ಮಹಿಳೆಯರು ಆರ್ಥಿಕವಾಗಿ ಮುಂದೆ ಬರಬೇಕು

| Published : Dec 28 2024, 12:46 AM IST

ಸಾರಾಂಶ

ಮಹಿಳೆಯರ ಜೀವನಮಟ್ಟ ಸುಧಾರಣೆ ಹಾಗೂ ಆರ್ಥಿಕ ಅಭಿವೃದ್ಧಿಗಾಗಿ ಗುಂಪು ಮಹಿಳಾ ಸ್ವಸಹಾಯ ಸಂಘಗಳಿಂದ ಸಾಲ ‌ಸೌಲಭ್ಯ ನೀಡಲಾಗುತ್ತಿದ್ದು, ಪ್ರತಿಯೊಬ್ಬ ನಿರುದ್ಯೋಗಿ ಮಹಿಳೆಯರು ಯೋಜನೆ ಲಾಭವನ್ನು ಪಡೆದುಕೊಂಡು ಆರ್ಥಿಕವಾಗಿ ಮುಂದೆ ಬರಬೇಕು ಎಂದು ನಾರ್ವೆ ಪೇಟೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಾಲಾಶ್ರೀ ತಿಳಿಸಿದರು. ಸ್ವ ಸಹಾಯ ಗುಂಪಿನ ಮಹಿಳಾ ಸದಸ್ಯರು ಉತ್ಪಾದಿಸಿರುವ ಉತ್ಪನ್ನಗಳ ವಸ್ತು ಪ್ರದರ್ಶನ ಹಾಗೂ ಮಾರಾಟ ಮೇಳವನ್ನು ಉದ್ಘಾಟಿಸಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಬೇಲೂರು

ಮಹಿಳೆಯರ ಜೀವನಮಟ್ಟ ಸುಧಾರಣೆ ಹಾಗೂ ಆರ್ಥಿಕ ಅಭಿವೃದ್ಧಿಗಾಗಿ ಗುಂಪು ಮಹಿಳಾ ಸ್ವಸಹಾಯ ಸಂಘಗಳಿಂದ ಸಾಲ ‌ಸೌಲಭ್ಯ ನೀಡಲಾಗುತ್ತಿದ್ದು, ಪ್ರತಿಯೊಬ್ಬ ನಿರುದ್ಯೋಗಿ ಮಹಿಳೆಯರು ಯೋಜನೆ ಲಾಭವನ್ನು ಪಡೆದುಕೊಂಡು ಆರ್ಥಿಕವಾಗಿ ಮುಂದೆ ಬರಬೇಕು ಎಂದು ನಾರ್ವೆ ಪೇಟೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಾಲಾಶ್ರೀ ತಿಳಿಸಿದರು.

ತಾಲೂಕಿನ ನಾರ್ವೆ ಪೇಟೆ ಸಂತೆ ಆವರಣದಲ್ಲಿ ನಡೆದ ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಸಂಜೀವಿನಿ ಗ್ರಾಮೀಣ ಸಂವರ್ಧನೆ ಸಂಸ್ಥೆ ತಾಲೂಕು ಮಟ್ಟದ ಸ್ವ ಸಹಾಯ ಗುಂಪಿನ ಮಹಿಳಾ ಸದಸ್ಯರು ಉತ್ಪಾದಿಸಿರುವ ಉತ್ಪನ್ನಗಳ ವಸ್ತು ಪ್ರದರ್ಶನ ಹಾಗೂ ಮಾರಾಟ ಮೇಳವನ್ನು ಉದ್ಘಾಟಿಸಿ ಮಾತನಾಡಿದ ಅವರು, ಇಂದು ಅನೇಕ ಕ್ಷೇತ್ರಗಳಲ್ಲಿ ಮಹಿಳೆಯರು ಕಸುಬು ಆಧಾರಿತ ಸ್ವಾವಲಂಬಿ ಜೀವನ ಕಂಡುಕೊಂಡಿದ್ದಾರೆ. ಮನೆಯಲ್ಲಿಯೇ ತಯಾರಿಸಿರುವ ವಿವಿಧ ರೀತಿಯ ದಿನ ಬಳಕೆ ವಸ್ತುಗಳ ಸಿದ್ಧಪಡಿಸಿ ಮಾರಾಟ ಮಾಡುತ್ತಿರುವುದು ತಮ್ಮ ಬದುಕಿನ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ ಎಂದರು.

ಯೋಜನಾ ವ್ಯವಸ್ಥಾಪಕಿ ಎಂ ಸಿ ದ್ರಾಕ್ಷಯಿಣಿ ದಿನೇಶ್ ಮಾತನಾಡಿ, ಈ ಯೋಜನೆಯ ಅಡಿಯಲ್ಲಿ ನಿರುದ್ಯೋಗಿ ಮಹಿಳೆಯರನ್ನು ಸ್ವಾವಲಂಬಿಗಳಾಗಿ ಮೇಲೆತ್ತಿ ಸಮಾಜದ ಮುಖ್ಯವಾಹಿನಿಗೆ ತರುವುದೇ ಕಾರ್ಯಕ್ರಮದ ಪ್ರಮುಖ ಉದ್ದೇಶವಾಗಿದೆ ಎಂದರು.

ಈ ಸಂದರ್ಭದಲ್ಲಿ ಮಹಿಳಾ ಸ್ವಸಹಾಯ ಸಂಘದ ಎಲ್ಲಾ ಸದಸ್ಯರು ತಾವು ತಯಾರಿಸಿದ ವಿವಿಧ ರೀತಿಯ ದಿನ ಬಳಕೆ ವಸ್ತುಗಳನ್ನು ಸಂತೆಯಲ್ಲಿ ವ್ಯಾಪಾರ ವಹಿವಾಟು ನಡೆಸುವ ಮೂಲಕ ಮಾಸಿಕ ಸಂತೆಯನ್ನು ಯಶಸ್ವಿಗೊಳಿಸಿದರು. ಕಾರ್ಯಕ್ರಮದಲ್ಲಿ ಉಪಾಧ್ಯಕ್ಷ ಸುಲಗಳಲೆ ಮಲ್ಲಿಕಾರ್ಜುನ್, ಸದಸ್ಯರಾದ ಬೇಬಿ ಪ್ರಕಾಶ್, ಮಲ್ಲಿಕಾರ್ಜುನ, ಕಾರ್ಯದರ್ಶಿ ಚಾಮರಾಜು. ಎಂಬಿಕೆ ಸದಸ್ಯರಾದ ಗೀತಾ, ಕವಿತಾ, ಜ್ಯೋತಿ, ಗೀತಾ, ಇತರರು ಹಾಜರಿದ್ದರು.