ಸಾರಾಂಶ
- ಮನವಿಗೆ ಸ್ಪಂದನೆ: ರೈತರ ಒಕ್ಕಲೆಬ್ಬಿಸದಂತೆ ಭದ್ರಾವತಿ ವಲಯ ಅರಣ್ಯ ಸಂರಕ್ಷಣಾಧಿಕಾರಿಗೆ ಸಚಿವರಿಂದ ಸೂಚನೆ
- 35 ವರ್ಷಗಳಿಂದಲೂ ವಾಸಿಸುತ್ತ, ಉಳುಮೆ ಮಾಡುತ್ತಿರುವ ಪರಿಶಿಷ್ಟರು, ಹಿಂದುಳಿದ ರೈತರು - - - ಕನ್ನಡಪ್ರಭ ವಾರ್ತೆ ದಾವಣಗೆರೆ ಮಾಯಕೊಂಡ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಅರಣ್ಯ ಭೂಮಿಯಲ್ಲಿ ಸುಮಾರು 40 ವರ್ಷಗಳಿಂದ ಮನೆ ನಿರ್ಮಿಸಿಕೊಂಡು, ಜಮೀನು ಉಳುಮೆ ಮಾಡಿಕೊಂಡು ಬಂದಿರುವ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ ಮತ್ತು ಹಿಂದುಳಿದ ವರ್ಗಗಳ ರೈತರನ್ನು ಯಾವುದೇ ಕಾರಣಕ್ಕೂ ಒಕ್ಕಲೆಬ್ಬಿಸಬಾರದು ಎಂದು ಶಾಸಕ ಕೆ.ಎಸ್. ಬಸವಂತಪ್ಪ, ಬೆಂಗಳೂರಿನಲ್ಲಿ ಶನಿವಾರ ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರನ್ನು ಭೇಟಿಯಾಗಿ, ಮನವಿ ಸಲ್ಲಿಸಿದರು.ಮಾಯಕೊಂಡ ಕ್ಷೇತ್ರದ ವ್ಯಾಪ್ತಿಯ ಶುಂಗಾರಬಾಗ್ ಮತ್ತು ಕಂಚಗಾರ್ತಿಕಟ್ಟೆ ಗ್ರಾಮಗಳ ವ್ಯಾಪ್ತಿಯ ಸರ್ವೆ ನಂ.16ರಲ್ಲಿ 30ರಿಂದ 35 ವರ್ಷಗಳಿಂದ ಮನೆಗಳನ್ನು ನಿರ್ಮಿಸಿಕೊಂಡು ವಾಸವಾಗಿದ್ದಾರೆ. ಈ ಗ್ರಾಮಗಳಲ್ಲಿ ಸರ್ಕಾರಿ ಶಾಲೆಗಳು ಸಹ ಇವೆ. ರೈತರು ಸುಮಾರು ವರ್ಷಗಳಿಂದ ವ್ಯವಸಾಯ ಮಾಡಿ ಜೀವನ ಸಾಗಿಸುತ್ತಿದ್ದಾರೆ ಎಂದು ತಿಳಿಸಿದರು.
ಈ ಹಿಂದೆ ಶಿವಮೊಗ್ಗ ಜಿಲ್ಲೆಗೆ ಸೇರಿದ ಸಂದರ್ಭದಲ್ಲಿ ಮೇಲ್ಕಂಡ ಗ್ರಾಮಗಳಲ್ಲಿ ವಾಸಿಸುತ್ತಿರುವವರಿಗೆ ನಿವೇಶನ ಮತ್ತು ಜಮೀನುಗಳಿಗೆ ಸಂಬಂಧಿಸಿದಂತೆ ಹಕ್ಕುಪತ್ರ ಕೂಡ ವಿತರಿಸಲಾಗಿದೆ. ಇಷ್ಟಿದ್ದರೂ ಪ್ರಸ್ತುತ ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿಗಳು ಮೇಲ್ಕಂಡ ಗ್ರಾಮಗಳಲ್ಲಿ ವಾಸಿಸುತ್ತಿರುವ ಜನರನ್ನು ಹಾಗೂ ಅವರು ಉಳುವೆ ಮಾಡಿ ಜೀವನ ಸಾಗಿಸುತ್ತಿರುವ ಜಮೀನುಗಳನ್ನು ತೆರವುಗೊಳಿಸುವಂತೆ ಅವರ ಮೇಲೆ ದೌರ್ಜನ್ಯವೆಸಗುತ್ತಿದ್ದಾರೆ ಎಂದು ಆರೋಪಿಸಿದರು.ಈ ಗ್ರಾಮಗಳಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ ಹಾಗೂ ಹಿಂದುಳಿದ ಸಮುದಾಯಗಳ ಜನರೇ ವಾಸವಿದ್ದಾರೆ. ಆದ್ದರಿಂದ ಭದ್ರಾವತಿ ವಲಯ ಅರಣ್ಯ ಸಂರಕ್ಷಣಾಧಿಕಾರಿಗಳು ಇವರನ್ನು ಒಕ್ಕಲೆಬ್ಬಿಸಬಾರದು. ಯಥಾಸ್ಥಿತಿ ಕಾಪಾಡಿಕೊಂಡು ಹೋಗುವಂತೆ ಆದೇಶ ನೀಡಬೇಕು. ಒಂದುವೇಳೆ ಕ್ರಮ ಕೈಗೊಳ್ಳುವುದಾದರೆ ಸಂಬಂಧಪಟ್ಟ ಸಚಿವರು, ಶಾಸಕರೊಂದಿಗೆ ಚರ್ಚಿಸಿ ನಿರ್ಧಾರ ಮಾಡಬೇಕು. ಅಧಿಕಾರಿಗಳು ಏಕಾಏಕಿ ನಿರ್ಧಾರ ತೆಗೆದುಕೊಳ್ಳಬಾರದು. ಈ ಕುರಿತು ಡಿಎಫ್‌ಒಗೆ ಸೂಚನೆ ನೀಡಬೇಕೆಂದು ಶಾಸಕ ಕೆ.ಎಸ್. ಬಸವಂತಪ್ಪ, ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರಿಗೆ ಮನವಿ ಮಾಡಿದರು.
ಶಾಸಕರ ಮನವಿ ಸ್ಪಂದಿಸಿದ ಸಚಿವರು, ಸಂಬಂಧಪಟ್ಟ ಭದ್ರಾವತಿ ವಲಯ ಅರಣ್ಯ ಸಂರಕ್ಷಣಾಧಿಕಾರಿಗೆ ದೂರವಾಣಿ ಮೂಲಕ ಸಂಪರ್ಕಿಸಿ, ಸುಮಾರು 30ರಿಂದ 35 ವರ್ಷಗಳಿಂದ ಮನೆ ಕಟ್ಟಿಕೊಂಡು, ಜಮೀನು ಉಳುಮೆ ಮಾಡಿಕೊಂಡಿರುವ ರೈತರು ಮತ್ತು ಸಾರ್ವಜನಿಕರನ್ನು ಒಕ್ಕಲೆಬ್ಬಿಸಬೇಡಿ ಎಂದು ಸೂಚನೆ ನೀಡಿದ್ದಾರೆ.- - - -31ಕೆಡಿವಿಜಿ33ಃ:
ಮಾಯಕೊಂಡ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ರೈತರನ್ನು ಒಕ್ಕಲೆಬ್ಬಿಸಬಾರದು ಎಂದು ಒತ್ತಾಯಿಸಿ ಶಾಸಕ ಕೆ.ಎಸ್.ಬಸವಂತಪ್ಪ ಅವರು ಬೆಂಗಳೂರಿನಲ್ಲಿ ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರಿಗೆ ಮನವಿ ಸಲ್ಲಿಸಿದರು.