ಮಂಗಳೂರು ದಸರಾ ವೈಭವಕ್ಕೆ ಡಿಸಿಎಂ ಡಿ.ಕೆ. ಶಿವಕುಮಾರ್‌ ಮೆಚ್ಚುಗೆ

| N/A | Published : Oct 04 2025, 12:00 AM IST

ಸಾರಾಂಶ

 ಮಂಗಳೂರು ದಸರಾ ಸಂಭ್ರಮದ ಹಿನ್ನೆಲೆಯಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕುದ್ರೋಳಿ  ಕ್ಷೇತ್ರಕ್ಕೆ ಭೇಟಿ ನೀಡಿದರು.ದೇವರ ಬಲಿ ಉತ್ಸವದ ಶುಭ ಸಂದರ್ಭದಲ್ಲಿ ದೇವಸ್ಥಾನ ಪ್ರವೇಶಿಸಿ  ದೇವರ ರಥಾರೋಹಣ ನಂತರ ರಥದ ಚಕ್ರಕ್ಕೆ ತೆಂಗಿನಕಾಯಿ ಒಡೆದು, ಭಕ್ತರೊಂದಿಗೆ ರಥೋತ್ಸವದಲ್ಲಿ ಭಾಗಿಯಾದರು.

ಮಂಗಳೂರು: ವಿಶ್ವವಿಖ್ಯಾತ ಮಂಗಳೂರು ದಸರಾ ಸಂಭ್ರಮದ ಹಿನ್ನೆಲೆಯಲ್ಲಿ ರಾಜ್ಯದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಬುಧವಾರ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರಕ್ಕೆ ಭೇಟಿ ನೀಡಿದರು.ದೇವರ ಬಲಿ ಉತ್ಸವದ ಶುಭ ಸಂದರ್ಭದಲ್ಲಿ ದೇವಸ್ಥಾನ ಪ್ರವೇಶಿಸಿದ ಉಪಮುಖ್ಯಮಂತ್ರಿ, ಸಂಪ್ರದಾಯದಂತೆ ದೇವರ ರಥಾರೋಹಣ ನಂತರ ರಥದ ಚಕ್ರಕ್ಕೆ ತೆಂಗಿನಕಾಯಿ ಒಡೆದು, ಭಕ್ತರೊಂದಿಗೆ ರಥೋತ್ಸವದಲ್ಲಿ ಭಾಗಿಯಾದರು.

ದೇವಳ ಸ್ಥಾಪಿಸಿದ ಸಂತ ಬ್ರಹ್ಮಶ್ರೀ ನಾರಾಯಣ ಗುರುಗಳ ಸನ್ನಿಧಿಗೆ ನಮಿಸಿ, ಸರ್ವ ದೇವರ ದರ್ಶನ ಪಡೆದು, ದರ್ಬಾರ್ ಮಂಟಪದಲ್ಲಿ ಶಾರದೆ ಮತ್ತು ನವದುರ್ಗೆಯರಿಗೆ ವಂದಿಸಿದರು. ಶಾರದೆಯ ಸನ್ನಿಧಿಯಲ್ಲಿ ಡಿ.ಕೆ. ಶಿವಕುಮಾರ್‌ ಅವರಿಗೆ ಪ್ರಸಾದ ನೀಡಿ, ದೇವಳದ ವತಿಯಿಂದ ಗೌರವಿಸಲಾಯಿತು.

ಬಳಿಕ ಮಾತನಾಡಿದ ಡಿಕೆ ಶಿವಕುಮಾರ್‌, ನಾನು ಇಂದು ಇಲ್ಲಿಗೆ ಬರಲು ಸಾಧ್ಯವಾಗುತ್ತಿರಲಿಲ್ಲ. ಆದರೆ, ಸಾಕ್ಷಾತ್ ಶಾರದಾ ಮಾತೆಯೇ ನನ್ನನ್ನು ಇಲ್ಲಿಗೆ ಕರೆಸಿಕೊಂಡಂತಿದೆ. ಶ್ರೀ ನಾರಾಯಣ ಗುರುಗಳು ಸ್ಥಾಪಿಸಿದ ಈ ಪುಣ್ಯಕ್ಷೇತ್ರಕ್ಕೆ ಭೇಟಿ ನೀಡಿರುವುದು ನನ್ನ ಸೌಭಾಗ್ಯ. ಮಂಗಳೂರು ದಸರಾ ವೈಭವ ಕಂಡು ಬಹಳ ಸಂತೋಷವಾಯಿತು ಎಂದರು.

ದೇವಸ್ಥಾನದ ಅಧ್ಯಕ್ಷ ಜೈರಾಜ್ ಎಚ್. ಸೋಮಸುಂದರಂ ಮಾಲಾರ್ಪಣೆಗೈದು ಸ್ವಾಗತಿಸಿದರು. ದೇವಸ್ಥಾನದ ಕೋಶಾಧಿಕಾರಿ ಪದ್ಮರಾಜ್ ಆರ್. ಪೂಜಾರಿ, ಟ್ರಸ್ಟಿಗಳಾದ ಸಂತೋಷ್ ಪೂಜಾರಿ, ಕೃತಿನ್ ಅಮೀನ್, ಕಿಶೋರ್ ದಂಡಕೇರಿ, ಅಭಿವೃದ್ಧಿ ಸಮಿತಿ ಅಧ್ಯಕ್ಷ ದೇವೇಂದ್ರ ಪೂಜಾರಿ, ಸದಸ್ಯರಾದ ಹರೀಶ್ ಕುಮಾರ್‌, ಪಿ.ಕೆ.ಗೌರವಿ, ದೀಪಕ್ ಪೂಜಾರಿ ಹಾಗೂ ಸಮಿತಿ ಸದಸ್ಯರು, ಶಾಸಕರಾದ ಅಶೋಕ್ ಕುಮಾರ್ ರೈ, ಮಂಜುನಾಥ ಭಂಡಾರಿ, ಮುಖಂಡರಾದ ರಕ್ಷಿತ್ ಶಿವರಾಂ ಬೆಳ್ತಂಗಡಿ, ಇನಾಯತ್ ಆಲಿ, ಶ್ರೀನಿವಾಸ್ ಬಿ.ವಿ., ದೇವಳದ ಆಡಳಿತ ಹಾಗೂ ಅಭಿವೃದ್ಧಿ ಸಮಿತಿ ಸದಸ್ಯರು ಇದ್ದರು.

Read more Articles on