ದೇಶಕ್ಕೆ ಮನಮೋಹನ್ ಸಿಂಗ್ ಕೊಡುಗೆ ಅಪಾರ

| Published : Dec 28 2024, 12:46 AM IST

ಸಾರಾಂಶ

ರಾಮನಗರ: ಶ್ರೇಷ್ಠ ಅರ್ಥಶಾಸ್ತ್ರಜ್ಞರಾಗಿದ್ದ ಡಾ.ಮನಮೋಹನ್ ಸಿಂಗ್ ಅವರು ಮುಕ್ತ ಆರ್ಥಿಕ ನೀತಿಯ ಮೂಲಕ ಭಾರತದ ಅಭಿವೃದ್ದಿಗೆ ನವ ಚೈತನ್ಯ ನೀಡಿದ ಮಹಾ ಪುರುಷ ಎಂದು ಮಾಜಿ ಶಾಸಕ ಸಿ.ಎಂ.ಲಿಂಗಪ್ಪ ಬಣ್ಣಿಸಿದರು.

ರಾಮನಗರ: ಶ್ರೇಷ್ಠ ಅರ್ಥಶಾಸ್ತ್ರಜ್ಞರಾಗಿದ್ದ ಡಾ.ಮನಮೋಹನ್ ಸಿಂಗ್ ಅವರು ಮುಕ್ತ ಆರ್ಥಿಕ ನೀತಿಯ ಮೂಲಕ ಭಾರತದ ಅಭಿವೃದ್ದಿಗೆ ನವ ಚೈತನ್ಯ ನೀಡಿದ ಮಹಾ ಪುರುಷ ಎಂದು ಮಾಜಿ ಶಾಸಕ ಸಿ.ಎಂ.ಲಿಂಗಪ್ಪ ಬಣ್ಣಿಸಿದರು.

ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಆರ್ಥಿಕ ತಜ್ಞ, ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರ ಆತ್ಮಕ್ಕೆ ಶಾಂತಿ ಕೋರಿ ಶ್ರದ್ಧಾಂಜಲಿ ಸಲ್ಲಿಸಿ ಮಾತನಾಡಿದ ಅವರು, ಸರಳ, ಪ್ರಾಮಾಣಿಕ ವ್ಯಕ್ತಿಯಾಗಿ ಇಡೀ ವಿಶ್ವದ ಗಮನ ಸೆಳೆದ ಶ್ರೇಷ್ಠ ಅರ್ಥಶಾಸ್ತ್ರಜ್ಞ ಡಾ.ಮನಮೋಹನ್ ಸಿಂಗ್ ನಿಧನ ನೋವು ತಂದಿದೆ. ಅವರು ರಿಸರ್ವ್ ಬ್ಯಾಂಕ್ ಗವರ್ನರ್ ಆಗಿ ಸೇವೆ ಸಲ್ಲಿಸಿ ನಂತರ ಹಣಕಾಸು ಮಂತ್ರಿಯಾಗಿ ಮುಕ್ತ ಆರ್ಥಿಕ ನೀತಿಯ ಮೂಲಕ ಭಾರತದ ಅಭಿವೃದ್ಧಿಗೆ ನವ ಚೈತನ್ಯ ನೀಡಿದವರು ಎಂದರು.

ಹಣಕಾಸು ನಿರ್ವಹಣೆ, ಆರ್ಥಿಕ ನೀತಿ, ಅವರಲ್ಲಿದ್ದ ಅಪಾರ ಜ್ಞಾನದಿಂದ ಐಟಿ - ಬಿಟಿ ಕ್ರಾಂತಿಗೆ ನಾಂದಿ ಹಾಡಿ ವಿಶ್ವವೇ ಭಾರತದತ್ತ ತಿರುಗಿ ನೋಡುವಂತೆ ಮಾಡಿತು. ಅವರು ಪ್ರಧಾನಿಯಾಗಿದ್ದಾಗ ದೇಶದ ಜಿಡಿಪಿ ಶೇಕಡ 10.5ರಷ್ಟಿತ್ತು ಎಂಬುದನ್ನು ಗಮನಿಸಿದರೆ ದೇಶದ ಆಡಳಿತ ವ್ಯವಸ್ಥೆ ಸುಧಾರಣೆ ಆಗಿತ್ತು ಎಂಬುದನ್ನು ತೋರಿಸುತ್ತದೆ ಎಂದು ಸ್ಮರಿಸಿದರು.

ಭಾರತದಲ್ಲಿ ಬಿಜೆಪಿ ಸರ್ಕಾರ ಜಾರಿ ಮಾಡಿದ ನೋಟು ಅಮಾನ್ಯವನ್ನು ತೀವ್ರವಾಗಿ ವಿರೋಧಿಸಿದ್ದರು. ದೇಶದ ಜನರ ಮೇಲೆ ಆಗುವ ಪರಿಣಾಮಗಳ ಬಗ್ಗೆ ದೂರದೃಷ್ಟಿತ್ವ ಇರಿಸಿಕೊಂಡು ಜನಪರ ಕಾರ್ಯಗಳನ್ನು ನೀಡುತ್ತಿದ್ದ ಮನಮೋಹನ್ ಸಿಂಗ್ ಅವರನ್ನು ಕಳೆದುಕೊಂಡಿರುವುದು ದೇಶ ಮತ್ತು ಕಾಂಗ್ರೆಸ್ ಪಕ್ಷಕ್ಕೆ ತುಂಬಲಾರದ ನಷ್ಟ ಎಂದರು.

ರಾಷ್ಟ್ರಪಿತ ಮಹಾತ್ಮ ಗಾಂಧಿ ಹೆಸರಿನಲ್ಲಿ ಅನುಷ್ಟಾನ ಮಾಡಿದ ನರೇಗಾ ಯೋಜನೆ, ಆಹಾರ ಭದ್ರತಾ ಕಾಯ್ದೆ ಜಾರಿಗೆ ತಂದರು. ಇದರಿಂದ ಬಡತನ ನಿವಾರಣೆಯಾಗಲು ನೆರವಾಯಿತು. ಅವರಿಗೆ ಎರಡನೇ ಅವಧಿಯಲ್ಲಿ ಪೂರ್ಣ ಸಹಕಾರ ಕೊಟ್ಟು ಹಸ್ತಕ್ಷೇಪ ಮಾಡದೆ ಹೋಗಿದಿದ್ದರೆ ಇಂದು ಸಹ ಕೇಂದ್ರದಲ್ಲಿ ಕಾಂಗ್ರೆಸ್ ನೇತೃತ್ದದ ಸರ್ಕಾರ ಅಧಿಕಾರದಲ್ಲಿ ಇರುತ್ತಿತ್ತು ಎಂದು ಸಿ.ಎಂ.ಲಿಂಗಪ್ಪ ಹೇಳಿದರು.

ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿ (ಶಶಿ) ಮಾತನಾಡಿ, ಮನಮೋಹನ್ ಸಿಂಗ್ ನಮ್ಮನ್ನು ದೈಹಿಕವಾಗಿ ಅಗಲಿರಬಹುದು. ಆದರೆ, ಅವರು ದೇಶಕ್ಕೆ ಕೊಟ್ಟ ಕೊಡುಗೆಗಳ ಮೂಲಕ ಜೀವಂತವಾಗಿದ್ದಾರೆ. ದೇಶ ಸಂಕಷ್ಟದಲ್ಲಿದ್ದಾಗ ಅವರ ನೀತಿಗಳು ದೇಶವನ್ನು ಆರ್ಥಿಕ ಸಂಕಷ್ಟದಿಂದ ಕಾಪಾಡಿತು. ಅವರ ದಕ್ಷತೆ, ಪ್ರಾಮಾಣಿಕತೆಯ ಪರಿಣಾಮ ದೇಶದ ಪ್ರಧಾನಿಯಾದರು ಎಂದರು.

ಮುಕ್ತ ಮಾರುಕಟ್ಟೆ ವ್ಯವಸ್ಥೆಗೆ ಮನಮೋಹನ್ ಸಿಂಗ್ ಅವಕಾಶ ಕಲ್ಪಿಸಿದ ಕಾರಣ ದೇಶದಲ್ಲಿ ಉದ್ಯೋಗ ಸೃಷ್ಟಿಯಾಗಿದ್ದಷ್ಟೆ ಅಲ್ಲದೆ, ಖಾಸಗಿ ಬಂಡವಾಳ ಶಾಹಿ ಉದ್ಯಮಿಗಳಿಗೆ ಅವಕಾಶ ಸಿಕ್ಕಿತು. ಅವರಲ್ಲಿದ್ದ ಬದ್ದತೆಯಿಂದ ದೇಶವನ್ನು ಸಮರ್ಥವಾಗಿ ಮುನ್ನಡೆಸಿದ್ದವರಲ್ಲಿ ಅವರ ಕೊಡುಗೆ ಅಪಾರ ಎಂದು ಸ್ಮರಿಸಿದರು.

ತಾಲೂಕು ಗ್ಯಾರಂಟಿ ಸಮಿತಿ ಹಾಗೂ ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಎಚ್.ರಾಜು ಮಾತನಾಡಿ, ಮನಮೋಹನ್ ಸಿಂಗ್ ಅವರ ಪ್ರಧಾನಿಯಾಗಿ ಜನಮೆಚ್ಚುವ ಕಾರ್ಯಕ್ರಮಗಳನ್ನು ಕೊಟ್ಟ ಹೆಗ್ಗಳಿಕೆ ಅವರಿಗೆ ಸಲ್ಲುತ್ತದೆ. ಅಷ್ಟೆ ಅಲ್ಲ ವಿರೋಧ ಪಕ್ಷಗಳು ಅವರ ಕಾರ್ಯವನ್ನು ಮೆಚ್ಚಿ ಶ್ಲಾಘಿಸಿದ್ದನ್ನು ನೋಡಿದರೆ ಅವರ ಜನಪ್ರಿಯತೆ ಎಷ್ಟಿತ್ತು ಎಂಬುದು ಗೊತ್ತಾಗುತ್ತದೆ ಎಂದರು.

ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರು ಅಗಲಿದ ನಾಯಕ ಡಾ.ಮನಮೋಹನ್ ಸಿಂಗ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಎರಡು ನಿಮಿಷ ಮೌನಾಚರಣೆ ಮಾಡಿ ಗೌರವ ಸಲ್ಲಿಸಿದರು.

ಈ ವೇಳೆ ನಗರಸಭೆ ಉಪಾಧ್ಯಕ್ಷೆ ಆಯಿಷಾಬಾನು, ಸದಸ್ಯರಾದ ಬಿ.ಸಿ.ಪಾರ್ವತಮ್ಮ, ವಿಜಯಕುಮಾರಿ, ಗಿರಿಜಮ್ಮ, ಜಯಲಕ್ಷ್ಮಮ್ಮ, ಅಸ್ಮದ್, ನಾಗಮ್ಮ, ಬಿಳಗುಂಬ ಗ್ರಾಪಂ ಮಾಜಿ ಅಧ್ಯಕ್ಷ ಪ್ರಭಣ್ಣ ಮುಖಂಡರಾದ ಪ್ರವೀಣ, ಬಾನಂದೂರು ಗಂಗಾಧರ್, ಚನ್ನಮಾನಹಳ್ಳಿ ಉಮೇಶ್, ಲಕ್ಷ್ಮಿಕಾಂತ್, ರಮೇಶ, ವಿಜಿ, ತೌಸಿಫ್, ಅನಿಲ್ ಜೋಗೇಂದರ್, ವೇದ, ರಘು, ಗಂಗಾಧರ್, ಹರಳಪ್ಪ, ಪ್ರಭ, ವಸೀಂ, ರಾಮಣ್ಣ, ಉಮೇಶ್ ಇತರರು ಹಾಜರಿದ್ದರು.

27ಕೆಆರ್ ಎಂಎನ್ 1.ಜೆಪಿಜಿ

ರಾಮನಗರ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.