ಹೊನ್ನಾಳಿ, ನ್ಯಾಮತಿ ಅವಳಿ ತಾಲೂಕುಗಳು ಹಾಗೂ ರಾಜ್ಯದ ಬಹುತೇಕ ಇತರ ತಾಲೂಕುಗಳಲ್ಲಿ ಮಳೆ ಇಲ್ಲದೇ ಬೆಳೆಗಳು ಸಂಪೂರ್ಣ ಒಣಗಿ, ರೈತರ ಬದುಕು ದುಸ್ತರವಾಗಿದೆ. ಹೀಗಿದ್ದರೂ ರಾಜ್ಯದ ಕಾಂಗ್ರೆಸ್ ಸರ್ಕಾರ ಭೀಕರ ಬರಗಾಲದ ಬಗ್ಗೆ ಕಿಂಚಿತ್ತೂ ಚಿಂತಿಸದೇ ಸತ್ತುಹೋಗಿದೆ. ರೈತರು, ಸಾಮಾನ್ಯ ಜನರು ಸರ್ಕಾರದ ಬಗ್ಗೆ ಹಿಡಿಶಾಪ ಹಾಕುತ್ತಿದ್ದಾರೆ ಎಂದು ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.

- ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ನೇತೃತ್ವ । ರಾಜ್ಯ ಸರ್ಕಾರ ವಿರುದ್ಧ ಮುಖಂಡರ ವಾಗ್ದಾಳಿ

- - -

ಕನ್ನಡಪ್ರಭ ವಾರ್ತೆ ಹೊನ್ನಾಳಿ

ಹೊನ್ನಾಳಿ, ನ್ಯಾಮತಿ ಅವಳಿ ತಾಲೂಕುಗಳು ಹಾಗೂ ರಾಜ್ಯದ ಬಹುತೇಕ ಇತರ ತಾಲೂಕುಗಳಲ್ಲಿ ಮಳೆ ಇಲ್ಲದೇ ಬೆಳೆಗಳು ಸಂಪೂರ್ಣ ಒಣಗಿ, ರೈತರ ಬದುಕು ದುಸ್ತರವಾಗಿದೆ. ಹೀಗಿದ್ದರೂ ರಾಜ್ಯದ ಕಾಂಗ್ರೆಸ್ ಸರ್ಕಾರ ಭೀಕರ ಬರಗಾಲದ ಬಗ್ಗೆ ಕಿಂಚಿತ್ತೂ ಚಿಂತಿಸದೇ ಸತ್ತುಹೋಗಿದೆ. ರೈತರು, ಸಾಮಾನ್ಯ ಜನರು ಸರ್ಕಾರದ ಬಗ್ಗೆ ಹಿಡಿಶಾಪ ಹಾಕುತ್ತಿದ್ದಾರೆ ಎಂದು ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಆಕ್ರೋಶ ವ್ಯಕ್ತಪಡಿಸಿದರು.

ಜಿಲ್ಲಾ ಮತ್ತು ತಾಲೂಕು ಬಿಜೆಪಿ ಮೋರ್ಚಾ ಹಾಗೂ ಬಿಜೆಪಿ ಮಂಡಲ ವತಿಯಿಂದ ಶುಕ್ರವಾರ ಹಮ್ಮಿಕೊಂಡಿದ್ದ ಬರ ಸಮೀಕ್ಷೆಯಲ್ಲಿ ತಾಲೂಕಿನ ಎಚ್.ಕಡದಕಟ್ಟೆ ಗ್ರಾಮದ ಜಮೀನೊಂದಿಕ್ಕೆ ಭೇಟಿ ನೀಡಿ ಒಣಗಿದ ಬೆಳೆಗಳ ಪರಿಶೀಲಿಸಿದ ನಂತರ ಅವರು ಮಾತನಾಡಿದರು. ರಾಜ್ಯ ಸರ್ಕಾರ ತಕ್ಷಣ ಅವಳಿ ತಾಲೂಕುಗಳು ಸೇರಿದಂತೆ ಭೀಕರ ಬರಗಾಲ ಎದುರಿಸುವ ತಾಲೂಕುಗಳನ್ನು ಬರಗಾಲ ಪೀಡಿತ ತಾಲೂಕುಗಳ ಪಟ್ಟಿಗೆ ಸೇರಿಸಿ ಸೂಕ್ತ ಪರಿಹಾರ ನೀಡಬೇಕು. ತಪ್ಪಿದಲ್ಲಿ ಬೀದಿಗಿಳಿದು ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಕುರ್ಚಿ ಕಾದಾಟದಲ್ಲಿ ಈಗಾಗಲೇ ಮೂರೂವರೆ ವರ್ಷಗಳನ್ನು ಕಳೆದಿದೆ. ಮುಂದಿನ ಒಂದೂವರೆ ವರ್ಷದ ಆಡಳಿತದಲ್ಲಿ ಮಂತ್ರಿ ಸ್ಥಾನಕ್ಕೆ ನವದೆಹಲಿಯಲ್ಲಿ ಶಾಸಕರು ಕುಳಿತು ಸಮಯ ವ್ಯರ್ಥ ಮಾಡುತ್ತಿದ್ದಾರೆ. ಭೀಕರ ಬರಗಾಲದ ಬಗ್ಗೆ ಯಾವೊಬ್ಬ ಶಾಸಕರೂ ಸ್ಥಳ ಪರಿಶೀಲನೆ ಮಾಡುತ್ತಿಲ್ಲ ಎಂದು ಟೀಕಿಸಿದರು.

ಬಿಎಸ್‌ವೈ ಸಿಎಂ ಆಗಿದ್ದ ಸಂದರ್ಭ ಹೆಚ್ಚು ಮಳೆಯಿಂದ ಬೆಳೆ, ಮನೆಗಳಿಗೆ ಹಾನಿಯಾಗಿದ್ದನ್ನು ಸಮರ್ಪಕವಾಗಿ ನಿಭಾಯಿಸಿದ್ದರು. ಈಗ ಅನಾವೃಷ್ಠಿಯಿಂದ ಬೆಳೆಗಳು ಹಾಳಾಗಿದ್ದರೂ ಸಿಎಂ ಡಿ.ಕೆ.ಶಿವಕುಮಾರ್, ಹಿರಿಯ ಪ್ರಬುದ್ಧ ರಾಜಕಾರಣಿ ಎನಿಸಿರುವ ಮಾಜಿ ಸಿ.ಎಂ ಸಿದ್ದರಾಮಯ್ಯ ಹಾಗೂ ಇತರ ನಾಯಕರು ಸಚಿವ ಸಂಪುಟ ವಿಸ್ತರಣೆಗೆ ತಮ್ಮ ಬೆಂಬಲಿಗರ ಪಟ್ಟಿ ಹಿಡಿದುಕೊಂಡು ಅಪ್ರಬುದ್ಧ ರಾಹುಲ್‌ ಗಾಂಧಿ ಮುಂದೆ ಮಂಡಿಯೂರಿದ್ದಾರೆ ಎಂದ ಅವರು, ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಜು.22ರಂದು ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.

ಬಿಜೆಪಿ ನೂತನ ಜಿಲ್ಲಾಧ್ಯಕ್ಷ ನಾಗರಾಜ ಮೆಳ್ಳಿಕಟ್ಟೆ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತಕ್ಕೆ ಬಂದಾಗಲೆಲ್ಲ ಭೀಕರ ಬರಗಾಲ ಕಟ್ಟಿಟ್ಟ ಬುತ್ತಿ. ಕಾಂಗ್ರೆಸ್‌ ಪಕ್ಷವು ರಾಜ್ಯದ ಜನತೆಗೆ ಶಾಪವಿದ್ದಂತೆ. ತಕ್ಷಣ ಬರಗಾಲಪೀಡಿತ ತಾಲೂಕುಗಳ ಘೋಷಣೆ ಮಾಡಬೇಕು ಎಂದರು.

ರಾಜ್ಯ ರೈತ ಮೋರ್ಚಾ ಉಪಾಧ್ಯಕ್ಷ ಲೋಕಿಕೆರೆ ನಾಗರಾಜ ಮಾತನಾಡಿ, ಬಿಜೆಪಿ ರೈತ ಮೋರ್ಚಾ ಅಧ್ಯಕ್ಷರ ಆದೇಶದಂತೆ ಬಿಜೆಪಿ 4 ತಂಡಗಳನ್ನಾಗಿ ರಚಿಸಿ ಇದೇ ಮೊದಲ ಬಾರಿಗೆ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ನೇತೃತ್ವದಲ್ಲಿ ಬರ ಅಧ್ಯಯನ ಪ್ರಾರಂಭ ಮಾಡಲಾಗಿದೆ ಎಂದು ಹೇಳಿದರು.

ದಾವಣಗೆರೆ ಜಿಲ್ಲೆಯಲ್ಲಿ ಒಟ್ಟು 2.15 ಲಕ್ಷ ಹೆಕ್ಟರ್ ಜಮೀನಿನಲ್ಲಿ ಮೆಕ್ಕೆಜೋಳ ಬಿತ್ತನೆ ಆಗಬೇಕಿತ್ತು. ಆದರೆ, ಇದುವರೆಗೆ ಕೇವಲ 37 ಸಾವಿರ ಹೆಕ್ಟರ್ ಜಮೀನಿನಲ್ಲಿ ಮಾತ್ರ ಬಿತ್ತನೆಯಾಗಿದೆ. ಬಿತ್ತಿದ ನಂತರ ಮೇಲೆ ಬಂದ ಬೆಳೆ ಒಣಗಿದೆ. ಕಾಂಗ್ರೆಸ್ ಶಾಸಕರು ಏನು ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದರು.

ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಚಂದ್ರಶೇಖರ ಪುಜಾರ್ ಮಾತನಾಡಿ, ಭೀಕರ ಬರಗಾಲದಿಂದ ಬೆಳೆಗಳು ಸುಟ್ಟುಹೋಗಿವೆ ಸರ್ಕಾರ ಪ್ರತಿ ಎಕರೆಗೆ ₹50 ಸಾವಿರ ಪರಿಹಾರ ಘೋಷಿಸಿ ಆದಷ್ಟು ಬೇಗನೆ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.

ಹಿಂದುಳಿದ ವರ್ಗಗಳ ಬಿಜೆಪಿ ಜಿಲ್ಲಾಧ್ಯಕ್ಷ ಎಸ್.ಎಸ್.ಬೀರಪ್ಪ, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಧನಂಜಯ ಕಡ್ಲೆಬಾಳ್, ತಾಲೂಕು ರೈತ ಮೋರ್ಚ ಅಧ್ಯಕ್ಷ ತರಗನಹಳ್ಳಿ ರಮೇಶ್‌ಗೌಡ, ತಾಲೂಕು ಬಿಜೆಪಿ ಮಾಜಿ ಅಧ್ಯಕ್ಷ ಜೆ.ಕೆ.ಸುರೇಶ್, ಜಿಪಂ ಮಾಜಿ ಸದಸ್ಯ ಎಂ.ಆರ್.ಮಹೇಶ್, ಮುಖಂಡರುಗಳಾದ ಎಂ.ಎಸ್.ಪಾಲಾಕ್ಷಪ್ಪ, ಸಿ.ಆರ್.ಶಿವಾನಂದ, ಮಾರುತಿನಾಯ್ಕ, ದೊಡ್ಡೇರಿ ಗಿರೀಶ್ ಹಾಗೂ ಇತರರು ಇದ್ದರು.

- - -

-18ಎಚ್.ಎಲ್.ಐ1:

ಎಚ್.ಕಡದಕಟ್ಟೆ ಗ್ರಾಮದ ಜಮೀನಿನಲ್ಲಿ ಬಿಜೆಪಿಯಿಂದ ಬರ ಸಮೀಕ್ಷೆ ನಡೆಸಲಾಯಿತು.