ಸಮರ್ಪಣಾಭಾವ ಪ್ರತಿಯೊಬ್ಬರಲ್ಲಿ ಬೆಳೆಯಲಿ: ಸುಧಾಕರ

| Published : Nov 11 2025, 02:45 AM IST

ಸಮರ್ಪಣಾಭಾವ ಪ್ರತಿಯೊಬ್ಬರಲ್ಲಿ ಬೆಳೆಯಲಿ: ಸುಧಾಕರ
Share this Article
  • FB
  • TW
  • Linkdin
  • Email

ಸಾರಾಂಶ

ಸಮಾಜದಲ್ಲಿನ ಚಿಂತಕರು, ಗಣ್ಯರಿಗೆ ದೇಶದ ಬಗ್ಗೆ ಅಭಿಮಾನ ಮೂಡುವಂತೆ ಮನಪರಿವರ್ತನೆ ಮಾಡುವ ಕಾರ್ಯ ನಾವು ಮಾಡಬೇಕಾಗಿದೆ.

ರಾಷ್ಟ್ರೀಯ ಸ್ವಯಂಸೇವಕ ಸಂಘದ ಶತಾಬ್ಧಿ ನಿಮಿತ್ತ ಪಥಸಂಚಲನ । ಸಾರ್ವಜನಿಕ ಸಮಾರಂಭ

ಕನ್ನಡಪ್ರಭ ವಾರ್ತೆ ಯಲ್ಲಾಪುರ

ಸಮಾಜದಲ್ಲಿನ ಚಿಂತಕರು, ಗಣ್ಯರಿಗೆ ದೇಶದ ಬಗ್ಗೆ ಅಭಿಮಾನ ಮೂಡುವಂತೆ ಮನಪರಿವರ್ತನೆ ಮಾಡುವ ಕಾರ್ಯ ನಾವು ಮಾಡಬೇಕಾಗಿದೆ. ಪ್ರಪಂಚಕ್ಕೆ ನಾವು ನೇತೃತ್ವ ವಹಿಸಿ, ಸರ್ವೇ ಜನಾಃ ಸುಖಿನೋ ಭವಂತು ಎನ್ನುವ ಸಂದೇಶವನ್ನು ಸಾರುವ ನಾವು, ಈ ದೇಶ ನನ್ನದು ಎಂಬ ಸಮರ್ಪಣಾಭಾವ ಪ್ರತಿಯೊಬ್ಬ ಹಿಂದೂಗಳಲ್ಲಿ ಬೆಳೆಯುವಂತೆ ಮಾಡಬೇಕಾಗಿದೆ. ಆ ನೆಲೆಯಲ್ಲಿ ನಮ್ಮ ಸಂಘದ ಕಾರ್ಯಕರ್ತರು ನಿಸ್ವಾರ್ಥವಾಗಿ ದೇಶದ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ ಎಂದು ವಿಶ್ವ ಹಿಂದೂ ಸೇವಾ ಪ್ರತಿಷ್ಠಾನದ ಸಂಚಾಲಕ ಸುಧಾಕರ ಹೇಳಿದರು.

ಭಾನುವಾರ ಪಟ್ಟಣದ ವೈ.ಟಿ.ಎಸ್.ಎಸ್. ಮೈದಾನದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ ಹಮ್ಮಿಕೊಂಡಿದ್ದ ಶತಾಬ್ಧಿ ಪಥಸಂಚಲನದ ನಂತರ ಸಾರ್ವಜನಿಕ ಸಮಾರಂಭದಲ್ಲಿ ಮಾತನಾಡಿದರು.

ಇಂದು ನಾವು ಪಂಚಭೂತಗಳನ್ನೇ ಕಲುಷಿತಗೊಳಿಸಿದ್ದೇವೆ. ಆಧುನಿಕತೆಯ ಹೆಸರಿನಲ್ಲಿ ನಮ್ಮ ಎಲ್ಲ ಸಂಪ್ರದಾಯವನ್ನು ಬದಿಗೊತ್ತಿ ಮುನ್ನಡೆದ ಪರಿಣಾಮ ಭವಿಷ್ಯತ್ತಿನ ಅಪಾಯದ ಅರಿವಾಗಲು ಪ್ರಾರಂಭಗೊಂಡಿದೆ. ನಮ್ಮ ಕೃಷಿ, ಶಿಕ್ಷಣ, ವ್ಯವಹಾರ, ಮನೆಯ ವ್ಯವಸ್ಥೆಗಳಲ್ಲಿಯೂ ಸಂಪ್ರದಾಯ ಉಳಿಸಿಕೊಳ್ಳದಿದ್ದರೆ ಅಪಾಯ ಎಂಬ ಅರಿವಿನ ಕಾಲಘಟ್ಟದಲ್ಲಿ ಪುನಃ ನಾವು ಅದನ್ನು ತರಬೇಕಾಗಿದೆ. ಮೆಕಾಲೆ ಶಿಕ್ಷಣದಂತದ ವ್ಯವಸ್ಥೆಯಲ್ಲೇ ಇಂದು ಇದ್ದೇವೆ. ಪ್ರತಿ ಮನೆಗಳಲ್ಲಿಯೂ ಸ್ವಯಂಸೇವಕರು ಬೆಳೆಯಬೇಕಾಗಿದೆ. ಈ ದೇಶದಲ್ಲಿ ಸಂಘ ಹುಟ್ಟಿ ನೂರು ವರ್ಷ ಕಳೆದಿದೆ. ಯಾವ ಸಂಘದ ಕಾರ್ಯಕರ್ತನಿಂದಲೂ ದೇಶದ್ರೋಹದ ಕೆಲಸವಾಗಿಲ್ಲ. ಆದರೆ ದೇಶದ್ರೋಹದ ಕೆಲಸ ಮಾಡುವವರನ್ನು ರಕ್ಷಿಸುವ ವ್ಯವಸ್ಥೆ ಬದಲಾಗಬೇಕಾಗಿದೆ. ಆ ಕುರಿತು ನಮ್ಮ ಸಂಘಟನೆ ತೀವ್ರ ಬಲಗೊಳ್ಳಬೇಕು. ವಟವೃಕ್ಷದ ಹಾಗೆ ಸಂಘ ಬೆಳೆಯುತ್ತಿದೆ. ಪ್ರತಿಯೋರ್ವರಲ್ಲಿಯೂ ಸದ್ಗುಣಗಳು, ದೇಶಭಕ್ತಿಯನ್ನು ಜಾಗೃತಿ ಮಾಡಬೇಕಾಗಿದೆ ಎಂದ ಅವರು, ವೈದ್ಯರಾಗಿದ್ದ ಕೇಶವ ಬಲರಾಮ ಹೆಡಗೆಯವರ್ ಕೇವಲ ೧೫ ಜನರನ್ನು ಸೇರಿಸಿ ಸಂಘ ಸ್ಥಾಪಿಸಿದ್ದರು. ಅದಿಂದು ವಿಶ್ವಮಟ್ಟಕ್ಕೆ ವ್ಯಾಪಿಸಿ, ೪೦ ರಾಷ್ಟ್ರಗಳಲ್ಲಿದೆ. ವಿರೋಧಿಸಿದಂತೆ ನಮ್ಮ ಸಂಘಟನೆ ಬಲಗೊಳ್ಳುತ್ತಿದೆ. ನೆಹರೂ, ಇಂದಿರಾಗಾಂಧಿ ಎಲ್ಲರೂ ಸಂಘವನ್ನು ನಿಷೇಧಿಸಿದ್ದರು. ಅದರಿಂದ ಯಾವ ಸಾಧನೆಯೂ ಆಗಿಲ್ಲ ಎಂದು ತಮ್ಮ ಸುದೀರ್ಘ ಭಾಷಣದಲ್ಲಿ ಹಲವಾರು ವಿಚಾರಗಳನ್ನು ಪ್ರಸ್ತಾಪಿಸಿದರು.

ಸವಿತಾ ಸಮಾಜದ ಅಧ್ಯಕ್ಷ ನಾಗರಾಜ ಯಾಮಕೆ ಮಾತನಾಡಿದರು.

ಇದಕ್ಕೂ ಮೊದಲು ವೈ.ಟಿ.ಎಸ್.ಎಸ್. ಮೈದಾನದಿಂದ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಒಂದೂವರೆ ಸಾವಿರಕ್ಕಿಂತಲೂ ಹೆಚ್ಚಿನ ಸ್ವಯಂಸೇವಕರು ಸಮವಸ್ತ್ರದೊಂದಿಗೆ ಲಾಠಿ ಹಿಡಿದು ಭವ್ಯ ಪಥಸಂಚಲನ ನಡೆಸಿದರು. ಶಾಶ್ವತ ಭಟ್ಟ ಬೋಳೆಮನೆ ಪ್ರಾರ್ಥಿಸಿದರು. ಗಣೇಶ ನೆರ್ಲೆಮನೆ ವೈಯಕ್ತಿಕ ಗೀತೆ ಹಾಡಿದರು. ತಾಲೂಕು ಕಾರ್ಯವಾಹ ರಾಘವೇಂದ್ರ ಧೂಳಿ ಸ್ವಾಗತಿಸಿದರು. ವೆಂಕಟೇಶ ಗೇರಗದ್ದೆ ನಿರ್ವಹಿಸಿದರು. ಸಹಕಾರ್ಯವಾಹ ಮಂಜುನಾಥ ಹಿರೇಮಠ ವಂದಿಸಿದರು.