ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್‌ ನಟನೆಯ ಬಹುನಿರೀಕ್ಷಿತ ಆಕ್ಷನ್, ಥ್ರಿಲ್ಲರ್ ಸಿನಿಮಾ ಮಾರ್ಕ್‌ ಡಿ.25ರಂದು ರಾಜ್ಯಾದ್ಯಂತ ತೆರೆಗೆ ಬರಲಿದೆ. ದಾವಣಗೆರೆಯಲ್ಲೂ ಚಿತ್ರಕ್ಕೆ ಭರ್ಜರಿ ಸ್ವಾಗತಕ್ಕಾಗಿ ಆಲ್ ಇಂಡಿಯಾ ಬಾದ್ ಷಾ ಕಿಚ್ಚ ಸುದೀಪ್‌ ಫ್ಯಾನ್ಸ್ ಅಸೋಸಿಯೇಷನ್‌ ಜಿಲ್ಲಾ ಘಟಕ ಸಿದ್ಧತೆ ಮಾಡಿಕೊಂಡಿದೆ.

- ಇಂದು ಸಂಜೆ ತ್ರಿಶೂಲ್‌ ಟಾಕೀಸಲ್ಲಿ 30 ಅಡಿ ಎತ್ತರದ ಸುದೀಪ್‌ ಕಟೌಟ್‌, ಭಾರಿ ಹೂವಿನ ಹಾರ ಅರ್ಪಣೆ: ವಿ.ಗಣೇಶ

- - -

- ರಾತ್ರಿ 8.30ರವರೆಗೆ ಅಭಿಮಾನಿಗಳ ಸಂಗೀತ ಕಾರ್ಯಕ್ರಮ, 1500 ಅಭಿಮಾನಿಗಳಿಗೆ ಸಿಹಿ

- ಗುರುವಾರ ಬೆ.6 ಗಂಟೆಗೆ ಫ್ಯಾನ್ ಶೋ ಸೇರಿ ಒಟ್ಟು 7 ಪ್ರದರ್ಶನ ಕಾಣಲಿರುವ ಮಾರ್ಕ್‌

- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್‌ ನಟನೆಯ ಬಹುನಿರೀಕ್ಷಿತ ಆಕ್ಷನ್, ಥ್ರಿಲ್ಲರ್ ಸಿನಿಮಾ ಮಾರ್ಕ್‌ ಡಿ.25ರಂದು ರಾಜ್ಯಾದ್ಯಂತ ತೆರೆಗೆ ಬರಲಿದೆ. ದಾವಣಗೆರೆಯಲ್ಲೂ ಚಿತ್ರಕ್ಕೆ ಭರ್ಜರಿ ಸ್ವಾಗತಕ್ಕಾಗಿ ಆಲ್ ಇಂಡಿಯಾ ಬಾದ್ ಷಾ ಕಿಚ್ಚ ಸುದೀಪ್‌ ಫ್ಯಾನ್ಸ್ ಅಸೋಸಿಯೇಷನ್‌ ಜಿಲ್ಲಾ ಘಟಕ ಸಿದ್ಧತೆ ಮಾಡಿಕೊಂಡಿದೆ.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಜಿಲ್ಲಾಧ್ಯಕ್ಷ ವಿ.ಗಣೇಶ ಕುಂದುವಾಡ, ಡಿ.24ರಂದು ಸಂಜೆ 6 ಗಂಟೆಗೆ ದಾವಣಗೆರೆ ತ್ರಿಶೂಲ್ ಚಿತ್ರ ಮಂದಿರದಲ್ಲಿ ಕಿಚ್ಚ ಸುದೀಪ್‌ ಅವರ 30 ಅಡಿ ಎತ್ತರದ ಕಟೌಟ್‌ಗೆ ಭಾರಿ ಹೂವಿನ ಹಾರ ಹಾಕುವುದು, ಸಿಡಿಮದ್ದುಗಳನ್ನು ಸಿಡಿಸಲಾಗುವುದು. ಆ ಮೂಲಕ ಮಾರ್ಕ್ ಚಲನಚಿತ್ರವನ್ನು ಅದ್ಧೂರಿಯಾಗಿ ಸ್ವಾಗತಿಸಲಾಗುವುದು ಎಂದರು.

ಸ್ಟ್ಯಾಂಡ್ ಧ್ವನಿವರ್ಧಕದೊಂದಿಗೆ ಅಭಿಮಾನಿಗಳ ಸಂಗೀತ ಕಾರ್ಯಕ್ರಮ ನಡೆಯಲಿದ್ದು, ರಾತ್ರಿ 8.30 ಗಂಟೆಗೆ ಮುಕ್ತಾಯಗೊಳ್ಳಲಿದೆ. ಮಾರ್ಕ್‌ ಸಿನಿಮಾ ಯಶಸ್ವಿಯಾಗಿ ತೆರೆ ಕಾಣಲೆಂದು, ಶತದಿನೋತ್ಸವ ಆಚರಿಸಲೆಂದು ಹಾರೈಸಲು ದಾವಣಗೆರೆ ನಗರ, ಜಿಲ್ಲಾದ್ಯಂತ ವಿಶೇಷ ಕಾರ್ಯಕ್ರಮಗಳನ್ನು ಸಂಘಟನೆ ಹಾಗೂ ಕಿಚ್ಚ ಸುದೀಪ್ ಅಭಿಮಾನಿಗಳು ಹಮ್ಮಿಕೊಂಡಿದ್ದಾರೆ ಎಂದು ತಿಳಿಸಿದರು.

ಡಿ.25ರಂದು ಬೆಳಗ್ಗೆ 6 ಗಂಟೆಯಿಂದ ನಾಸಿಕ್ ಡೋಲು, ಸಿಡಿಮದ್ದುಗಳನ್ನು ಸಿಡಿಸಿ, ಸಂಭ್ರಮಿಸಲಾಗುವುದು. ಇದರೊಂದಿಗೆ ಕಿಚ್ಚ ಸುದೀಪ್‌ ಅಭಿನಯದ ಮಾರ್ಕ್‌ ಚಿತ್ರದ ಫ್ಯಾನ್‌ ಶೋ ಪ್ರದರ್ಶನ ಆರಂಭಗೊಳ್ಳಲಿದೆ. ಚಿತ್ರ ಮಂದಿರ ಆವರಣದಲ್ಲಿ ಅದೇ ದಿನ ಬೆಳಗ್ಗೆ 8.30ಕ್ಕೆ ಫ್ಯಾನ್ ಶೋದಲ್ಲಿ ಭಾಗಿಯಾಗುವ ಸುಮಾರು 1500 ಅಭಿಮಾನಿಗಳಿಗೆ ಸಿಹಿ ವಿತರಣೆ ಮಾಡಲಾಗುವುದು ಎಂದು ಹೇಳಿದರು.

ದಾವಣಗೆರೆ ನಗರ, ಜಿಲ್ಲೆಯ ಎಲ್ಲ ಕಿಚ್ಚ ಸುದೀಪ್ ಅಭಿಮಾನಿಗಳು ಈ ಎರಡೂ ದಿನಗಳ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು. ಆ ಮೂಲಕ ಮಾರ್ಕ್ ಚಿತ್ರವನ್ನು ಬ್ಲಾಕ್ ಬಸ್ಟರ್ ಹಿಟ್‌ ಚಿತ್ರವನ್ನಾಗಿಸೋಣ. ತ್ರಿಶೂಲ್ ಚಿತ್ರ ಮಂದಿರದಲ್ಲಿ ಅಂದು ಫ್ಯಾನ್ ಶೋ ನಂತರ 6 ಪ್ರದರ್ಶನ ಸೇರಿದಂತೆ ಮೊದಲ ದಿನ ಒಟ್ಟು 7 ಪ್ರದರ್ಶನ ಇರಲಿದೆ ಎಂದು ವಿ.ಗಣೇಶ ಕುಂದುವಾಡ ಮಾಹಿತಿ ನೀಡಿದರು.

ಸಂಘದ ರಮೇಶ ಬಿ.ಉಚ್ಚಂಗಿದುರ್ಗ, ವಿಜಯ್ ನಿಟುವಳ್ಳಿ, ರಮೇಶ ಬೆಳವನೂರು, ಹನುಮಂತ ಕರೂರು, ರಾಕೇಶ, ಎಚ್.ಎ. ಅನಿಲಕುಮಾರ, ಉಮೇಶ ಕಾಡಜ್ಜಿ, ಪ್ರಭು ಫಣಿಯಾಪುರ, ಹಾಲೇಶ, ಅಜೇಯ, ಶಶಿ, ಅಣ್ಣಪ್ಪ ಹದಡಿ, ಕೆಟಿಜೆ ನಗರ ಪರಶುರಾಮ, ಎಂ.ಎ. ಅಜಯ್‌, ಟಿ.ಆರ್‌. ಸುದೀಪ್‌ ಹದಡಿ, ರಾಜು, ನಯಾಜ್ ಅಹಮ್ಮದ್ ಇತರರು ಇದ್ದರು.

- - -

-23ಕೆಡಿವಿಜಿ1.ಜೆಪಿಜಿ:

ದಾವಣಗೆರೆಯಲ್ಲಿ ಮಂಗಳವಾರ ಆಲ್ ಇಂಡಿಯಾ ಬಾದ್ ಷಾ ಕಿಚ್ಚ ಸುದೀಪ್ ಫ್ಯಾನ್ಸ್ ಅಸೋಸಿಯೇಷನ್ ಜಿಲ್ಲಾಧ್ಯಕ್ಷ ವಿ.ಗಣೇಶ ಕುಂದುವಾಡ ಸುದ್ದಿಗೋಷ್ಠಿ ನಡೆಸಿ ಮಾರ್ಕ್‌ ಸಿನಿಮಾ ಸಂಭ್ರಮಾಚರಣೆ ಮಾಹಿತಿ ನೀಡಿದರು.