ಗ್ರಾಮೀಣ ಭಾಗದಲ್ಲಿ ಪ್ರತಿಭಾವಂತ ಕ್ರೀಡಾಳುಗಳಿದ್ದು, ಸೂಕ್ತ ವೇದಿಕೆ ಇಲ್ಲದೇ ಪರದಾಟ ಮಾಡುತ್ತಿದ್ದಾರೆ, ಇವರನ್ನು ಗುರುತಿಸುವ ವೇದಿಕೆ ಕಲ್ಪಿಸಲು ಮುಂದಾಗಬೇಕಾಗಿದೆ .
ಯಳಂದೂರು: ಉಪ್ಪಾರ ಸಮಾಜದಲ್ಲಿ ಮೌಢ್ಯತೆ ಹೆಚ್ಚಾಗಿದ್ದು, ಇದನ್ನು ಹೋಗಲಾಡಿಸುವ
ನಿಟ್ಟಿನಲ್ಲಿ ಯುವ ಸಮುದಾಯವು ಶಿಕ್ಷಣ ಹಾಗೂ ಸಾಂಸ್ಕೃತಿಕ, ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸಿ ದುಶ್ಚಟಗಳಿಂದ ದೂರವಿರಬೇಕೆಂದು ಶಾಸಕ ಸಿ.ಪುಟ್ಟರಂಗಶೆಟ್ಟಿ ಕರೆ ನೀಡಿದರು.ಅವರು ಚಾಮರಾಜನಗರ ತಾಲೂಕಿನ ತೆಂಕಲಮೋಳೆ ಗ್ರಾಮದಲ್ಲಿ ಭಾನುವಾರ ಭಗೀರಥ ಉಪ್ಪಾರ ಯುವಕರ
ಸಂಘದಿಂದ ಭಗೀರಥ ಪ್ರೀಮೀಯರ್ ಕ್ರಿಕೆಟ್ ಲೀಗ್ ಸೀಸನ್ – ೩ ಪಂದ್ಯಾವಳಿಗೆ ಚಾಲನೆ ನೀಡಿಮಾತನಾಡಿ, ಪ್ರಸುತ ಸಮಾಜದಲ್ಲಿ ಮೌಢ್ಯಕ್ಕೆ ಹೆಚ್ಚು ಆದ್ಯತೆ ನೀಡುತ್ತಿದ್ದು, ಮದ್ಯಪಾನ, ಧೂಮಪಾನ ಸೇರಿದಂತೆ ಇತರೆ ದುಶ್ಚಟಗಳಿಂದ ಯುವಕರು ಹೊರಬಂದು ಉತ್ತಮ ಜೀವನ ನಡೆಸಬೇಕಿದೆ. ಈ ಗ್ರಾಮದ ಜನರು ಗ್ರಾಮೀಣ ಭಾಗದ ಪ್ರತಿಭಾವಂತರಿಗೆ ಕ್ರೀಡೆ ಆಯೋಜಿಸಿರುವುದಕ್ಕೆ ಅಭಿನಂದನೆ ಸಲ್ಲಿಸುತ್ತೇನೆ. ಈ ಕ್ರೀಡಾಕೂಟದಲ್ಲಿ ಭಾಗವಹಿಸಿರುವ ಪ್ರತಿಭಾವಂತ ಯುವಕರು ಮುಂದಿನ ದಿನಗಳಲ್ಲಿ ರಾಜ್ಯ, ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗುವ ಮೂಲಕ ತಮ್ಮ ಪ್ರತಿಭೆ ಹೆಚ್ಚಿಸಿಕೊಂಡು ಗ್ರಾಮದ ಕೀರ್ತಿಯನ್ನು ಹೆಚ್ಚಿಸಲಿ ಎಂದು ಆಶಿಸಿದರು.
ನಂತರ ಜಿಪಂ ಮಾಜಿ ಉಪಾಧ್ಯಕ್ಷ ಜೆ.ಯೋಗೇಶ್ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಪ್ರತಿಭಾವಂತ ಕ್ರೀಡಾಳುಗಳಿದ್ದು, ಸೂಕ್ತ ವೇದಿಕೆ ಇಲ್ಲದೇ ಪರದಾಟ ಮಾಡುತ್ತಿದ್ದಾರೆ, ಇವರನ್ನು ಗುರುತಿಸುವ ವೇದಿಕೆ ಕಲ್ಪಿಸಲು ಮುಂದಾಗಬೇಕಾಗಿದೆ ಎಂದು ತಿಳಿಸಿದರು.ಅಯ್ಯನ ಸರಗೂರು ಮಠದ ಶ್ರೀಮಹದೇವಸ್ವಾಮಿ, ಕುದೇರು ಗ್ರಾಪಂ ಅಧ್ಯಕ್ಷೆ ಸುಶೀಲಾ ನಾಗರಾಜು, ಕೊಳ್ಳೇಗಾಲ ತಾಲೂಕಿನ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ರಾಜೇಂದ್ರ, ಗ್ರಾಪಂ ಸದಸ್ಯರಾದ ಚಿಕ್ಕತಾಯಮ್ಮ, ಶಿವಣ್ಣ, ಜಿಲ್ಲಾ ಹಿಂದುಳಿದ ವರ್ಗಗಳ ಕಾಂಗ್ರೆಸ್ ಸಮಿತಿ ಜಿಲ್ಲಾಧ್ಯಕ್ಷ ಚೇತನ್‌ಕುಮಾರ್, ತಾಲೂಕಾಧ್ಯಕ್ಷ ವೈ.ಎಚ್.ಸಿದ್ದರಾಜು ಸೇರಿ ಗ್ರಾಮದ ಯಜಮಾನರು, ಮುಖಂಡರು, ಯುವಕರು ಹಾಜರಿದ್ದರು.