ಸವಿತಾ ಸಮಾಜದ ಆರಾಧ್ಯ ದೈವವಾಗಿರುವ ಸವಿತಾ ಮಹರ್ಷಿಗಳು ಸಮಾಜದ ಮೂಲ ಪುರುಷರಾಗಿದ್ದಾರೆ ಎಂದು ಅಪರ ಜಿಲ್ಲಾಧಿಕಾರಿ ವಿ.ಅಭಿಷೇಕ್ ತಿಳಿಸಿದರು.

ಶಿವಮೊಗ್ಗ: ಸವಿತಾ ಸಮಾಜದ ಆರಾಧ್ಯ ದೈವವಾಗಿರುವ ಸವಿತಾ ಮಹರ್ಷಿಗಳು ಸಮಾಜದ ಮೂಲ ಪುರುಷರಾಗಿದ್ದಾರೆ ಎಂದು ಅಪರ ಜಿಲ್ಲಾಧಿಕಾರಿ ವಿ.ಅಭಿಷೇಕ್ ತಿಳಿಸಿದರು.ನಗರದ ಕುವೆಂಪು ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಾನಗರಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜಿಲ್ಲಾ ಸವಿತಾ ಸಮಾಜದ ಸಹಯೋಗದಲ್ಲಿ ಭಾನುವಾರ ಏರ್ಪಡಿಸಿದ್ದ ಶ್ರೀ ಸವಿತಾ ಮಹರ್ಷಿ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಕರ್ನಾಟಕ ಸರ್ಕಾರ ಸವಿತಾ ಸಮಾಜದವರಿಗೆ ವಿವಿಧ ಸೌಲಭ್ಯಗಳನ್ನು ನೀಡುತ್ತಿದೆ. ಪ್ರತಿ ತಾಲೂಕಿಗೆ 5 ರಿಂದ 10 ಜನರಿಗೆ 50 ರು. ರಿಂದ 1 ಲಕ್ಷದವರೆಗೆ ಸಾಲವನ್ನು ನೀಡುತ್ತಿದ್ದು ಅರ್ಹರು ಇದರ ಸದುಪಯೋಗ ಪಡೆಯಬೇಕು ಎಂದು ತಿಳಿಸಿದರು. ಉಪನ್ಯಾಸಕ ಮಂಜುನಾಥ್ ಮಾತನಾಡಿ, ಸವಿತಾ ಎಂದರೆ ಬೆಳಕು ಅಥವಾ ಜ್ಞಾನ ಎಂದರ್ಥ. ಸವಿತಾ ಸಮಾಜದ ಮೂಲ ಪುರುಷರಾದ ಸವಿತಾ ಮಹರ್ಷಿಗಳು ಪರಶಿವನ ಬಲಗಣ್ಣಿನಿಂದ ಜನಿಸಿದವರಾಗಿದ್ದು, ಸೂರ್ಯವಂಶದ ಕುಲದೈವರಾಗಿದ್ದಾರೆ. ಅಪಾರ ಜ್ಞಾನ ಹೊಂದಿದ್ದ ಇವರು ಸಾಮವೇದವನ್ನು ರಚಿಸಿದ್ದು, ಸಂಗೀತದ ಪ್ರತೀಕವಾಗಿದ್ದಾರೆ ಎನ್ನಬಹುದು. ಇವರ ಪುತ್ರಿ ಗಾಯತ್ರಿ ದೇವಿಯು ಶ್ರೇಷ್ಠ ಗಾಯತ್ರಿ ಮಂತ್ರವನ್ನು ರಚಿಸಿದ್ದಾರೆ ಎಂದು ತಿಳಿಸಿದರು. ಆರ್ಥಿಕವಾಗಿ, ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ಸವಿತಾ ಸಮಾಜ ತನ್ನದೇ ಆದ ಪರಂಪರೆ ಹೊಂದಿದೆ. ಈ ಸಮಾಜದಲ್ಲಿ 27 ಉಪಜಾತಿಗಳಿದ್ದು, 2ಎ ವರ್ಗದಲ್ಲಿ ಬರುತ್ತದೆ ಎಂದು ವಿವರಿಸಿದರು. ಸವಿತಾ ಸಮಾಜಕ್ಕೆ ಸೇರಿದ ಬಿಹಾರಿನ ಕರ್ಪೂರಿ ಠಾಕೂರ್‌ ಅವರಿಗೆ ಭಾರತ ಸರ್ಕಾರ ಮರಣೋತ್ತರ ಭಾರತರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಿದ್ದು, ಇವರು ಶೋಷಿತ ವರ್ಗದವರನ್ನು ಶೈಕ್ಷಣಿಕವಾಗಿ ಮೇಲೆ ತರಲು ಹೋರಾಡಿದ್ದರು. ಇಂತಹ ವ್ಯಕ್ತಿಗಳನ್ನು ಪಡೆದ ಸಮಾಜವು ಕೀಳರಿಮೆಯನ್ನು ತೊರೆಯಬೇಕು ಎಂದರು.

ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕು. ಇದರಿಂದ ಸಮಾಜದಲ್ಲಿ ಮುನ್ನಡೆಯಲು ಸಾಧ್ಯವಾಗುತ್ತದೆ. ಹಾಗೂ ಜಯಂತಿಯಂತಹ ಆಚರಣೆಯ ಮೂಲಕ ಸಮುದಾಯದವರು ಸಂಘಟಿತರಾಗಬೇಕು ಎಂದು ಕರೆ ನೀಡಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಸವಿತಾ ಸಮಾಜದ ಅಧ್ಯಕ್ಷ ಎಂ.ಜಿ.ಬಾಲು, ತಾಲೂಕು ಅಧ್ಯಕ್ಷ ಬಿ.ಎನ್. ಧರ್ಮರಾಜ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಉಮೇಶ್.ಎಚ್, ಸಮಾಜದ ಮುಖಂಡರು, ಅಧಿಕಾರಿಗಳು ಪಾಲ್ಗೊಂಡಿದ್ದರು.