ಶ್ರೀ ಲಕ್ಷ್ಮೀ ವೆಂಕಟೇಶ್ವರಸ್ವಾಮಿಯವರ ನೂತನ ದೇವಾಲಯದ (ಶ್ರೀ ನುಡುಕೇರಪ್ಪಸ್ವಾಮಿ ದೇವಾಲಯ) ಉದ್ಘಾಟನೆ ಮತ್ತು ಪ್ರತಿಷ್ಠಾಪನಾ ಕಾರ್ಯಕ್ರಮ ಫೆ. 4ರಿಂದ 6ರಂದು ಆಯೋಜಿಸಲಾಗಿದೆ.
ಕನ್ನಡಪ್ರಭ ವಾರ್ತೆ ತುರುವೇಕೆರೆ
ತಾಲೂಕಿನ ಮಾಯಸಂದ್ರ ಹೋಬಳಿಯ ಕಣಕೂರು ಗ್ರಾಮದಲ್ಲಿ ಶ್ರೀ ಬಾಲಾಜಿ ಸೇವಾ ಟ್ರಸ್ಟ್ ವತಿಯಿಂದ ಹಾಗೂ ಕಣಕೂರು ಗ್ರಾಮಸ್ಥರು ಮತ್ತು ಭಕ್ತಾದಿಗಳ ವತಿಯಿಂದ ನಿರ್ಮಾಣ ಮಾಡಲಾಗಿರುವ ಶ್ರೀ ಲಕ್ಷ್ಮೀ ವೆಂಕಟೇಶ್ವರಸ್ವಾಮಿಯವರ ನೂತನ ದೇವಾಲಯದ ( ಶ್ರೀ ನುಡುಕೇರಪ್ಪಸ್ವಾಮಿ ದೇವಾಲಯ) ಉದ್ಘಾಟನೆ ಮತ್ತು ಪ್ರತಿಷ್ಠಾಪನಾ ಕಾರ್ಯಕ್ರಮ ಫೆ. 4ರಿಂದ 6ರಂದು ಆಯೋಜಿಸಲಾಗಿದೆ.ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಾಲಾಜಿ ಸೇವಾ ಟ್ರಸ್ಟ್ ನ ಅಧ್ಯಕ್ಷ ಬಾಲಾಜಿ ಕುಮಾರ್ ಸುಮಾರು ಒಂದು ಕೋಟಿಗೂ ಅಧಿಕ ಮೊತ್ತದಲ್ಲಿ ಸ್ವಾಮಿಯವರ ದೇವಾಲಯವನ್ನು ನಿರ್ಮಾಣ ಮಾಡಲಾಗಿದೆ. ಪ್ರಪ್ರಥಮ ಬಾರಿಗೆ ತುರುವೇಕೆರೆ ತಾಲೂಕಿನಲ್ಲಿ ಟಿಟಿಡಿ ವತಿಯಿಂದಲೇ ನಡೆಯುವ ಶ್ರೀ ಲಕ್ಷ್ಮೀ ವೆಂಕಟರಮಣ ಸ್ವಾಮಿಯವರ ಕಲ್ಯಾಣೋತ್ಸವ ಜನರು ಕಣ್ತುಂಬಿಕೊಳ್ಳಬೇಕು ಎಂದರು. ದೇವಾಲಯದ ಉದ್ಘಾಟನೆ ಮತ್ತು ಪ್ರತಿಷ್ಠಾಪನೆಯ ಅಂಗವಾಗಿ ಫೆ 4 ರಂದು ಸಂಜೆ ಗುರುಪ್ರಾರ್ಥನೆ, ಗೋ ಪೂಜೆ, ಗಂಗಾ ಭಾಗೀರಥಿ ಪೂಜೆ, ಮೃತ್ಯುಕೆ ಸಂಗ್ರಹಣೆ, ಯಾಗ ಶಾಲಾ ಪ್ರವೇಶ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ.
ಫೆ 5 ರಂದು ಪ್ರಧಾನ ಕಳಶಾರಾಧನೆ, ನವಗ್ರಹ ಹೋಮ, ಗ್ರಾಮ ದೇವತೆ ಹೋಮಗಳು, ವಿಷ್ಣು ಪಾರಾಯಣ, ಆದಿವಾಸಗಳು, ಧಾನ್ಯಾಧಿವಾಸ, ಪುಷ್ಪಾಧಿವಾಸ, ಫಲಾಧಿವಾಸ, ವಸ್ತ್ರಾಧಿವಾಸ, ರತ್ನಾಧಿವಾಸ, ಅಷ್ಠಾವಧಾನ ಸೇವೆ, ಮಹಾ ಮಂಗಳಾರತಿ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗುವುವು. ಫೆ 6ರ ಶುಕ್ರವಾರದಂದು ಬೆಳಗ್ಗೆಯಿಂದ ಯೋಗಪೀಠಾರ್ಚನೆ, ಪಿಂಡಿಕೆ ಪೂಜೆ, ಸ್ಥಿರಬಿಂಬ ಪ್ರತಿಷ್ಠಾಪನೆ, ಅಷ್ಠಬಂಧನ, ನಿತ್ಯಾರಾಧನೆ, ಸೂತ್ರವೇಷ್ಠಿತ ಕಳಾಶಕ್ತಿ, ಪ್ರಾಣ ಪ್ರತಿಷ್ಟಾಪನಾ ಹೋಮಗಳು, ಷೋಷಶನ್ಯಾಸ ಹೋಮಗಳು, ನಯನೋನ್ಮಿಲನ ಹೋಮಗಳು, ಮಹಾ ಪೂರ್ಣಾಹುತಿ, ಗ್ರಾಮ ಪ್ರದಕ್ಷಿಣೆ, ಕುಂಭಾಭಿಷೇಕ, ವಿಮಾನಗೋಪುರಕ್ಕೆ ಅಭಿಷೇಕ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗುವುವು. ಸಾಯಂಕಾಲ 5 ಗಂಟೆಗೆ ಶ್ರೀ ವೆಂಕಟರಮಣಸ್ವಾಮಿಯವರ ಕಲ್ಯಾಣೋತ್ಸವ ಜರುಗಲಿದೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಮುಖಂಡರಾದ ಕಣಕೂರು ಚಂದ್ರಶೇಖರ್, ಮಾಜಿ ಪ್ರಧಾನರಾದ ಟಿ.ಜವರಪ್ಪ, ಗುಡಿಗೌಡರಾದ ಕೆ.ಎಸ್.ಗಂಗಯ್ಯ, ಕೆ.ಟಿ.ತಿಮ್ಮಯ್ಯ, ಕೆ.ಸಿ.ಸಿದ್ದೇಗೌಡ, ಕೆ.ಎಲ್.ರಾಜು. ಪಿಎಸಿಎಸ್ ನ ಅಧ್ಯಕ್ಷ ಕೆ.ಶ್ರೀನಿವಾಸ್, ದೇವಾಲಯಗಳ ಅರ್ಚಕರಾದ ಸುದರ್ಶನ್, ಹುಚ್ಚೇಗೌಡ, ನರಸಿಂಹಮೂರ್ತ್, ಶ್ರೀ ನಿವಾಸ್ ಸೇರಿದಂತೆ ಗ್ರಾಮದ ಹಲವಾರು ಯುವಕರು ಪಾಲ್ಗೊಂಡಿದ್ದರು.