ಮಂಗಳೂರು: ಸಹಕಾರಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ ನವೀನ ಹೆಜ್ಜೆ ಇಟ್ಟಿರುವ ಎಸ್‌ಸಿಡಿಸಿಸಿ ಬ್ಯಾಂಕ್, ಯುಪಿಐ ಮತ್ತು ಐಎಂಪಿಎಸ್ ಸೌಲಭ್ಯಗಳನ್ನು ಪರಿಚಯಿಸುವ ಮೂಲಕ ಗ್ರಾಹಕರಿಗೆ ಆಧುನಿಕ ಹಾಗೂ ವೇಗವಾದ ಹಣಕಾಸು ಸೇವೆಗಳನ್ನು ಒದಗಿಸುತ್ತಿದೆ. ಈ ಹೊಸ ಯೋಜನೆಗಳಿಗೆ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ ಎಂದು ಬ್ಯಾಂಕ್ ಅಧ್ಯಕ್ಷ ಡಾ.ಎಂ.ಎನ್. ರಾಜೇಂದ್ರ ಕುಮಾರ್ ಹೇಳಿದ್ದಾರೆ.ಬುಧವಾರ ಬ್ಯಾಂಕ್‌ನಲ್ಲಿ ಆಯೋಜಿಸಲಾದ ಡಿಜಿಟಲ್ ಬ್ಯಾಂಕಿಂಗ್ ಹಾಗೂ ಸೈಬರ್ ಭದ್ರತೆ ಕುರಿತ ತರಬೇತಿ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಇಂದಿನ ಬ್ಯಾಂಕಿಂಗ್ ಕ್ಷೇತ್ರದಲ್ಲಿ ತ್ವರಿತ ಮತ್ತು ಸುರಕ್ಷಿತ ಸೇವೆಗಳು ಅತ್ಯಗತ್ಯವಾಗಿದ್ದು, ಗ್ರಾಹಕರ ನಿರೀಕ್ಷೆಗಳಿಗೆ ತಕ್ಕಂತೆ ಸೇವೆಗಳನ್ನು ವಿಸ್ತರಿಸುವುದು ಬ್ಯಾಂಕಿನ ಪ್ರಮುಖ ಗುರಿಯಾಗಿದೆ ಎಂದರು.
ಬ್ಯಾಂಕ್ ಈಗಾಗಲೇ ಕೋರ್ ಬ್ಯಾಂಕಿಂಗ್ ವ್ಯವಸ್ಥೆಯೊಂದಿಗೆ ಆರ್‌ಟಿಜಿಎಸ್, ನೆಫ್ಟ್, ಸಿಟಿಎಸ್, ಎಸ್‌ಎಂಎಸ್ ಅಲರ್ಟ್, ಎಟಿಎಂ, ಮೊಬೈಲ್ ಬ್ಯಾಂಕಿಂಗ್ ಮತ್ತು ಪಿಒಎಸ್ ಸೇರಿದಂತೆ ಹಲವು ಡಿಜಿಟಲ್ ಸೇವೆಗಳನ್ನು ಯಶಸ್ವಿಯಾಗಿ ನೀಡುತ್ತಿದೆ. ಇತ್ತೀಚಿನ ತಾಂತ್ರಿಕ ಅಭಿವೃದ್ಧಿಗಳ ಹಿನ್ನೆಲೆಯಲ್ಲಿ, ಗ್ರಾಹಕರು ಮೊಬೈಲ್ ಅಪ್ಲಿಕೇಶನ್‌ಗಳ ಮೂಲಕ ಸುಲಭ ಮತ್ತು ವೇಗವಾದ ಸೇವೆಯನ್ನು ನಿರೀಕ್ಷಿಸುತ್ತಿದ್ದಾರೆ ಎಂದು ಅವರು ಹೇಳಿದರು.ಈ ಅಗತ್ಯವನ್ನು ಮನಗಂಡು, ಗ್ರಾಹಕರಿಗೆ ಇನ್ನಷ್ಟು ಸುಲಭ ಮತ್ತು ಸುರಕ್ಷಿತ ಸೇವೆಗಳನ್ನು ಒದಗಿಸುವ ಉದ್ದೇಶದಿಂದ ಯುಪಿಐ ಮತ್ತು ಐಎಂಪಿಎಸ್ ವ್ಯವಸ್ಥೆಗಳನ್ನು ಜಾರಿಗೆ ತರಲಾಗಿದೆ. ಈ ಸೇವೆಗಳ ಸಮರ್ಪಕ ಅನುಷ್ಠಾನಕ್ಕಾಗಿ ಬ್ಯಾಂಕ್ ಸಿಬ್ಬಂದಿಗೆ ವಿಶೇಷ ತರಬೇತಿಯನ್ನು ನೀಡಲಾಗುತ್ತಿದೆ ಎಂದು ಅವರು ತಿಳಿಸಿದರು.ಈ ಸಂದರ್ಭ ಬ್ಯಾಂಕಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗೋಪಾಲಕೃಷ್ಣ ಭಟ್, ಮಹಾಪ್ರಬಂಧಕ ಸುನಿಲ್ ಕುಮಾರ್ ಹೊಳ್ಳ ಹಾಗೂ ಹಿರಿಯ ಅಧಿಕಾರಿಗಳು ಇದ್ದರು.
---------------