- ಪತ್ನಿ ಸುನಿತಾಳ ಕಿರುಕುಳದಿಂದ ಮಗ ಸಾವು: ತಾಯಿ ದೂರು
- - -ಹೊನ್ನಾಳಿ: ಇಲ್ಲಿಗೆ ಸಮೀಪದ ತುಂಗಾ ಚಾನಲ್‌ಗೆ ಗುರುವಾರ ಸಂಜೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದ ನ್ಯಾಮತಿಯ ಲೈಸನ್ಸ್ ಸರ್ವೆಯರ್ ಮಣಿಕಂಠನ (31) ಶವ ಶನಿವಾರ ಬೆಳಗ್ಗೆ ತಾಲೂಕಿನ ಸೊರಟೂರು ಸಮೀಪ ಪತ್ತೆಯಾಗಿದೆ.
ಗುರುವಾರ ಸಂಜೆ ಸುಮಾರು 4 ಗಂಟೆಗೆ ಎಚ್.ಕಡದಕಟ್ಟೆ ಸಮೀಪದ ತುಂಗಾ ಚಾನಲ್ ಬಳಿ ತನ್ನ ಬುಲೆಟ್, ಚಪ್ಪಲಿ ಹಾಗೂ ಬ್ಯಾಗ್ ಬಿಟ್ಟು ಚಾನಲ್‌ಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಆತ್ಮಹತ್ಯೆ ಮಾಡಿಕೊಳ್ಳುವ ಮುಂಚೆ ತನ್ನ ಮೊಬೈಲ್‌ನ ವಾಟ್ಸಪ್ ಡಿಪಿಯಲ್ಲಿ ಬುಲೆಟ್ ಚಿತ್ರ ಹಾಕಿ ಚಾನಲ್‌ಗೆ ಹಾರಿದ್ದಾನೆ ಎಂದು ಮೂಲಗಳು ತಿಳಿಸಿದ್ದವು. ಹೊನ್ನಾಳಿ ಪೊಲೀಸ್ ಠಾಣೆಯಲ್ಲಿ ಮಣಿಕಂಠ ನಾಪತ್ತೆ ಬಗ್ಗೆ ದೂರು ದಾಖಲಾಗಿತ್ತು.ಶುಕ್ರವಾರ ಈಜು ತಜ್ಞರು ಹಾಗೂ ಅಗ್ನಿಶಾಮಕದಳ ಅಧಿಕಾರಿಗಳು ಮಣಿಕಂಠನ ಶವಕ್ಕಾಗಿ ಹುಡುಕಾಟ ನಡೆಸಿದ್ದರು. ಆದರೆ ಶವ ಪತ್ತೆಯಾಗಿರಲಿಲ್ಲ. ಶನಿವಾರ ಬೆಳಗ್ಗೆ ಶವ ಸೊರಟೂರು ಬಳಿ ಪತ್ತೆಯಾಗಿದೆ.
ತಾಯಿ ದೂರು:
ಮೂರು ತಿಂಗಳ ಹಿಂದಷ್ಟೇ ನನ್ನ ಮಗನಿಗೆ ಸುನಿತಾಳ ಜೊತೆ ಮದುವೆ ಮಾಡಿಕೊಡಲಾಗಿತ್ತು. ಮದುವೆ ಆದಾಗಿನಿಂದಲೂ ನನ್ನ ಮಗ ಅವಳಿಂದ ಬಹಳ ಹಿಂಸೆ ಅನುಭವಿಸಿದ್ದ. ಅಲ್ಲದೇ ಆಕೆಗೆ ಮೊದಲೇ ಪ್ರಿಯಕರನೂ ಇದ್ದ ಎಂದು ನಂತರ ತಿಳಿದು ಬಂದಿದೆ. ಈ ಬಗ್ಗೆ ಮಗ ಡೆತ್‌ನೋಟ್ ಬರೆದಿದ್ದಾನೆ. ಆದ್ದರಿಂದ ನನ್ನ ಮಗ ಮಣಿಕಂಠನ ಸಾವಿಗೆ ಕಾರಣರಾದ ಸುನಿತಾ, ಆಕೆಯ ಪ್ರಿಯಕರ, ಸುನಿತಾಳ ತಂದೆ-ತಾಯಿ ಹಾಗೂ ಸಹೋದರ ವಿರುದ್ಧ ಕ್ರಮ ಕೈಗೊಂಡು ನ್ಯಾಯ ಒದಗಿಸಿಕೊಡಿ ಎಂದು ಹೊನ್ನಾಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
- - --18ಎಚ್.ಎಲ್.ಐ2: ಮಣಿಕಂಠ.