ಸಾರಾಂಶ
ಮಂಗಳೂರು: ಪಿಲಿನಲಿಕೆ ಪ್ರತಿಷ್ಠಾನದ ಸ್ಥಾಪಕಾಧ್ಯಕ್ಷ, ಯುವ ನಾಯಕ ಎಂ.ಮಿಥುನ್ ರೈ ನೇತೃತ್ವದಲ್ಲಿ, ನಮ್ಮ ಟಿವಿ ಸಹಯೋಗದಲ್ಲಿ ನಗರದ ಕರಾವಳಿ ಉತ್ಸವ ಮೈದಾನದಲ್ಲಿ ಬುಧವಾರ ಹತ್ತನೇ ವರ್ಷದ ‘ಪಿಲಿನಲಿಕೆ ಪಂಥ’ ವೈಭವದಿಂದ ನೆರವೇರಿತು. ಹುಲಿ ವೇಷ ತಂಡಗಳ ರೋಚಕ ಕಸರತ್ತುಗಳನ್ನು ವೀಕ್ಷಿಸಲು ಸಹಸ್ರಾರು ಮಂದಿ ಕಿಕ್ಕಿರಿದು ಭಾಗವಹಿಸಿದ್ದರು.
ಬೆಳಗ್ಗಿನಿಂದ ತಡರಾತ್ರಿವರೆಗೂ ಕರಾವಳಿ ಉತ್ಸವ ಮೈದಾನ ಪಿಲಿನಲಿಕೆಯ ಸಂಪ್ರದಾಯ ಮತ್ತು ವೈಭವವನ್ನು ಅನಾವರಣಗೊಳಿಸಿತು. ಚಲನಚಿತ್ರ, ಕ್ರಿಕೆಟ್ ತಾರೆಯರ ದಂಡೇ ಆಗಮಿಸಿ ರಂಗು ತುಂಬಿದರು. ಸ್ವತಃ ಡಿಸಿಎಂ ಡಿಕೆ ಶಿವಕುಮಾರ್ ದಶಮಾನ ಸಂಭ್ರಮದ ಪಿಲಿನಲಿಕೆಗೆ ಬಂದು ಹುಲಿ ವೇಷದ ಅಬ್ಬರವನ್ನು ವೀಕ್ಷಿಸಿದರು.ಅಗಸ್ತ್ಯ ಮಂಗಳೂರು, ವೈದ್ಯನಾಥೇಶ್ವರ ಫ್ರೆಂಡ್ಸ್ ಟೈಗರ್ಸ್, ಮುಳಿಹಿತ್ಲು ಗೇಮ್ಸ್ ಟೀಮ್, ಅನಿಲ್ ಕಾಡಬೆಟ್ಟು, ಜೂನಿಯರ್ ಬಾಯ್ಸ್ ಚಿಲಿಂಬಿ, ಎಮ್ಮೆಕೆರೆ ಫ್ರೆಂಡ್ಸ್ ಸರ್ಕಲ್, ಟ್ಯಾಲೆಂಟ್ ಟೈಗರ್ಸ್ ತುಳುನಾಡು, ಸೋಮೇಶ್ವರ ಫ್ರೆಂಡ್ಸ್ ಕ್ಲಬ್, ಪೊಳಲಿ ಟೈಗರ್ಸ್, ಗೋಕರ್ಣನಾಥ ಹುಲಿ ತಂಡಗಳು ತಮ್ಮ ಚಾತುರ್ಯವನ್ನು ಪ್ರದರ್ಶಿಸಿ ನೋಡುಗರನ್ನು ಬೆರಗುಗೊಳಿಸಿದವು. ಧರಣಿ ಮಂಡಲ, ಮುಡಿ ಎಸೆತ ಸೇರಿದಂತೆ ವಿಭಿನ್ನ ಕಸರತ್ತುಗಳು ಹಾಗೂ ಆಧುನಿಕ ಕಲೆಗಾರಿಕೆಯ ಜೋಡಣೆಗಳು ಮಂತ್ರಮುಗ್ಧಗೊಳಿಸಿದವು.
ಅಂತಾರಾಷ್ಟ್ರೀಯ ಮನ್ನಣೆ ಸಿಗಲಿ- ಡಿಕೆಶಿ:ಕಾರ್ಯಕ್ರಮಕ್ಕೆ ಆಗಮಿಸಿ ಮಾತನಾಡಿದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್, ಭಕ್ತಿ ಇದ್ದಲ್ಲಿ ಭಗವಂತ ಇದ್ದಾನೆ. ಹುಲಿ ವೇಷವು ಭಗವಂತನಿಗೆ ಸಲ್ಲಿಸುವ ಸೇವೆಯ ರೂಪವಾಗಿದೆ. ಈ ಕಲೆಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ಸಿಗಬೇಕು ಎನ್ನುವ ನಿಟ್ಟಿನಲ್ಲಿ ಕಳೆದ 10 ವರ್ಷಗಳಿಂದ ಮಿಥುನ್ ರೈ ಅವರು ಪಿಲಿನಲಿಕೆ ಪಂಥವನ್ನು ಆಯೋಜಿಸಿಕೊಂಡು ಬಂದಿದ್ದಾರೆ. ಅವರಿಗೆ ಎಲ್ಲರೂ ಸರ್ವ ರೀತಿಯಲ್ಲಿ ಸಹಕಾರ ನೀಡಬೇಕು ಎಂದು ಹೇಳಿದರು.
ಪಿಲಿನಲಿಕೆ ರೂವಾರಿ ಮಿಥುನ್ ರೈ, ಬಾಲಿವುಡ್ ನಟ ಸುನೀಲ್ ಶೆಟ್ಟಿ, ಶಾಸಕರಾದ ಅಶೋಕ್ ಕುಮಾರ್ ರೈ ಪುತ್ತೂರು, ಮಂಜುನಾಥ ಭಂಡಾರಿ, ಮುಖಂಡರಾದ ರಕ್ಷಿತ್ ಶಿವರಾಂ, ಶಶಿಧರ್ ಹೆಗ್ಡೆ ಇದ್ದರು.ಪಿಲಿನಲಿಕೆ ಪಂಥದಲ್ಲಿ ಒಟ್ಟು ಹತ್ತು ತಂಡಗಳು ಭಾಗವಹಿಸಿದ್ದವು. ವಿದ್ವಾಂಸರಾದ ಕೆ.ಕೆ. ಪೇಜಾವರ, ವೆಂಕಟೇಶ್ ಭಟ್ ಹಾಗೂ ಸ್ವತಃ ಮಿಥುನ್ ಎಂ.ರೈ ತೀರ್ಪುಗಾರರಾಗಿದ್ದರು.
ತಾರಾ ಮೆರುಗು: ನಟ ಕಿಚ್ಚ ಸುದೀಪ್, ಕ್ರಿಕೆಟಿಗರಾದ ಅಜಿಂಕ್ಯ ರಹಾನೆ, ಜಿತೇಶ್ ಶರ್ಮಾ, ನಟಿ ಪೂಜಾ ಹೆಗ್ಡೆ, ರಾಜ್ ಬಿ.ಶೆಟ್ಟಿ ತಾರಾ ಮೆರುಗು ನೀಡಿದ್ದು, ರಾಜ್ಯಸಭಾ ಸದಸ್ಯ ಡಾ.ಸೈಯದ್ ನಾಸೀರ್ ಹುಸೇನ್, ಸಚಿವ ದಿನೇಶ್ ಗುಂಡೂರಾವ್ ಮೊದಲಾದವರು ಕಾರ್ಯಕ್ರಮಕ್ಕೆ ಆಗಮಿಸಿದ್ದರು.