ಬುನಾದಿ ಸಾಕ್ಷರತೆ ಮತ್ತು ಸಂಖ್ಯಾ ಜ್ಞಾನದಲ್ಲಿ ಸಾಮರ್ಥ್ಯಗಳನ್ನು ಸಾಧಿಸದ ಮಕ್ಕಳ ಪರಿಣಾಮಕಾರಿ ಕಲಿಕೆಗೆ ಕಲಿಕಾ ಹಬ್ಬವು ಪ್ರೋತ್ಸಾಹದಾಯಕವಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಸೋಮಲಿಂಗೇಗೌಡ ತಿಳಿಸಿದರು. ಪಟ್ಟಣದ ಪಿ.ಎಂ.ಶ್ರೀ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪೇಟೆ ಕ್ಲಸ್ಟರ್ ೧ ಮಟ್ಟದ ಕಲಿಕಾ ಹಬ್ಬ ಹಾಗೂ ವಿಜ್ಞಾನ ಮತ್ತು ಗಣಿತ ವಸ್ತು ಪ್ರದರ್ಶನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಮಕ್ಕಳಲ್ಲಿ ಮೂಢನಂಬಿಕೆಯನ್ನು ಹೋಗಲಾಡಿಸಲು ಹಾಗೂ ವೈಜ್ಞಾನಿಕ ಮನೋಭಾವವನ್ನು ಮೂಡಿಸಲು ಇಂತಹ ಕಾರ್ಯಕ್ರಮಗಳು ಅವಶ್ಯಕ ಎಂದು ನುಡಿದರು.
ಕನ್ನಡಪ್ರಭ ವಾರ್ತೆ ಹೊಳೆನರಸೀಪುರ
ಬುನಾದಿ ಸಾಕ್ಷರತೆ ಮತ್ತು ಸಂಖ್ಯಾ ಜ್ಞಾನದಲ್ಲಿ ಸಾಮರ್ಥ್ಯಗಳನ್ನು ಸಾಧಿಸದ ಮಕ್ಕಳ ಪರಿಣಾಮಕಾರಿ ಕಲಿಕೆಗೆ ಕಲಿಕಾ ಹಬ್ಬವು ಪ್ರೋತ್ಸಾಹದಾಯಕವಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಸೋಮಲಿಂಗೇಗೌಡ ತಿಳಿಸಿದರು.ಪಟ್ಟಣದ ಪಿ.ಎಂ.ಶ್ರೀ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪೇಟೆ ಕ್ಲಸ್ಟರ್ ೧ ಮಟ್ಟದ ಕಲಿಕಾ ಹಬ್ಬ ಹಾಗೂ ವಿಜ್ಞಾನ ಮತ್ತು ಗಣಿತ ವಸ್ತು ಪ್ರದರ್ಶನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಮಕ್ಕಳಲ್ಲಿ ಮೂಢನಂಬಿಕೆಯನ್ನು ಹೋಗಲಾಡಿಸಲು ಹಾಗೂ ವೈಜ್ಞಾನಿಕ ಮನೋಭಾವವನ್ನು ಮೂಡಿಸಲು ಇಂತಹ ಕಾರ್ಯಕ್ರಮಗಳು ಅವಶ್ಯಕ ಎಂದು ನುಡಿದರು. ನಂತರ ವಿದ್ಯಾರ್ಥಿಗಳು ತಯಾರಿಸಿ ಪ್ರದರ್ಶಿಸಿದ ಸೌರವ್ಯೂಹ, ನೀರು ಶುದ್ಧೀಕರಣ, ರಾಕೆಟ್, ಕ್ಷಿಪಣಿಗಳು, ಮೃಗಾಲಯ ವಿದ್ಯುತ್ ಕೋಶ, ಸೌರಶಕ್ತಿ, ಶಾಲೆ, ಆಸ್ಪತ್ರೆ, ಪೊಲೀಸ್ ಠಾಣೆ, ಅಗ್ನಿಶಾಮಕ, ವಿಜ್ಞಾನದ ಆಟ, ಬಹುಮಹಡಿ ಕಟ್ಟಡಗಳು, ಗುರುಕುಲ, ಕ್ರಿಕೆಟ್ ಸ್ಟೇಡಿಯಂ, ಜ್ವಾಲಾಮುಖಿ, ಹತೋಟಗಳು ಮುಂತಾದ ಕಲಿಕೆಗೆ ಪೂರಕವಾದ ಮಾದರಿಗಳನ್ನು ಕಂಡು ವಿದ್ಯಾರ್ಥಿಗಳ ಕಲಿಕಾ ಆಸಕ್ತಿ ಮತ್ತು ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಭಾಗವಹಿಸುವಿಕೆಯನ್ನು ಅಭಿನಂದಿಸಿ, ಶ್ಲಾಘಿಸಿದರು.
ಮುಖ್ಯ ಶಿಕ್ಷಕರಾದ ರಾಜು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ವಿಜ್ಞಾನ ಶಿಕ್ಷಕರಾದ ಕೆಎನ್ ಪುಷ್ಪಲತ ಮತ್ತು ಮೌಲ್ಯಶ್ರೀ ಅವರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ವಿಜ್ಞಾನ ಮತ್ತು ಗಣಿತದ ಮಾದರಿಗಳನ್ನು ತಯಾರಿಸಿದ್ದರು ಹಾಗೂ ಪೇಟೆ ಕ್ಲಸ್ಟರ್ ೧ನ ಬೇರೆ ಬೇರೆ ಶಾಲೆಗಳ ಶಿಕ್ಷಕರು ಮತ್ತು ಮಕ್ಕಳು ಹಾಜರಿದ್ದು ವಿಜ್ಞಾನ ಮತ್ತು ಗಣಿತ ವಸ್ತು ಪ್ರದರ್ಶನವನ್ನು ವೀಕ್ಷಿಸಿದರು.ಕಾರ್ಯಕ್ರಮದಲ್ಲಿ ದೈಹಿಕ ಶಿಕ್ಷಕ ಪರಿವೀಕ್ಷಕ ಸುಜಾತ ಅಲಿ, ಇಸಿಒ ಕಾಂತರಾಜಪ್ಪ, ಅಕ್ಷರ ದಾಸೋಹ ಅಧಿಕಾರಿ ರಾಮಚಂದ್ರಪ್ಪ, ಸಿಆರ್‌ಪಿ ಚಂದ್ರಶೇಖರ್, ಶಿಕ್ಷಕರಾದ ಸಾಕಮ್ಮ, ಕಾಂತಮಣಿ, ಸಿ.ಎ.ಪುಷ್ಪ, ಕೆ.ಸಿ.ಪುಷ್ಪಲತಾ, ಇಂದ್ರಾಣಿ, ಕವಿತಾ, ಪದ್ಮ, ರೇಣುಕಾ, ಶುಭ, ನಾಗರತ್ನ, ಅರುಣ್ ಕುಮಾರಿ, ಫಿದಾ ಫಾತೀಮಾ, ಕಾಂತರಾಜು ಇದ್ದರು.