ಕೊಪ್ಪಳದಲ್ಲಿ ಈ ವರ್ಷ ಮಾವು ಬಂಪರ್!

| Published : Mar 04 2025, 12:33 AM IST

ಸಾರಾಂಶ

ಕಳೆದ ವರ್ಷ ಬರ ಮತ್ತು ಅತಿಯಾದ ಬಿಸಿಲು ಇದ್ದಿದ್ದರಿಂದ ಮಾವು ಅಷ್ಟು ಚೆನ್ನಾಗಿ ಬಂದಿರಲಿಲ್ಲ. ಆದರೆ, ಈ ವರ್ಷ ಮಳೆಯೂ ವಿಪರೀತವಾಗಿರುವುದರಿಂದ ಮತ್ತು ಸೂಕ್ತ ವಾತಾವರಣ ಇರುವುದರಿಂದ ನಿರೀಕ್ಷೆ ಮೀರಿ ಮಾವು ಫಸಲು ಬರುವ ಸಾಧ್ಯತೆ ಇದೆ ಎನ್ನುತ್ತಾರೆ ತೋಟಗಾರಿಕಾ ಇಲಾಖೆಯ ಅಧಿಕಾರಿಗಳು.

ಕೊಪ್ಪಳ:

ರಾಜ್ಯದಲ್ಲಿಯೇ ಅತಿ ಹೆಚ್ಚು ಮಾವು ಬೆಳೆಯುವ ಜಿಲ್ಲೆಯೊಂದಾಗಿರುವ ಕೊಪ್ಪಳ ಜಿಲ್ಲೆಯಲ್ಲಿ ಪ್ರಸಕ್ತ ವರ್ಷ ಮಾವಿನ ಬೆಳೆ ಸಮೃದ್ಧವಾಗಿ ಬಂದಿದ್ದು, ಏಪ್ರಿಲ್ ತಿಂಗಳ ವೇಳೆಗೆ ಫಲವೂ ಪ್ರಾರಂಭವಾಗಲಿದೆ.

ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಮಾವು ಹೂ ಚೆನ್ನಾಗಿಯೇ ಬಿಟ್ಟಿದ್ದು, ಈಗಾಗಲೇ ಬಹುತೇಕ ಕಾಯಿ ಸಹ ಬಿಟ್ಟಿದೆ. ಬಂಪರ್ ಬೆಳೆ ಬರುವ ನಿರೀಕ್ಷೆ ಇದೆ ಎನ್ನುತ್ತಾರೆ ರೈತರು.

ಕಳೆದ ವರ್ಷ ಬರ ಮತ್ತು ಅತಿಯಾದ ಬಿಸಿಲು ಇದ್ದಿದ್ದರಿಂದ ಮಾವು ಅಷ್ಟು ಚೆನ್ನಾಗಿ ಬಂದಿರಲಿಲ್ಲ. ಆದರೆ, ಈ ವರ್ಷ ಮಳೆಯೂ ವಿಪರೀತವಾಗಿರುವುದರಿಂದ ಮತ್ತು ಸೂಕ್ತ ವಾತಾವರಣ ಇರುವುದರಿಂದ ನಿರೀಕ್ಷೆ ಮೀರಿ ಮಾವು ಫಸಲು ಬರುವ ಸಾಧ್ಯತೆ ಇದೆ ಎನ್ನುತ್ತಾರೆ ತೋಟಗಾರಿಕಾ ಇಲಾಖೆಯ ಅಧಿಕಾರಿಗಳು.

ಕೊಪ್ಪಳ ಕೇಸರ:

ಕೊಪ್ಪಳ ತೋಟಗಾರಿಕೆ ಇಲಾಖೆ ಕೊಪ್ಪಳ ಕೇಸರ್ ಎಂದು ಬ್ರಾಂಡ್ ಸಹ ಮಾಡಿದ್ದು, ಈಗ ವಿಶ್ವದಾದ್ಯಂತ ಕೊಪ್ಪಳ ಕೇಸರ್ ಮಾವಿಗೆ ವಿಶೇಷ ಬೇಡಿಕೆ ಮತ್ತು ಬೆಲೆ ಇದೆ. ಕೊಪ್ಪಳ ಜಿಲ್ಲೆಯಲ್ಲಿ ಕೊಪ್ಪಳ ಕೇಸರ್ ಮಾರ್ಚ್ ತಿಂಗಳಲ್ಲಿಯೇ ಬರುವುದರಿಂದ ಮಾರುಕಟ್ಟೆಯಲ್ಲಿ ಭಾರಿ ಬೇಡಿಕೆಯೂ ಬರುತ್ತದೆ.

ಅಡ್ವಾನ್ಸ್ ಬುಕ್ಕಿಂಗ್:

ಕೊಪ್ಪಳ ಕೇಸರ ಮಾವು ಬೆಳೆಗಾರರೊಂದಿಗೆ ವಿವಿಧ ಕಂಪನಿಗಳು ಈಗಾಗಲೇ ಒಡಂಬಡಿಕೆ ಮಾಡಿಕೊಂಡಿವೆ. ₹200ಕ್ಕೆ ಕೆಜಿಯಂತೆ ನೀಡಲು ಒಪ್ಪಿವೆ. ಈ ಕಂಪನಿಗಳು ಮಾವು ರಫ್ತು ಮಾಡಲಿದೆ.

15 ಸಾವಿರ ಎಕರೆ:

ಕೊಪ್ಪಳ ಜಿಲ್ಲೆಯಲ್ಲಿ ಸುಮಾರು 15 ಸಾವಿರ ಎಕರೆ ಪ್ರದೇಶದಲ್ಲಿ ಮಾವು ಬೆಳೆದಿದ್ದಾರೆ. ಇದರಲ್ಲಿ ಶೇ. 75ರಷ್ಟು ಕೊಪ್ಪಳ ಕೇಸರ ಮಾವು ಇದ್ದು, ಉಳಿದಂತೆ ಬೇನಿಷ್, ಆಪೂಸ್ ಮೊದಲಾದ ತಳಿಗಳಿವೆ.

ಜಿಲ್ಲೆಯಲ್ಲಿ ಪ್ರಸಕ್ತ ವರ್ಷ ಮಾವು ಬಂಪರ್ ಬೆಳೆ ಬಂದಿದೆ. ಪ್ರಸಕ್ತ ವರ್ಷ 15 ಸಾವಿರ ಎಕರೆ ಪ್ರದೇಶದಲ್ಲಿ ಮಾವು ಬೆಳೆಯಲಾಗಿದೆ. ಈಗಾಗಲೇ ಉತ್ತಮ ಫಲ ಬಂದಿದ್ದು, ಮಾರ್ಚ್ ಅಂತ್ಯಕ್ಕೆ ಮಾರುಕಟ್ಟೆಗೆ ಲಭ್ಯವಾಗಲಿದೆ. ಎಂದು ಕೊಪ್ಪಳ ತೋಟಗಾರಿಕಾ ಇಲಾಖೆಯ ಡಿಡಿ ಕೃಷ್ಣ ಉಕ್ಕುಂದ ಹೇಳಿದರು.