ಸಾರಾಂಶ
ನಗರದ ಸೇವಾಭಾರತಿ ಶಿಕ್ಷಣ ಸಂಸ್ಥೆಯಲ್ಲಿ ನಡೆದ ಸಾಮರಸ್ಯ ವಿಜ್ಞಾನ, ಕಲಾ ವಸ್ತು ಪ್ರದರ್ಶನ ಹಾಗೂ ಪೋಷಕರು ವಿದ್ಯಾರ್ಥಿಗಳ ಆಹಾರ ಮೇಳ ಗಮನ ಸೆಳೆಯಿತು.
ಕನ್ನಡಪ್ರಭ ವಾರ್ತೆ ಚಾಮರಾಜನಗರನಗರದ ಸೇವಾಭಾರತಿ ಶಿಕ್ಷಣ ಸಂಸ್ಥೆಯಲ್ಲಿ ನಡೆದ ಸಾಮರಸ್ಯ ವಿಜ್ಞಾನ, ಕಲಾ ವಸ್ತು ಪ್ರದರ್ಶನ ಹಾಗೂ ಪೋಷಕರು ವಿದ್ಯಾರ್ಥಿಗಳ ಆಹಾರ ಮೇಳ ಗಮನ ಸೆಳೆಯಿತು. ಸೇವಾಭಾರತಿ ಸಂಸ್ಥೆಯ ೩೮ನೇ ವಾರ್ಷಿಕೋತ್ಸವದ ಅಂಗವಾಗಿ ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಹಾಗೂ ಪೋಷಕರು ಭಾಗವಹಿಸಿ ಸಂಭ್ರಮಿಸಿದರು. ಪ್ರಾಥಮಿಕ, ಪ್ರೌಢ ಹಾಗೂ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳು ಕಲೆ, ಸಂಸ್ಕೃತಿ, ಅಚಾರ, ವಿಚಾರ, ಪರಂಪರೆ, ವಿಜ್ಞಾನ, ತಂತ್ರಜ್ಞಾನ, ಕೃಷಿ, ಪರಿಸರ, ಅರಣ್ಯ, ಗ್ರಾಮೀಣ ಬಾಹ್ಯಾಕಾಶ, ಗಣಿತ, ಇತಿಹಾಸ, ಕಲೆ ಸೇರಿದಂತೆ ಇತರ ಕ್ಷೇತ್ರಗಳ ಕುರಿತು ತಯಾರಿಸಿದ್ದ ಮಾದರಿಗಳನ್ನು ವಿಜ್ಞಾನ ಕಲಾ ವಸ್ತು ಪ್ರದರ್ಶನದಲ್ಲಿ ಪ್ರದರ್ಶಿಸಲಾಯಿತು.
ಶಾಲಾ ಅಂಗಳದಲ್ಲಿ ಆಯೋಜಿಸಿದ್ದ ಆಹಾರ ಮೇಳದಲ್ಲಿ ಪೋಷಕರು ಹಾಗೂ ವಿದ್ಯಾರ್ಥಿಗಳು ಜತೆಗೂಡಿ ವಿವಿಧ ರೀತಿಯ ಆಹಾರ ಪದಾರ್ಥಗಳನ್ನು ಸಿದ್ಧಪಡಿಸಿ ಮಾರಾಟ ಮಾಡಿದರು. ಚುರುಮುರಿ, ಬೋಂಡ, ರಾಗಿ ದೋಸೆ, ಇಡ್ಲಿ, ಪಡ್ಡು, ಚಕ್ಕುಲಿ, ನಿಪ್ಪಟ್ಟು, ನಿಂಬೆಹಣ್ಣಿನ ಜ್ಯೂಸ್, ಕಲ್ಲಂಗಡಿ ಸಲಾಡ್, ಸ್ವೀಟ್ ಕಾರ್ನ್ ಸಹಿತ ವಿವಿಧ ತಿಂಡಿಗಳನ್ನು ಪೋಷಕರು, ವಿದ್ಯಾರ್ಥಿಗಳು ಸವಿದರು.ಅಹಾರ ಮೇಳದಲ್ಲಿ ಜಂಕ್‌ಫುಡ್ ತಯಾರಿಕೆಗೆ ಅವಕಾಶ ಇರಲಿಲ್ಲ. ಸಾಂಪ್ರದಾಯಿಕ ಹಾಗೂ ಪೌಷ್ಟಿಕ ಆಹಾರಗಳು ಮಾತ್ರ ಮಾರಾಟಕ್ಕಿಡಲಾಗಿತ್ತು. ವಿದ್ಯಾರ್ಥಿಗಳಿಗೆ ಉತ್ತಮ ಅಹಾರ ಪದ್ಧತಿ ರೂಢಿಸುವುದು ಹಾಗೂ ಪೋಷಕರಿಗೆ ಪೌಷ್ಟಿಕ ಆಹಾರ ತಯಾರಿಕೆಗೆ ಪ್ರೇರೇಪಿಸುವುದು ಆಹಾರ ಮೇಳದ ಉದ್ದೇಶವಾಗಿತ್ತು.ಇಂದು ಸಾಮರಸ್ಯ ಸಂಗಮ ಸಾಂಸ್ಕೃತಿಕ ಕಾರ್ಯಕ್ರಮ:ಜ.೧೧ರಂದು ಸಾಮರಸ್ಯ ಸಂಗಮ ಸಾಂಸ್ಕೃತಿಕ ಕಾರ್ಯಕ್ರಮ ಶಾಲೆಯ ಆವರಣದಲ್ಲಿ ನಡೆಯಲಿದೆ. ವಿದ್ಯಾರ್ಥಿಗಳು ಮೈನವಿರೇಳಿಸುವ ಶಾರೀರಿಕ ಸಾಹಸ ಪ್ರದರ್ಶನ ನೀಡಲಿದ್ದಾರೆ. ಕಲೆ, ಸಂಸ್ಕೃತಿ, ಜಾನಪದ ಸೊಗಡಿನ ನೃತ್ಯರೂಪಕಗಳ ಪ್ರದರ್ಶನಗೊಳ್ಳಲಿವೆ. ಪ್ರಾಥಮಿಕ ಶಾಲೆಯಿಂದ ಪಿಯುಸಿವರೆಗಿನ ವಿದ್ಯಾರ್ಥಿಗಳು ವರ್ಣರಂಜಿತ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೀಡಲಿದ್ದಾರೆ ಎಂದರು.ಕಾರ್ಯಕ್ರಮದಲ್ಲಿ ಮೈಸೂರು ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಧ್ವಜಾರೋಹಣ ಮಾಡಲಿದ್ದಾರೆ. ಮಕ್ಕಳ ತಜ್ಞ ವೈದ್ಯ ಡಾ.ವಾಮನರಾವ್ ಬಾಪಟ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಶಾಸಕ ಪುಟ್ಟರಂಗಶೆಟ್ಟಿ, ಮಹಾರಾಜ ಎಜುಕೇಷನ್ ಟ್ರಸ್ಟ್ ಅಧ್ಯಕ್ಷ ಎಸ್.ಮುರಳಿ, ಕೃಷ್ಣರಾಜ ಕ್ಷೇತ್ರದ ಶಾಸಕ ಶ್ರೀವತ್ಸ, ಆರ್‌ಎಸ್‌ಎಸ್ ಮೈಸೂರು ನಗರದ ಸಂಘ ಚಾಲಕ ವಾಸುದೇವ ಭಟ್, ಆದಾಯ ತೆರಿಗೆ ಇಲಾಖೆ ಹೆಚ್ಚುವರಿ ಆಯುಕ್ತ ಕಿರಣ್, ಜಿಲ್ಲಾಧಿಕಾರಿ ಶಿಲ್ಪಾನಾಗ್, ಎಸ್ಪಿ ಡಾ.ಬಿ.ಟಿ. ಕವಿತಾ, ನಗರಸಭೆ ಅಧ್ಯಕ್ಷ ಸುರೇಶ್, ಡಿಡಿಪಿಯು ಮಂಜುನಾಥ ಪ್ರಸನ್ನ, ಡಿಡಿಪಿಐ ರಾಮಚಂದ್ರ ರಾಜೇ ಅರಸ್ ಸಹಿತ ಹಲವು ಗಣ್ಯರು ಉಪಸ್ಥಿತರಿರುವರು, ಸೇವಾಭಾರತಿ ಶಿಕ್ಷಣ ಸಂಸ್ಥೆಯ ಗ್ರಾಮಾಂತರ ಹಾಗೂ ನಗರ ವ್ಯಾಪ್ತಿಯ ಶಾಲೆಗಳ, ಕಾಲೇಜುಗಳ ೩,೦೦೦ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ.