ಸಾರಾಂಶ
ಕನ್ನಡಪ್ರಭ ವಾರ್ತೆ ಜಮಖಂಡಿ
ನಗರಸಭೆಯಲ್ಲಿ ಹೊರಗುತ್ತಿಗೆ ಕಾರ್ಮಿಕರ ನೇಮಕಾತಿಯಲ್ಲಿ ಭಾರೀ ಅವ್ಯವಹಾರವಾಗಿದ್ದು, ಓರ್ವ ಕಾರ್ಮಿಕನ ನೇಮಕಾತಿಗೆ ₹50 ಸಾವಿರ ಲಂಚ ಪಡೆದುಕೊಂಡಿದ್ದಾರೆ. ಲಂಚಪಡೆದು ನೇಮಕಾತಿ ಮಾಡಿಕೊಂಡ ಎನ್ಜಿಒ ಸಂಸ್ಥೆ ರದ್ದುಗೊಳಿಸಿ ಕಪ್ಪುಪಟ್ಟಿಗೆ ಸೇರ್ಪಡೆಗೊಳಿಸಿ ಇಲಾಖೆ ತನಿಖೆಯಾಗಬೇಕೆಂದು ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.ಸ್ಥಳೀಯ ನಗರಸಭೆ ಕಾರ್ಯಾಲಯದ ಸಭಾಭವನದಲ್ಲಿ ಶನಿವಾರ ನೂತನ ಅಧ್ಯಕ್ಷ ಪರಮಾನಂದ ಗವರೋಜಿ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಸದಸ್ಯರು ಮತ್ತು ನಗರಸಭೆ ಅಧಿಕಾರಿಗಳ ನಡುವೆ ಮಾತಿನ ಚಕಮಕಿ ಕೂಡ ನಡೆಯಿತು.ಪೌರಾಯುಕ್ತರು ಸದಸ್ಯರ ಗಮನಕ್ಕೆ ತರದೇ ಶವಯಾತ್ರೆ ವಾಹನ ಖರೀದಿ ಟೆಂಡರ್ ಕರೆದಿದ್ದಾರೆ. ಆದರೆ, ಪೌರಾಯುಕ್ತರು ಸದಸ್ಯರ ಸಭೆ ಕರೆದು ಚರ್ಚೆ ನಂತರ ಟೆಂಡರ್ ಕರೆಯಬೇಕು ಎಂದು ನಗರಸಭೆ ಸದಸ್ಯರು ಒತ್ತಾಯಿಸಿದರು. ರಹಿಮತನಗರದಲ್ಲಿ ₹12 ಲಕ್ಷದಲ್ಲಿ ನಿರ್ಮಿಸಿರುವ ಸಮುದಾಯ ಭವನ ಸಂಪೂರ್ಣ ಕಳಪೆಯಾಗಿದೆ. ನಗರಸಭೆ ಅಧಿಕಾರಿಗಳು ಪರಿಶೀಲನೆ ನಂತರ ಗುತ್ತಿಗೆದಾರರಿಗೆ ಬಿಲ್ ಪಾವತಿಸಬೇಕು ಎಂಬ ಆಗ್ರಹಿಸಿದರು.
ಏಕ ನಿವೇಶನ ಸಂಬಂಧ ಜಟಾಪಟಿ:ಏಕ ನಿವೇಶನ ವಿಷಯ ಪ್ರಸ್ತಾಪಗೊಂಡ ನಂತರ ನಗರಸಭೆ ಪೌರಾಯುಕ್ತ ಮತ್ತು ಸದಸ್ಯರ ನಡುವೆ ಮಾತಿನ ಚಕಮಕಿ ಜೋರಾಗಿ ನಡೆಯಿತು. ಏಕ ನಿವೇಶನಕ್ಕೆ ಕನಿಷ್ಠ ₹160 ಏರಿಕೆ ಮಾಡಬೇಕೆಂದು ಪೌರಾಯುಕ್ತರು ಒತ್ತಾಯಿಸಿದಾಗ ಸದಸ್ಯ ಸುನೀಲ ಶಿಂಧೆ ಜನರಿಗೆ ಹೊರೆಯಾಗಲಿದ್ದು, ಈಗಿರುವ ₹25 ಬದಲಾಗಿ ₹50ಕ್ಕೆ ಹೆಚ್ಚಿಸಬೇಕೆಂದು ಪಟ್ಟು ಹಿಡಿದರು. ನಂತರ ಪೌರಾಯುಕ್ತರು ಏಕನಿವೇಶನ ₹160 ಗಳಿಗೆ ಮಾಡಬೇಕಾಗುತ್ತದೆ. ಏಕೆಂದರೆ ನಾವು ಎಲ್ಲ ರೀತಿ ಸೌಲಭ್ಯ ನೀಡಬೇಕಾಗುತ್ತದೆ ಎಂಬುವುದನ್ನು ಸದಸ್ಯರು ಗಮನಿಸಬೇಕೆಂದು ಹೇಳಿದಾಗ ಮತ್ತೆ ಗದ್ದಲದ ವಾತಾವರಣ ನಿರ್ಮಾಣಗೊಂಡಿತು.
ವೇದಿಕೆಯಲ್ಲಿ ನಗರಸಭೆ ಅಧ್ಯಕ್ಷ ಪರಮಾನಂದ ಗವರೋಜಿ, ಶಾಸಕ ಜಗದೀಶ ಗುಡಗುಂಟಿ, ಉಪಾಧ್ಯಕ್ಷ ರೇಖಾ ಕಾಂಬಳೆ, ಪೌರಾಯುಕ್ತ ಜ್ಯೋತಗಿರೀಶ ಸಹಿತ ನಗರಸಭೆ ಸದಸ್ಯರು ಇದ್ದರು.------
ಕೋಟ್ನಾನೇನು ಕಳ್ಳತನ ಮಾಡಿ ಹುದ್ದೆಗೆ ಬಂದಿಲ್ಲ
ನಾನೇನು ಕಳ್ಳತನ ಮಾಡಿ ಪೌರಾಯುಕ್ತ ಹುದ್ದೆಗೆ ಬಂದಿಲ್ಲ. ಯಾವುದೇ ರೀತಿಯ ಬಿರುಸಿನ ಮಾತುಗಳು ಬೇಡ. ಹೆಚ್ಚುವರಿಯಾಗಿ ಖರ್ಚು ಮಾಡಲು ನಗರಸಭೆ ಉತ್ತಮ ಸ್ಥಿತಿಯಲ್ಲಿಲ್ಲ. ನನಗೆ ಯಾವುದೇ ರೀತಿ ಪವರ್ ಇಲ್ಲ. ಚುನಾಯಿತ ನಗರಸಭೆ ಸದಸ್ಯರಿಗೆ ಪವರ್ ಇದೆ.-ಜ್ಯೋತಿ ಗಿರೀಶ, ಪೌರಾಯುಕ್ತರು ಜಮಖಂಡಿ.
---ಬೇಡ ಎಂದರೇ ಬರೋದಿಲ್ಲ
ಸಭೆಗೆ ಬಾ ಎಂದರೇ ಬರತೀವಿ, ಬೇಡ ಎಂದರೇ ಬರೋದಿಲ್ಲ. ಕಳೆದ 15 ತಿಂಗಳಿನಿಂದ ನಿಮ್ಮ ವರ್ತನೆಗಳು ಸಾಕಷ್ಟು ನೋವು ತಂದಿವೆ. ಅಭಿವೃದ್ಧಿಗೆ ಅವಕಾಶ ನೀಡುತ್ತಿಲ್ಲ. ಕಳೆದ 15 ತಿಂಗಳಿನಿಂದ ನಗರಸಭೆ ಜಮಾ-ಖರ್ಚು ಮಾಹಿತಿ ಸದಸ್ಯರಿಗೆ ನೀಡಿಲ್ಲ-ಮಲ್ಲವ್ವ ಪಾಯಗೊಂಡ, ಸದಸ್ಯರು ಜಮಖಂಡಿ.
---ಅಭಿವೃದ್ದಿಯಲ್ಲಿ ರಾಜಕೀಯ ಬೇಡ
ಮತಕ್ಷೇತ್ರದ ಅಭಿವೃದ್ಧಿ ಪಡಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಚುನಾವಣೆ ಸಂದರ್ಭದಕಲ್ಲಿ ಪಕ್ಷದ ಭರಾಟೆ ನಡೆಯಲಿ. ಚುನಾಯಿತಗೊಂಡು ಅಧಿಕಾರಿ ಲಭಿಸಿದಾಗ ಯಾವುದೇ ರಾಜಕೀಯ ಮಾಡುವುದು ಬೇಡ. ನಗರ ಮತ್ತು ಗ್ರಾಮೀಣಪ್ರದೇಶದ ಅಭಿವೃದ್ಧಿಗಾಗಿ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಪಕ್ಷ ಭೇದ ಮರೆತು ಶ್ರಮಿಸೋಣ. ಪ್ರತಿಯೊಬ್ಬರಿಗೂ ಸರಕಾರದ ಸೌಲಭ್ಯಗಳನ್ನು ತಲುಪಿಸುವುದು ನಮ್ಮ ಕರ್ತವ್ಯವಾಗಬೇಕು. ಪಕ್ಷಾತೀತವಾಗಿ ಸಹಕಾರ ನೀಡಿದರೇ ನಗರದ ಅಭಿವೃದ್ಧಿಗಾಗಿ ಅನುದಾನ ತರಲು ಸಿದ್ಧನಿದ್ದೇನೆ.-ಜಗದೀಶ ಗುಡಗುಂಟಿ, ಶಾಸಕರು ಜಮಖಂಡಿ.
----