ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳಿಂದ ಮಾಜಿ ಪ್ರಧಾನಿಗೆ ಅಗೌರವ

| Published : Dec 28 2024, 12:46 AM IST

ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳಿಂದ ಮಾಜಿ ಪ್ರಧಾನಿಗೆ ಅಗೌರವ
Share this Article
  • FB
  • TW
  • Linkdin
  • Email

ಸಾರಾಂಶ

ಶೋಕಾಚರಣೆ ಹಿನ್ನೆಲೆಯಲ್ಲಿ ಮೈಸೂರಿನ ಅರಮನೆಯಲ್ಲಿ ಸಂಜೆ ದೀಪಾಲಂಕಾರ, ಪ್ರವಾಸಿಗರ ವೀಕ್ಷಣೆ ನಿರ್ಬಂಧಿಸಲಾಗಿತ್ತು. ಆದರೆ, ಇದಕ್ಕೆ ತದ್ವಿರುದ್ಧವಾಗಿ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳಿಗೆ ಸಂಗೀತ ಕಾರಂಜಿ ನಡೆಸುವ ಮೂಲಕ ಮಾಜಿ ಪ್ರಧಾನಿ ಶೋಕಾಚರಣೆಗಿಂತ ಪ್ರವಾಸಿಗರಿಂದ ಬರುವ ಹಣವೇ ಮುಖ್ಯವಾಗಿದೆ ಎಂಬಂತಾಗಿದೆ.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರ ನಿಧನ ಹಿನ್ನೆಲೆ ರಾಜ್ಯಸರ್ಕಾರ 7 ದಿನಗಳ ಕಾಲ ಯಾವುದೇ ಮನರಂಜನಾ ಕಾರ್ಯಕ್ರಮಗಳನ್ನು ನಡೆಸದೆ ಶೋಕಾಚರಣೆ ಮಾಡುವಂತೆ ಆದೇಶಿಸಿ ಅಧಿಸೂಚನೆ ಹೊರಡಿಸಿದ್ದರೂ ಕೂಡ ಕೆಆರ್ ಎಸ್ ನ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಆದೇಶವನ್ನು ಗಾಳಿಗೆ ತೂರಿದ್ದಾರೆ.

ಕೆಆರ್ ಎಸ್ ಬೃಂದಾವನದಲ್ಲಿ ಮನರಂಜನಾ ಕಾರ್ಯಕ್ರಮವನ್ನು‌ ನಡೆಸಿ ಸತತ 10 ವರ್ಷಗಳ ಕಾಲ ದೇಶದ ಪ್ರಧಾನಿಯಾಗಿದ್ದ ಮನ ಮೋಹನ್ ಸಿಂಗ್ ಅವರಿಗೆ ಅಪಮಾನ ಮಾಡುವ ಮೂಲಕ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಆದೇಶ ಉಲಂಘಿಸಿದ್ದಾರೆ.

ಶೋಕಾಚರಣೆ ಹಿನ್ನೆಲೆಯಲ್ಲಿ ಮೈಸೂರಿನ ಅರಮನೆಯಲ್ಲಿ ಸಂಜೆ ದೀಪಾಲಂಕಾರ, ಪ್ರವಾಸಿಗರ ವೀಕ್ಷಣೆ ನಿರ್ಬಂಧಿಸಲಾಗಿತ್ತು. ಆದರೆ, ಇದಕ್ಕೆ ತದ್ವಿರುದ್ಧವಾಗಿ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳಿಗೆ ಸಂಗೀತ ಕಾರಂಜಿ ನಡೆಸುವ ಮೂಲಕ ಮಾಜಿ ಪ್ರಧಾನಿ ಶೋಕಾಚರಣೆಗಿಂತ ಪ್ರವಾಸಿಗರಿಂದ ಬರುವ ಹಣವೇ ಮುಖ್ಯವಾಗಿದೆ ಎಂಬಂತಾಗಿದೆ.

ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಮಾಧ್ಯಮದವರು ಪ್ರಶ್ನಿಸಿದಾಗ ರಾತ್ರಿ 7.45 ರಲ್ಲಿ ಏಕಾಏಕಿ ಸಂಗೀತ ಕಾರಂಜಿಯನ್ನು ಸ್ಥಗಿತಗೊಳಿಸಿ ಸಾವಿರಾರು ಪ್ರವಾಸಿಗರನ್ನು ಬೃಂದಾವನದಿಂದ ಹೊರ ಕಳುಹಿಸಿದರು. ಇದರಿಂದ ಹಣ ಕೊಟ್ಟು ಸಂಗೀತ ಕಾರಂಜಿಗೆ ತೆರಳಿದ್ದ ಸಹಸ್ರಾರು ಪ್ರವಾಸಿಗರು ನಿರಾಶೆಗೊಂಡು ಹಣವನ್ನು ವಾಪಸ್ ನೀಡದ ಹಿನ್ನೆಲೆಯಲ್ಲಿ ಹಿಡಿ ಶಾಪ ಹಾಕಿ ಅಸಮಾಧಾನ ವ್ಯಕ್ತಪಡಿಸಿದರು. ಕೆಲ ಪ್ರವಾಸಿಗರು ಅಧಿಕಾರಿಗಳೊಂದಿಗೆ ಮಾತಿನ ಚಕಮಕಿ ನಡೆಸಿ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಈ ಬಗ್ಗೆ ಕಾವೇರಿ ನೀರಾವರಿ ನಿಗಮದ ಎಇಇ ಫಾರೂಕ್ ಅಬು ಅವರನ್ನು ಪ್ರಶ್ನಿಸಿದಾಗ, ಈ ಹಿಂದೆ ಹಲವು ಗಣ್ಯರು ನಿಧನ ಹೊಂದಿದಾಗಲೂ ಶೋಕಾಚರಣೆ ಇದ್ದರೂ ಪ್ರವಾಸಿಗರಿಗೆ ಅವಕಾಶ ಕಲ್ಪಿಸಲಾಗಿತ್ತು. ಅದರಂತೆ ಇಂದೂ ಕೂಡ ಬೃಂದಾವನದಲ್ಲಿ ಪ್ರವಾಸಿಗರಿಗೆ ಸಂಗೀತ ಕಾರಂಜಿ ವೀಕ್ಷಣೆಗೆ ಅವಕಾಶ ಮಾಡಿಕೊಡಲಾಗಿದೆ ಎಂದು ಹೇಳಿದರು.