ಸಾರಾಂಶ
ಶ್ರೀಲಂಕಾದ 130, ನೇಪಾಳದಿಂದ 10, ಬೂತಾನ್‌ನ 44, ಬಾಂಗ್ಲಾದೇಶದಿಂದ ನಾಲ್ವರು ಹಾಗೂ ಭಾರತದ 17 ರಾಜ್ಯಗಳ ಸ್ಪರ್ಧಿಗಳು ಸಹಿತ 2,000 ಕ್ಕೂ ಅಧಿಕ ಕ್ರೀಡಾಪಟುಗಳು ಸೌತ್ ಏಷಿಯಾ ಮಾಸ್ಟರ್ಸ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸುತ್ತಿದ್ದಾರೆ. ವಿವಿಧ ವಯೋಮಾನದ ಒಟ್ಟು 12 ವಿಭಾಗಗಳಲ್ಲಿ ಸ್ಪರ್ಧೆಗಳು ನಡೆಯುತ್ತಿವೆ.
ಕನ್ನಡಪ್ರಭ ವಾರ್ತೆ ಮಂಗಳೂರು
ಸೌತ್ ಇಂಡಿಯಾ ಮಾಸ್ಟರ್ಸ್ ಅಥ್ಲೆಟಿಕ್ಸ್ ಅಸೋಸಿಯೇಶನ್ ನಗರದ ಮಂಗಳಾ ಕ್ರೀಡಾಂಗಣದಲ್ಲಿ ಆಯೋಜಿಸಿದ ಮೂರು ದಿನಗಳ ಸೌತ್ ಏಷಿಯಾ ಮಾಸ್ಟರ್ಸ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ಗೆ ವಿಧಾನಸಭಾ ಅಧ್ಯಕ್ಷ ಯು.ಟಿ.ಖಾದರ್ ಶುಕ್ರವಾರ ಚಾಲನೆ ನೀಡಿದರು.ಬಳಿಕ ಮಾತನಾಡಿದ ಅವರು, ಕೂಟದಲ್ಲಿ ಉತ್ಸಾಹದಿಂದ ಪಾಲ್ಗೊಳ್ಳುತ್ತಿರುವ ಮಾಸ್ಟರ್ಸ್ ಅಥ್ಲೆಟಿಕ್ಸ್‌ಗಳು ಭವಿಷ್ಯದ ಭಾರತದ ಆರೋಗ್ಯವಂತ ಸಮಾಜದ ರಾಯಭಾರಿಗಳಾಗಿದ್ದಾರೆ. ಯುವಜನರಿಗೆ ಪ್ರೇರಣೆಯಾಗಿದ್ದಾರೆ ಎಂದು ಶುಭ ಹಾರೈಸಿದರು.ಸೌತ್ ಇಂಡಿಯಾ ಮಾಸ್ಟರ್ಸ್ ಅಥ್ಲೆಟಿಕ್ಸ್ ಅಸೋಸಿಯೇಶನ್ ಗೌರವ ಅಧ್ಯಕ್ಷ ಐವನ್ ಡಿಸೋಜಾ ಮಾತನಾಡಿ, ಮಾಸ್ಟರ್ಸ್ ವಿವಿಧ ವಿವಿಧ ವಿಭಾಗಗಳಲ್ಲಿ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ವಿಭಾಗಗಳಲ್ಲಿ ಪದಕ ಪಡೆಯುವ ಕ್ರೀಡಾಪಟುಗಳಿಗೆ ಪಿಂಚಣಿ ಒದಗಿಸುವ ನಿಟ್ಟಿನಲ್ಲಿ ಪ್ರಯತ್ನಿಸುವಂತೆ ವಿಧಾನಸಭೆ ಅಧ್ಯಕ್ಷ ಯು.ಟಿ.ಖಾದರ್ ಅವರನ್ನು ಕೋರುವುದಾಗಿ ತಿಳಿಸಿದರು.
ಈ ಕ್ರೀಡಾಕೂಟದಲ್ಲಿ 30 ರಿಂದ 98 ವರ್ಷ ತನಕದ ಕ್ರೀಡಾಪಟುಗಳು ಭಾಗವಹಿಸುತ್ತಿದ್ದಾರೆ. ಅವರ ಕ್ರೀಡಾ ಸ್ಫೂರ್ತಿ, ದೈಹಿಕ ಕ್ಷಮತೆ, ಜೀವನೋತ್ಸಾಹ ಅಭಿನಂದನೀಯ ಎಂದರು.ಮಂಗಳೂರಿನ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಪ್ರದೀಪ್ ಡಿಸೋಜಾ ಮುಖ್ಯ ಅತಿಥಿಯಾಗಿದ್ದರು. ಸೌತ್ ಇಂಡಿಯಾ ಮಾಸ್ಟರ್ಸ್ ಅಥ್ಲೆಟಿಕ್ಸ್ ಅಸೋಸಿಯೇಶನ್ ಅಧ್ಯಕ್ಷ ಸುರೇಂದ್ರ ಶೆಟ್ಟಿ ಸ್ವಾಗತಿಸಿದರು. ಕಾರ್ಯದರ್ಶಿ ಉದಯ ಕುಮಾರ್ ಶೆಟ್ಟಿ, ಉಪಾಧ್ಯಕ್ಷ ಪ್ರೇಮನಾಥ ಶೆಟ್ಟಿ ಬಿ.ಎ., ಸಹ ಖಜಾಂಚಿ ಅನ್ವರ್ ಇಬ್ರಾಹಿಂ ಇದ್ದರು.