ಮಹಮ್ಮದ್ ನೊಯನ್ (21) ಹಾಗೂ ನಾಲ್ವರು ಅಪ್ತಾಪ್ತರನ್ನು/ ಬಾಲಕಾರ್ಮಿಕರು (15-18 ವಯೋಮಾನದವರು) ವಶಕ್ಕೆ ಪಡೆಯಲಾದ ಬಾಂಗ್ಲಾದೇಶಿಯರು.ನಗರದ ಉರ್ವ ಪೊಲೀಸ್ ಠಾಣಾ ವ್ಯಾಪ್ತಿಯ ಕೆಪಿಟಿ-ಕುಂಟಿಕಾನ ಮಧ್ಯೆ ಇರುವ ಕಟ್ಟಡದಲ್ಲಿ ದುಡಿಯುತ್ತಿದ್ದ ಕಾರ್ಮಿಕರನ್ನು ಉರ್ವ ಪೊಲೀಸರು ವಿಚಾರಣೆ ನಡೆಸಿದ ವೇಳೆ ಮೂರು ಮಂದಿ ಬಾಂಗ್ಲಾದಿಂದ ಆಗಮಿಸಿದ ಅಕ್ರಮ ವಲಸಿಗರು ಇರುವುದು ದೃಢಪಟ್ಟಿದೆ. ಅವರ ತೀವ್ರ ವಿಚಾರಣೆ ಬಳಿಕ ಮತ್ತೊಂದು ನಿರ್ಮಾಣ ಸ್ಥಳದಲ್ಲಿ ಮತ್ತೆ 8 ಮಂದಿ ಇರುವುದು ಪತ್ತೆಯಾಗಿದೆ. ಅವರನ್ನು ಕೂಡ ಪೊಲೀಸರು ವಶಕ್ಕೆ ಪಡೆದು ವಿಚಾರಿಸಿದ ವೇಳೆ 11 ಮಂದಿಗೂ ಬಾಂಗ್ಲಾದೇಶಿಯರು ಎಂಬುದು ದೃಢಪಟ್ಟಿದೆ.
ಉರ್ವ ಠಾಣಾ ವ್ಯಾಪ್ತಿಯ ಎರಡು ನಿರ್ಮಾಣ ಹಂತದ ಕಟ್ಟಡ ಕಾಮಗಾರಿಗಳಲ್ಲಿ ಕೆಲಸ ನಿರ್ವಹಿಸುತ್ತಿದ್ದ 11 ಮಂದಿ ಬಾಂಗ್ಲಾದೇಶಿಯರನ್ನು ಹಾಗೂ ಕೆಲ ಹಿಂದೆ ವಶಕ್ಕೆ ಪಡೆದಿರುವ ಬಾಂಗ್ಲಾದೇಶಿಯರ ಮಾಹಿತಿಯನ್ನು ಎಫ್‌ಆರ್‌ಆರ್‌ಒಗೆ (ವಿದೇಶಿ ಪ್ರಾದೇಶಿಕ ನೋಂದಣಿ ಕಚೇರಿ) ವರದಿ ಸಲ್ಲಿಸಲಿದ್ದು, ಅಲ್ಲಿಂದ ವರದಿ ಬಂದ ಬಳಿಕ ಗಡೀಪಾರು ಪ್ರಕ್ರಿಯೆ ನಡೆಯಲಿದೆ.ಮಧ್ಯವರ್ತಿ ವಿರುದ್ಧ ಕೇಸ್: ಪಶ್ಚಿಮ ಬಂಗಾಳದ ಮಧ್ಯವರ್ತಿಯೋರ್ವರು ಪಶ್ಚಿಮ ಬಂಗಾಳದಿಂದ ಇವರನ್ನು ಹಾಗೂ ಭಾರತದ ಇತರ ರಾಜ್ಯಗಳ ಕೆಲವು ಕಾರ್ಮಿಕರನ್ನು ಇಲ್ಲಿಗೆ ರೈಲಿನಲ್ಲಿ ಕೆಲಕ್ಕಾಗಿ ಕರೆತಂದಿದ್ದಾರೆ ಎಂದು ವಿಚಾರಣೆಯಲ್ಲಿ ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಪಶ್ಚಿಮ ಬಂಗಾಳದ ಮಧ್ಯವರ್ತಿಯ ವಿರುದ್ಧವೂ ಪ್ರಕರಣ ದಾಖಲಿಸಲಾಗುವುದು ಎಂದು ಪೊಲೀಸ್ ಕಮಿಷನರ್ ತಿಳಿಸಿದ್ದಾರೆ.
ಒಟ್ಟು 19 ಬಾಂಗ್ಲಾದೇಶಿಯರು: ಜು.10ರಂದು ಸುರತ್ಕಲ್‌ನ ಮುಕ್ಕದ ಕಟ್ಟಡ ಕಾರ್ಮಿಕರಾಗಿ ದುಡಿಯುತ್ತಿದ್ದ ಸುಮಾರು 8 ಮಂದಿ ಅಕ್ರಮ ಬಾಂಗ್ಲಾ ದೇಶಿಯರನ್ನು ಪತ್ತೆ ಹಚ್ಚಿ ವಶಕ್ಕೆ ಪಡೆಯಲಾಗಿತ್ತು. ಅವರನ್ನು ಮುಕ್ಕದಲ್ಲಿ ನಿರೀಕ್ಷಣಾ ಕೇಂದ್ರ ತೆರೆದು ಇರಿಸಲಾಗಿದೆ. ಇವರನ್ನು ಪೊಲೀಸ್, ಇಂಟಲಿಜೆನ್ಸ್ ಸೇರಿದಂತೆ ತನಿಖಾ ತಂಡ ವಿಚಾರಣೆ ನಡೆಸುತ್ತಿದ್ದಾರೆ. ಇದೀಗ ಸೋಮವಾರ ಉರ್ವ ಠಾಣಾ ವ್ಯಾಪ್ತಿಯಲ್ಲಿ 11 ಮಂದಿ ಬಾಂಗ್ಲಾದೇಶಿಯವರು ಪತ್ತೆಯಾಗಿದ್ದು, ಈ ಮೂಲಕ 4 ದಿನದ ಅಂತರದಲ್ಲಿ ಒಟ್ಟು 19 ಮಂದಿ ಬಾಂಗ್ಲಾದೇಶಿಯರು ಪತ್ತೆಯಾಗಿದ್ದಾರೆ. ಮಂಗಳೂರು ಕಮಿಷನರೇಟ್ ವ್ಯಾಪ್ತಿಯ ನಾನಾ ಕಡೆ ಬಾಂಗ್ಲಾದಿಂದ ಅಕ್ರಮವಾಗಿ ನುಸುಳಿರುವ ವ್ಯಕ್ತಿಗಳ ಮಾಹಿತಿ ಲಭಿಸಿದ್ದು, ಕೂಡಲೇ ತಮ್ಮ ವ್ಯಾಪ್ತಿಯಲ್ಲಿ ಕಾರ್ಯಾಚರಣೆ ನಡೆಸಿ ಅಂತಹವರನ್ನು ಪತ್ತೆ ಹಚ್ಚುವಂತೆ ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ನಿರ್ದೇಶನ ನೀಡಿದ್ದು, ಅದರಂತೆ ಎಲ್ಲ ಠಾಣಾ ವ್ಯಾಪ್ತಿಯಲ್ಲಿ ಪೊಲೀಸರು ಕಾರ್ಯಾಚರಣೆ ನಡೆಯುತ್ತಿದೆ.