ಮಣಿಪಾಲ: ಇಲ್ಲಿನ ಮಣಿಪಾಲ್‌ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ) ವಿವಿ ಮತ್ತು ಜಾಗತಿಕ ವಿಜ್ಞಾನ ಮತ್ತು ತಂತ್ರಜ್ಞಾನ ಕಂಪನಿ ಮರ್ಕ್ ಜೊತೆ ಮಹತ್ವದ ಒಪ್ಪಂದಕ್ಕೆ ಸಹಿ ಹಾಕಿದೆ. ಆರೋಗ್ಯ ವಿಜ್ಞಾನದಲ್ಲಿ ಸಂಶೋಧನೆ ಮತ್ತು ಉದ್ಯಮ ಮತ್ತು ಶೈಕ್ಷಣಿಕ ವಲಯದ ನಡುವೆ ಸಹಯೋಗದಲ್ಲಿ ವಿದ್ಯಾರ್ಥಿಗಳಿಗೆ ತರಬೇತಿ ನೀಡುವುದು ಈ ಒಪ್ಪಂದದ ಮುಖ್ಯ ಉದ್ದೇಶವಾಗಿದೆ. ಈ ಸಹಯೋಗದ ಅಂಗವಾಗಿ ಮರ್ಕ್ ಹೆಲ್ತ್‌ಕೇರ್‌ನ ಪ್ರಮುಖ ಕಾರ್ಯಕ್ರಮವಾದ ಕ್ಯಾಟಲಿಸ್ಟ್ ಪ್ರೋಗ್ರಾಂ ಅನ್ನು ಮಾಹೆಯಲ್ಲಿ ಪ್ರಾರಂಭಿಸಲಾಗಿದೆ. ಈ ಮೂರು ತಿಂಗಳ ತರಬೇತಿ ಕಾರ್ಯಕ್ರಮವು ವಿದ್ಯಾರ್ಥಿಗಳಿಗೆ ತಜ್ಞರ ಮೂಲಕ ಪ್ರಾಯೋಗಿಕ ಅನುಭವ, ವಿಷಯ ಜ್ಞಾನ ಮತ್ತು ಉದ್ಯಮದ ನೇರ ಅನುಭವವನ್ನು ನೀಡಲಿದೆ. ಇದರಿಂದ ವಿದ್ಯಾರ್ಥಿಗಳು ಸಂಶೋಧನೆ ಮತ್ತು ಅಭಿವೃದ್ಧಿ ವಲಯದಲ್ಲಿ ವೃತ್ತಿ ಮಾಡಲು ನೆರವಾಗಲಿದೆ. ಈ ಒಪ್ಪಂದದ ಬಗ್ಗೆ ಮಾಹೆಯ ಸಹ ಕುಲಪತಿ (ಆರೋಗ್ಯ ವಿಜ್ಞಾನ) ಡಾ. ಶರತ್ ಕೆ. ರಾವ್, ‘ಮರ್ಕ್ ಜೊತೆಗಿನ ಈ ಒಪ್ಪಂದವು ಭವಿಷ್ಯದ ಪ್ರತಿಭೆಗಳನ್ನು ರೂಪಿಸುವ ಮಾಹೆಯ ಗುರಿಗೆ ಪೂರಕವಾಗಿದೆ. ಉದ್ಯಮ ಮತ್ತು ಶಿಕ್ಷಣದ ನಡುವಿನ ಅಂತರವನ್ನು ಕಡಿಮೆ ಮಾಡುವ ಮೂಲಕ, ನಮ್ಮ ವಿದ್ಯಾರ್ಥಿಗಳು ಆರೋಗ್ಯ ಕ್ಷೇತ್ರದ ನೈಜ ಸಮಸ್ಯೆಗಳು ಮತ್ತು ಆಧುನಿಕ ತಂತ್ರಜ್ಞಾನಗಳ ಬಗ್ಗೆ ಕಲಿಯಲು ಸಾಧ್ಯವಾಗುತ್ತದೆ. ಕ್ಯಾಟಲಿಸ್ಟ್'''' ಕಾರ್ಯಕ್ರಮವು ವಿದ್ಯಾರ್ಥಿಗಳಿಗೆ ಉಪಯುಕ್ತವಾಗಲಿದೆ ಎಂದು ತಿಳಿಸಿದರು.

ಮರ್ಕ್ ಹೆಲ್ತ್‌ಕೇರ್ ಆರ್ ಅಂಡ್ ಡಿ ಇಂಡಿಯಾದ ಮುಖ್ಯಸ್ಥೆ ಸುನೀಲಾ ಥಟ್ಟೆ ಅವರು ಮಾತನಾಡಿ, ‘ಶೈಕ್ಷಣಿಕ ಜ್ಞಾನವು ವೃತ್ತಿಗೆ ಪೂರಕವಾಗಿರಬೇಕು ಮತ್ತು ವಿದ್ಯಾರ್ಥಿಗಳು ಅದಕ್ಕೆ ಸಿದ್ಧರಾಗಿರಬೇಕು ಎಂಬುದು ಮರ್ಕ್‌ನ ಆಶಯ. ಮಾಹೆಯ ಜತೆ ಈ ಒಪ್ಪಂದಕ್ಕೆ ಕೈಗೊಂಡಿರುವುದು ಸಂತಸದ ವಿಷಯʼ ಎಂದು ಹೇಳಿದರು. ಈಸಮಾರಂಭದಲ್ಲಿ ಮಾಹೆಯ ಕುಲಸಚಿವ ಡಾ. ಪಿ. ಗಿರಿಧರ್ ಕಿಣಿ, ಕಾರ್ಪೊರೇಟ್ ಸಂಬಂಧಗಳ ನಿರ್ದೇಶಕ ಡಾ. ಹರೀಶ್ ಕುಮಾರ್, ಮಣಿಪಾಲ್ ಫಾರ್ಮಾಸ್ಯುಟಿಕಲ್ ಸೈನ್ಸಸ್ ಕಾಲೇಜಿನ ಪ್ರಿನ್ಸಿಪಾಲ್‌ ಡಾ. ಶ್ರೀನಿವಾಸ್ ಮುತಾಲಿಕ್ ಹಾಗೂ ಮರ್ಕ್ ಸಂಸ್ಥೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.