ಬೇಡ್ತಿ-ವರದಾ ಹಾಗೂ ಅಘನಾಶಿನಿ-ವೇದಾವತಿ ನದಿ ಜೋಡಣೆ ಯೋಜನೆಯ ವಿರುದ್ಧ ಭಾನುವಾರ ಮಧ್ಯಾಹ್ನ 2.30ರಿಂದ ನಗರದ ಎಂ.ಎಂ.ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದ ಮೈದಾನದಲ್ಲಿ ಬೃಹತ್‌ ಜನಾಂದೋಲನ ಹಮ್ಮಿಕೊಳ್ಳಲಾಗಿದೆ.

ಕನ್ನಡಪ್ರಭ ವಾರ್ತೆ ಶಿರಸಿ

ಜಿಲ್ಲೆಯ ಜನರ ಜೀವ ನದಿಯಾಗಿ ಕೃಷಿಕರ ಬದುಕಿನ ಜತೆ ನಂಟು ಹೊಂದಿರುವ ಬೇಡ್ತಿ-ವರದಾ ಹಾಗೂ ಅಘನಾಶಿನಿ-ವೇದಾವತಿ ನದಿ ಜೋಡಣೆ ಯೋಜನೆಯ ವಿರುದ್ಧ ಭಾನುವಾರ ಮಧ್ಯಾಹ್ನ 2.30ರಿಂದ ನಗರದ ಎಂ.ಎಂ.ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದ ಮೈದಾನದಲ್ಲಿ ಬೃಹತ್‌ ಜನಾಂದೋಲನ ಹಮ್ಮಿಕೊಳ್ಳಲಾಗಿದೆ.ಸಮಾವೇಶಕ್ಕೆ ಸಿದ್ಧತೆ ಪೂರ್ಣಗೊಂಡಿದ್ದು, ಸುಮಾರು 20 ಸಾವಿರ ಜನರು ಪಾಲ್ಗೊಂಡು ಯೋಜನೆ ವಿರುದ್ಧ ಜನಾಂದೋಲನ ರೂಪಿಸಲಿದ್ದಾರೆ. ಇದಕ್ಕಾಗಿ ನಗರದ ಎಂ.ಎಂ.ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದ ಮೈದಾನದಲ್ಲಿ ಬೃಹತ್‌ ವೇದಿಕೆ ಸಿದ್ಧಗೊಂಡಿದೆ. ವಿಶಾಲ ಜಾಗಕ್ಕೆ ಪೆಂಡಾಲ್‌ ಹಾಕಿ ಸುಮಾರು 6 ಸಾವಿರ ಜನರಿಗೆ ಕುಳಿತುಕೊಳ್ಳಲು ಖುರ್ಚಿ ಹಾಗೂ ವೇದಿಕೆಯ ಮುಂಭಾಗ 4 ಸಾವಿರ ಜನರಿಗೆ ಭಾರತೀಯ ಆಸನ ಸೇರಿದಂತೆ ಒಟ್ಟೂ 10 ಸಾವಿರ ಜನರಿಗೆ ಆಸನದ ವ್ಯವಸ್ಥೆ ಮಾಡಲಾಗಿದೆ.

ಸ್ವರ್ಣವಲ್ಲೀಯ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ, ಶ್ರೀಮನ್ನೆಲೆಮಾವು ಮಠದ ಮಾಧವಾನಂದ ಭಾರತೀ ಸ್ವಾಮೀಜಿ, ಸೋದೆ ವಾದಿರಾಜ ಮಠದ ವಿಶ್ವವಲ್ಲಭ ತೀರ್ಥ ಶ್ರೀಪಾದರು, ಜೈನಮಠದ ಸ್ವಸ್ತಿಶ್ರೀ ಭಟ್ಟಾಕಲಂಕ ಭಟ್ಟಾರಕ ಪಟ್ಟಾಚಾರ್ಯವರ್ಯ ಸ್ವಾಮೀಜಿ, ಜಡೆ ಮಹಾ ಸಂಸ್ಥಾನದ ಡಾ. ಮಹಾಂತ ಸ್ವಾಮೀಜಿ, ಸಿದ್ದಾಪುರ ಶಿರಳಗಿಯ ಬ್ರಹ್ಮಾನಂದ ಭಾರತೀ ಸ್ವಾಮೀಜಿ ಸಾನ್ನಿಧ್ಯದಲ್ಲಿ ನಡೆಯುವ ಸಭಾ ಕಾರ್ಯಕ್ರಮದಲ್ಲಿ ನಿವೃತ್ತ ಲೋಕಾಯುಕ್ತ ಹಾಗೂ ನಿವೃತ್ತ ನ್ಯಾಯವಾದಿ ಎನ್‌.ಸಂತೋಷ ಹೆಗ್ಡೆ, ಪರಿಸರ ಅರ್ಥಶಾಸ್ತ್ರಜ್ಞ ಪ್ರೊ.ಬಿ.ಎಂ. ಕುಮಾರಸ್ವಾಮಿ ವಿಶೇಷ ಉಪನ್ಯಾಸ ನೀಡಲಿದ್ದಾರೆ. ಅತಿಥಿಗಳಾಗಿ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ, ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ಶಾಸಕರಾದ ಆರ್‌.ವಿ. ದೇಶಪಾಂಡೆ, ದಿನಕರ ಶೆಟ್ಟಿ, ಶಿವರಾಮ ಹೆಬ್ಬಾರ, ಸತೀಶ ಸೈಲ್, ಭೀಮಣ್ಣ ನಾಯ್ಕ, ವಿಧಾನಪರಿಷತ್ ಸದಸ್ಯರಾದ ಗಣಪತಿ ಉಳ್ವೇಕರ, ಶಾಂತಾರಾಮ ಸಿದ್ದಿ ಮತ್ತಿತರರು ಉಪಸ್ಥಿತರಿರಲಿದ್ದಾರೆ.

ತಲೆತಲಾಂತರದಿಂದ ಜಿಲ್ಲೆಯ ಜೀವ ನದಿಗಳಿಂದ ಕೃಷಿ ಚಟುವಟಿಕೆ ನಡೆಸುತ್ತ ಗ್ರಾಮೀಣ ಭಾಗದಲ್ಲಿ ಬದುಕು ಕಟ್ಟಿಕೊಂಡಿರುವ ಶಿರಸಿ, ಸಿದ್ದಾಪುರ, ಯಲ್ಲಾಪುರ ಭಾಗದ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲಿದ್ದು, ಈಗಾಗಲೇ ಪ್ರತಿ ಮನೆ, ಮನೆಗೂ ಸಮಾವೇಶದಲ್ಲಿ ಪಾಲ್ಗೊಳ್ಳುವಂತೆ ಆಮಂತ್ರಣ ಪತ್ರ ನೀಡಲಾಗಿದೆ. ಪ್ರತಿ ಮನೆಯಿಂದ ಕಡ್ಡಾಯವಾಗಿ ಒಬ್ಬರು ಭಾಗವಹಿಸುವಂತೆ ತಿಳಿಸಲಾಗಿದೆ. ‘ಅಘನಾಶಿನಿ- ಬೇಡ್ತಿ, ವರದಾ ನದಿ ನಮ್ಮದು, ಬಿಟ್ಟು ಕೊಡುವ ಪ್ರಶ್ನೆಯೇ ಇಲ್ಲ’ ಎಂಬ ಘೋಷವಾಕ್ಯದಿಂದ ಮತ್ತು ಶರಾವತಿ ಪಂಪ್ಡ್‌ ಸ್ಟೋರೆಜ್‌ ಯೋಜನೆ ವಿರೋಧಿಸಿ ಕುಮಟಾ, ಹೊನ್ನಾವರ, ಭಟ್ಕಳ, ಸಾಗರ, ಶಿವಮೊಗ್ಗ, ಗೇರುಸೊಪ್ಪ ಭಾಗದಲ್ಲಿ ಈಗಾಗಲೇ ಕಿಚ್ಚು ಹಚ್ಚಿಕೊಂಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಸಮಾವೇಶಕ್ಕೆ ಪಾಲ್ಗೊಳ್ಳುವಂತೆ ಪ್ರೇರೇಪಿಸುತ್ತಿದ್ದಾರೆ.

ಸಮಾವೇಶದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ಸಂಭವಿಸದಂತೆ ಬಿಗಿ ಪೊಲೀಸ್ ಬಂದೋಬಸ್ತ್‌ ಏರ್ಪಡಿಸಲಾಗಿದೆ.