ಮಾದಿಗ ಸಮುದಾಯವನ್ನು ವ್ಯವಸ್ಥಿತವಾಗಿ ಆರ್ಥಿಕ, ಶೈಕ್ಷಣಿಕ ಹಾಗೂ ಸಾಮಾಜಿಕವಾಗಿ ಮುಂಚೂಣಿಗೆ ತರುವ ನಿಟ್ಟಿನಲ್ಲಿ ನಮ್ಮ ಸಮುದಾಯದ ರಾಜ್ಯ ನಾಯಕರಾದ ಕೆ. ಎಚ್. ಮುನಿಯಪ್ಪ, ನಾರಾಯಣಸ್ವಾಮಿ, ಆಂಜನೇಯ, ಗೋವಿಂದ ಕಾರಜೋಳ ಸೇರಿದಂತೆ ಸಮುದಾಯದ ಎಲ್ಲ ಮುಖಂಡರು ಪಕ್ಷಾತೀತವಾಗಿ ಒಗ್ಗಟ್ಟಿನಿಂದ ಸೇರಿ ಕರ್ನಾಟಕ ಮಾದರ ಮಹಾಸಭಾವನ್ನು ಪ್ರಾರಂಭ ಮಾಡಿ, ಸಮುದಾಯವನ್ನು ಕಟ್ಟುವ ಕೆಲಸಕ್ಕೆ ಮುಂದಾಗಿದ್ದು, ಸಮುದಾಯದ ಬಂಧುಗಳು ಒಕ್ಕೊರಲಿನಿಂದ ಸದಸ್ಯತ್ವ ತೆಗೆದುಕೊಳ್ಳುವ ಮೂಲಕ ಸಂಘವನ್ನು ಸದೃಢವನ್ನಾಗಿ ಮಾಡೋಣ ಎಂದು ಸಭೆಗೆ ಮನವಿ ಮಾಡಿದರು.
ಕನ್ನಡಪ್ರಭ ವಾರ್ತೆ ಹಾಸನ
ಕರ್ನಾಟಕ ಮಾದರ ಮಹಾಸಭಾ ಸಂಘಕ್ಕೆ ನೂತನವಾಗಿ ಸದಸ್ಯತ್ವ ನೋಂದಣಿ ಹಾಗೂ ತಾಲೂಕು-ಜಿಲ್ಲಾ ಘಟಕಗಳ ರಚನೆ ಸಮುದಾಯದ ಸರ್ವರ ಸಭೆಯಲ್ಲಿ ಯಶಸ್ವಿಯಾಗಿ ರಾಜ್ಯ ಸಮಿತಿ ಸದಸ್ಯರು ಹಾಗೂ ಜಿಲ್ಲಾ ಉಸ್ತುವಾರಿ ಎಂ. ಆರ್. ವೆಂಕಟೇಶ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ನಗರದ ಸ್ವಾಭಿಮಾನಿ ಭವನದಲ್ಲಿ ಆಯೋಜಿಸಿದ್ದ ಸದಸ್ಯತ್ವ ನೋಂದಣಿ ಹಾಗೂ ಸಮಿತಿ ರಚನೆ ಸಭೆಯಲ್ಲಿ ಮಾದರ ಮಹಾಸಭಾದ ರಾಜ್ಯ ಸಮಿತಿ ಸದಸ್ಯರು ಹಾಗೂ ಹಾಸನ ಜಿಲ್ಲಾ ಉಸ್ತುವಾರಿಗಳಾದ ಎಂ. ಆರ್. ವೆಂಕಟೇಶ್ ಅವರು ಮಾತನಾಡಿ, ಇಡೀ ರಾಜ್ಯದಲ್ಲಿ ಹೋರಾಟದಲ್ಲಿ ಮುಂಚೂಣಿಯಲ್ಲಿರುವುದು ಮಾದಿಗ ಸಮುದಾಯ. ಆ ನಿಟ್ಟಿನಲ್ಲಿ ಮಾದಿಗ ಸಮುದಾಯವನ್ನು ವ್ಯವಸ್ಥಿತವಾಗಿ ಆರ್ಥಿಕ, ಶೈಕ್ಷಣಿಕ ಹಾಗೂ ಸಾಮಾಜಿಕವಾಗಿ ಮುಂಚೂಣಿಗೆ ತರುವ ನಿಟ್ಟಿನಲ್ಲಿ ನಮ್ಮ ಸಮುದಾಯದ ರಾಜ್ಯ ನಾಯಕರಾದ ಕೆ. ಎಚ್. ಮುನಿಯಪ್ಪ, ನಾರಾಯಣಸ್ವಾಮಿ, ಆಂಜನೇಯ, ಗೋವಿಂದ ಕಾರಜೋಳ ಸೇರಿದಂತೆ ಸಮುದಾಯದ ಎಲ್ಲ ಮುಖಂಡರು ಪಕ್ಷಾತೀತವಾಗಿ ಒಗ್ಗಟ್ಟಿನಿಂದ ಸೇರಿ ಕರ್ನಾಟಕ ಮಾದರ ಮಹಾಸಭಾವನ್ನು ಪ್ರಾರಂಭ ಮಾಡಿ, ಸಮುದಾಯವನ್ನು ಕಟ್ಟುವ ಕೆಲಸಕ್ಕೆ ಮುಂದಾಗಿದ್ದು, ಸಮುದಾಯದ ಬಂಧುಗಳು ಒಕ್ಕೊರಲಿನಿಂದ ಸದಸ್ಯತ್ವ ತೆಗೆದುಕೊಳ್ಳುವ ಮೂಲಕ ಸಂಘವನ್ನು ಸದೃಢವನ್ನಾಗಿ ಮಾಡೋಣ ಎಂದು ಸಭೆಗೆ ಮನವಿ ಮಾಡಿದರು. ಅಷ್ಟೇ ಅಲ್ಲದೆ ಸದಸ್ಯತ್ವ ನೋಂದಣಿಗೆ ಸಂಪೂರ್ಣ ಆನ್‌ಲೈನ್ ಮೂಲಕ ಮಾಡಲು ಅವಕಾಶ ಮಾಡಿಕೊಟ್ಟಿದ್ದು, ಆನ್ಲೈನ್ ಮೂಲಕವೇ ಸದಸ್ಯತ್ವ ಮಾಡಿಕೊಳ್ಳಬೇಕು, ಬೇರೆಯಾರಿಗೂ ಹಣ ನೀಡಿ ಮೋಸ ಹೋಗಬಾರದು, ಆನ್‌ಲೈನ್‌ನಲ್ಲಿ ನೋಂದಣಿಯಾಗಿ ಹಣ ಪಾವತಿ ಮಾಡಿದ ತಕ್ಷಣವೇ ಐಡಿ ಕಾರ್ಡ್ ಕೂಡ ಬರಲಿದ್ದು ಅಲ್ಲಿಯೇ ಡೌನ್ಲೋಡ್ ಮಾಡಿಕೊಳ್ಳಬೇಕು ಎಂದರು. ಇದೇ ವೇಳೆ ಸಭೆಯಲ್ಲಿ ಹಾಜರಿದ್ದ ವರಿಂದ ಸೂಕ್ತ ಸಲಹೆ ಸೂಚನೆ ಪಡೆಯಲಾಯಿತು. ಹಾಗೂ ತಾಲೂಕು-ಜಿಲ್ಲಾಮಟ್ಟಕ್ಕೆ ಪದಾಧಿಕಾರಿಗಳನ್ನು ಆಯ್ಕೆ ಮಾಡಿಕೊಂಡು ನೋಂದಣಿ ಅಭಿಯಾನವನ್ನು ರಾಜ್ಯ ಸಮಿತಿ ಸೂಚಿಸಿದಂತೆ ಪ್ರಾರಂಭ ಮಾಡಲಾಗಿ 500ಕ್ಕೂ ಸದಸ್ಯರು ಸಭೆಯಲ್ಲಿಯೇ ನೋಂದಣಿ ಮಾಡಿಕೊಂಡರು.ಈ ವೇಳೆ ಮಾದರ ಮಹಾಸಭಾ ದ ಜಿಲ್ಲಾಧ್ಯಕ್ಷ ವಿಜಯ್ ಕುಮಾರ್ ಮಾತನಾಡಿ, ಜಿಲ್ಲಾ-ತಾಲೂಕು ಮಟ್ಟದ ಸಮಿತಿ ರಚನೆಯಾಗಿದ್ದು, ಒಂದು ವಿಧಾನಸಭಾ ಕ್ಷೇತ್ರದಲ್ಲಿ ತಲಾ 2 ಸಾವಿರದಂತೆ ನೋಂದಣಿ ಮಾಡಿಸುವ ಸಂಬಂಧ ಮಾದಿಗ ಸಮುದಾಯದ ಒಂದು ಕುಟುಂಬಕ್ಕೆ ಒಬ್ಬರಂತೆ 500 ರೂ. ನೀಡಿ ಸದಸ್ಯತ್ವ ನೋಂದಣಿ ಮಾಡಿಕೊಳ್ಳುವಂತೆ ಮನವಿ ಮಾಡಿದ ಅವರು, ಮಾದಾರ ಮಹಾಸಭಾವು ಅನೇಕ ಧೈಯೋದ್ದೇಶ ಹೊಂದಿದ್ದು, ಸಮುದಾಯದ ಪರವಾಗಿ ಅದರಲ್ಲೂ ವಿದ್ಯಾರ್ಥಿಗಳ ಕಲ್ಯಾಣಕ್ಕೆ ಮುಖ್ಯವಾಗಿ ಶ್ರಮಿಸಲಿದ್ದು, ಯುವ ಪೀಳಿಗೆಯನ್ನು ಆರ್ಥಿಕವಾಗಿ ಸಭಲರನ್ನಾಗಿ ಮಾಡಿ, ಸದೃಡ ಸಮಾಜವನ್ನು ಕಟ್ಟುವ ಕೆಲಸವನ್ನು ಜಿಲ್ಲೆಯಲ್ಲಿ ರಾಜ್ಯ ನಾಯಕರ ನಿರ್ದೇಶನದಂತೆ ಮಾಡಬೇಕು ಎಂದರು.ಇನ್ನು ಮಾದರ ಮಹಾಸಭಾ ಪಾರದರ್ಶಕವಾಗಿ ಕೆಲಸ ಮಾಡಲಿದ್ದು, ಸಂಘದ ಆರ್ಥಿಕ ಕಾರ್ಯಗಳು ಸೇರಿದಂತೆ ಎಲ್ಲ ಕಾರ್ಯಗಳು ಆನ್ಲೈನ್ ನಲ್ಲಿ ವೆಬ್ ಸೈಟ್ ನಲ್ಲಿ ಲಭ್ಯವಿದ್ದು, ಸರ್ವರು ವೀಕ್ಷಣೆ ಮಾಡಬಹುದು ಹಾಗೂ ಏನಾದರೂ ಗೊಂದಲಗಳಿದ್ದರೆ ಅಥವಾ ಆಕ್ಷೇಪಣೆಗಳಿದ್ದರೆ ನೇರವಾಗಿ ಸಂಪರ್ಕಿಸಿ ಪರಿಹರಿಸ ಕೊಳ್ಳಬಹುದು ಎಂದ ಅವರು ವಿದ್ಯಾರ್ಥಿಗಳು, ಯುವ ಮಿತ್ರರು ಸಂಘಟನೆಯ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಮನವಿ ಮಾಡಿದರು. ಈ ವೇಳೆ ತಾಲೂಕು ಪಂಚಾಯ್ತಿ ಮಾಜಿ ಅಧ್ಯಕ್ಷ ಮಂಜುನಾಥ್, ದೇವರಾಜ್, ಆಲೂರು ಹೇಮಂತ್, ಕೆಡಿಎಸ್ಎಸ್ ಜಿಲ್ಲಾ ಸಂಚಾಲಕರು ವಿರೂಪಾಕ್ಷಿಪುರ ಪ್ರಕಾಶ್, ಸಫಾಯಿ ಕರ್ಮಾಚಾರ ಆಯೋಗದ ಜಿಲ್ಲಾ ಉಸ್ತುವಾರಿ ಶ್ರೀನಿವಾಸ್ ಚನ್ನರಾಯಪಟ್ಟಣ, ಬೈರೇಶ್, ಕುಮಾರಸ್ವಾಮಿ ದೊಡ್ಡಪುರ, ಮಹಿಳಾ ಮುಖಂಡೆ ವಸಂತಮ್ಮ, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಶೇಖರಪ್ಪ ಬೇಲೂರು, ಸಾಕ್ಷರತಃ ರಂಗಸ್ವಾಮಿ, ಜೇನುಕಲ್ ಉಂಡಿಗನಾಳು, ವೀರಭದ್ರಪ್ಪ, ಗೋಪಿ ಹೊಸೂರು, ಪ್ರದೀಪ್ ಅರಕೆರೆ, ರಂಗಸ್ವಾಮಿ, ಧನಂಜಯ ಕರಗುಂದ, ಕಲಾವಿದ ಮಹೇಶ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು, ಮುಖಂಡ ಬೈರೇಶ್ ಸ್ವಾಗತಿಸಿದರು.