ನರಸಿಂಹರಾಜಪುರನಮ್ಮ ಪೂರ್ವಜರ ಕೃಷಿ ಪದ್ದತಿ ಹಾಗೂ ಅವರ ಅನುಭವವನ್ನು ಪಡೆದುಕೊಂಡು ಕೃಷಿಗೆ ಆಧುನಿಕ ಸ್ಪರ್ಶ ನೀಡಬೇಕಾಗಿದೆ ಎಂದು ಶಿವಮೊಗ್ಗ ಭದ್ರಾ ಕಾಡಾ ನಿಗಮದ ಅಧ್ಯಕ್ಷ ಡಾ.ಕೆ.ಪಿ.ಅಂಶುಮಂತ್ ಕರೆ ನೀಡಿದರು.
- ಕೃಷಿ ಇಲಾಖೆಯ ಆವರಣದಲ್ಲಿ ರಾಷ್ಟ್ರೀಯ ರೈತ ದಿನಾಚರಣೆ ಉದ್ಘಾಟನೆ । ಸನ್ಮಾನ ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರನಮ್ಮ ಪೂರ್ವಜರ ಕೃಷಿ ಪದ್ದತಿ ಹಾಗೂ ಅವರ ಅನುಭವವನ್ನು ಪಡೆದುಕೊಂಡು ಕೃಷಿಗೆ ಆಧುನಿಕ ಸ್ಪರ್ಶ ನೀಡಬೇಕಾಗಿದೆ ಎಂದು ಶಿವಮೊಗ್ಗ ಭದ್ರಾ ಕಾಡಾ ನಿಗಮದ ಅಧ್ಯಕ್ಷ ಡಾ.ಕೆ.ಪಿ.ಅಂಶುಮಂತ್ ಕರೆ ನೀಡಿದರು.
ಬುಧವಾರ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯಲ್ಲಿ ತಾಲೂಕು ಕೃಷಿ ಸಮಾಜ ಹಾಗೂ ಕೃಷಿ ಇಲಾಖೆ ಸಂಯುಕ್ತ ಆಶ್ರಯದಲ್ಲಿ ನಡೆದ ರಾಷ್ಟ್ರೀಯ ರೈತ ದಿನಾಚರಣೆ ಉದ್ಘಾಟಿಸಿ ಮಾತನಾಡಿ ರೈತರು ಸ್ವಾಭಿಮಾನಿಗಳಾಗಿದ್ದು ರೈತರಿಗೆ ಗೌರವ ನೀಡಬೇಕಾಗಿದೆ. ಕೊರೋನ ಬಂದ ಸಂದರ್ಭದಲ್ಲೂ ರೈತರು ಕೃಷಿ ಕಾರ್ಯ ಮುಂದುವರಿಸಿದ್ದರು. ರೈತರು ನಾವು ಕೃಷಿಕರು ಎಂದು ಹೆಮ್ಮೆಯಿಂದಲೇ ಹೇಳಿಕೊಳ್ಳಬೇಕು. ಕೈಗಾರಿಕೆಯಂತೆ ರೈತರು ಸಹ ಉದ್ಯೋಗ ಸೃಷ್ಠಿ ಮಾಡಿದ್ದಾರೆ. ರೈತರು ಹಾಗೂ ಕೂಲಿ ಕಾರ್ಮಿಕರು ಒಂದೇ ಕುಟುಂಬದವರಂತೆ ಕೆಲಸ ಮಾಡುತ್ತಾರೆ. ಆದರೆ, ರೈತರು ಪ್ರಕೃತಿ ಮೇಲೆ ಅವಲಂಭಿತರಾಗಿದ್ದು ಕೆಲವು ಬಾರಿ ಸಂಕಷ್ಟಕ್ಕೆ ಸಿಲುಕಿಕೊಳ್ಳುತ್ತಾರೆ ಎಂದರು.ಪ್ರತಿ ರೈತರು ಮಣ್ಣು ಪರೀಕ್ಷೆ ಮಾಡಿಸಬೇಕು. ಸರ್ಕಾರ ರೈತರಿಗೆ ಹಲವಾರು ಕಾರ್ಯಕ್ರಮ ರೂಪಿಸಿದೆ. ಅದನ್ನು ಉಪಯೋಗಿಸಬೇಕು. ತಂತ್ರಜ್ಞಾನ ಬೆಳೆದಿದ್ದು ರೈತರು ಸಹ ಆಧುನಿಕ ಯಂತ್ರಗಳನ್ನು ಬಳಸಬೇಕು. ಚಿಕ್ಕಮಗಳೂರು ಜಿಲ್ಲೆಗೆ ಪ್ರತ್ಯೇಕ ಹಾಲಿನ ಡೈರಿ ಅಗತ್ಯವಿದೆ.ಇದಕ್ಕಾಗಿ ಎಲ್ಲರೂ ಒಗ್ಗಟ್ಟಾಗಿ ಸರ್ಕಾರಕ್ಕೆ ಒತ್ತಡ ತರಬೇಕಾಗಿದೆ. ಸರ್ಕಾರಿ ಕಚೇರಿಗಳಿಗೆ ರೈತರು ಬಂದಾಗ ಅಧಿಕಾರಿಗಳು ಗೌರವ ನೀಡಬೇಕು ಎಂದು ಕಿವಿ ಮಾತು ಹೇಳಿದರು.
ಮುಖ್ಯ ಅತಿಥಿಯಾಗಿದ್ದ ಜಿಲ್ಲಾ ಕೃಷಿಕ ಸಮಾಜದ ಪ್ರಧಾನ ಕಾರ್ಯದರ್ಶಿ ಪಿ.ಕೆ.ಬಸವರಾಜಪ್ಪ ಭಾಷಣ ಮಾಡಿ, ಬಳಕೆ ದಾರರು, ಅಧಿಕಾರಿಗಳು, ರಾಜಕಾರಣಿಗಳು ಸೇರಿ ರೈತರ ಶೋಷಣೆ ಮಾಡುತ್ತಿದ್ದಾರೆ. ರೈತರು ಬೆಳೆದ ಬೆಳೆಗೆ ಬೆಲೆ ಇಲ್ಲ. ಅಡಕೆಗೆ ಎಲೆ ಚುಕ್ಕಿ ರೋಗ ಬಂದಿದೆ. ರೈತರು ಬೆಳೆ ವಿಮೆ ಕಟ್ಟಿದ್ದಾರೆ. ಅತಿಯಾದ ಮಳೆ ಬಂದು ಬೆಳೆ ನಾಶವಾದರೂ ಇನ್ನೂ ಪರಿಹಾರ ಸಿಕ್ಕಿಲ್ಲ. ಕಾಡಾನೆಗಳ ಕಾಟದಿಂದ ಬೆಳೆ ಹಾನಿಯಾಗಿದೆ. ದೇಶದಲ್ಲಿ ಶೇ. 70 ರಷ್ಟು ರೈತರಿದ್ದೇವೆ. ಆದರೆ, ರೈತರಲ್ಲಿ ಸಂಘಟನೆ ಇಲ್ಲದೆ ಸಮಸ್ಯೆಯಾಗಿದೆ ಎಂದರು.ಸಹಾಯಕ ಕೃಷಿ ನಿರ್ದೇಶಕ ಎಸ್.ಬಿ.ಮಹೇಶ್ ಮಾತನಾಡಿ, ಚೌದರಿ ಚರಣಸಿಂಗ್ ಪ್ರಧಾನಿಯಾಗಿದ್ದಾಗ ರೈತರ ಪರವಾಗಿ ಚಿಂತನೆ ಮಾಡಿ ಹಲವಾರು ಕಾರ್ಯಕ್ರಮ ರೂಪಿಸಿದ್ದರು. 2001 ರಿಂದ ಚರಣ ಸಿಂಗ್ ಜನ್ಮ ದಿನವನ್ನು ರಾಷ್ಟ್ರೀಯ ಕಿಸಾನ್ ದಿನ ಎಂದು ಘೋಷಿಸಲಾಯಿತು. ಅವರು ಕೃಷಿ ಕೇಂದ್ರೀಕೃತ ಚಿಂತನೆ, ಆಳವಾದ ಅಧ್ಯಯನ ಮಾಡುತ್ತಿದ್ದರು. ಸಣ್ಣ ರೈತತರ ಧ್ವನಿಯಾಗಿ ಕೆಲಸ ಮಾಡಿದ್ದರು. ರೈತರಿಗೆ ಬೆಂಬಲ ಬೆಲೆ ನೀಡಲು ಚರಣ್ ಸಿಂಗ್ ಅವರೇ ಕಾರಣ. ಅವರನ್ನು ಛಾಂಪಿಯನ್ ಪಾರ್ಮರ್ಸ್ ಎಂದು ಕರೆಯುತ್ತೇವೆ ಎಂದರು.
ಸಾಂಬಾರು ಮಂಡಳಿಯ ನಿವೃತ್ತ ಅಧಿಕಾರಿ ಶ್ರೀನಿವಾಸ್ ಉಪನ್ಯಾಸ ನೀಡಿ, ಪ್ರತಿಯೊಬ್ಬ ರೈತರು ಮಿಶ್ರ ಬೆಳೆ ಬೆಳೆಯ ಬೇಕು. ಅಡಕೆ ತೋಟದ ಮದ್ಯೆ ಮಿಶ್ರ ಬೆಳೆಯಾಗಿ ಜಾಯಿ ಕಾಯಿ, ಏಲಕ್ಕಿ, ಕಾಳುಮೆಣಸು, ವೆನಿಲಾ, ಕೋಕೋ ಬೆಳೆಯ ಬಹುದು. ಒಂದು ಬೆಳೆ ಧಾರಣೆ ಕುಸಿತವಾದಾಗ ಮತ್ತೊಂದು ಬೆಳೆಯಿಂದ ರೈತರಿಗೆ ಆದಾಯ ಸಿಗುತ್ತದೆ ಎಂದರು.ಸಭೆಯ ಅಧ್ಯಕ್ಷತೆಯನ್ನು ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಬಿ.ಕೆ.ನಾರಾಯಣಸ್ವಾಮಿ ವಹಿಸಿದ್ದರು. ಸಭೆಯಲ್ಲಿ ತಾಲೂಕು ಕೃಷಿಕ ಸಮಾಜದ ಉಪಾಧ್ಯಕ್ಷ ಬಿ.ಜಿ.ಮಂಜಪ್ಪ ಗೌಡ, ಕೃಷಿಕ ಸಮಾಜದ ಪೂರ್ವಾಧ್ಯಕ್ಷ ಬಿ.ಕೆ.ಜಾನಕೀರಾಂ, ರೈತ ಸಂಘದ ಜಿಲ್ಲಾಧ್ಯಕ್ಷ ಮಾಳೂರು ದಿಣ್ಣೆ ವಿನಾಯಕ, ಕೃಷಿಕ ಸಮಾಜದ ಕಾರ್ಯದರ್ಶಿ ಎಚ್.ಕೆ. ನವೀನ್ , ಖಜಾಂಚಿ ಚೇತನ್,ತಹಶೀಲ್ದಾರ್ ಡಾ.ನೂರಲ್ ಹುದಾ, ತಾಲೂಕು ಕೃಷಿಕ ಸಮಾಜದ ನಿರ್ದೇಶಕರಾದ ಎನ್.ಪಿ.ರಮೇಶ್, ನಾಗರಾಜ್, ಸುಪ್ರೀತ್,ವೈ.ಎಸ್.ರವಿ, ತಿಮ್ಮಣ್ಣ, ಎಚ್.ಎನ್.ರವಿಶಂಕರ್ ಇದ್ದರು.
-- ಬಾಕ್ಸ್ ---ಹಿರಿಯ ಕೃಷಿಕರಿಗೆ ಸನ್ಮಾನ
ಇದೇ ಸಂದರ್ಭದಲ್ಲಿ ಹಿರಿಯ ಕೃಷಿಕರಾದ ಬಿ.ಕೆ.ಜಾನಕೀರಾಂ, ವಿನಾಯಕ ಮಾಳೂರು ದಿಣ್ಣೆ ಅವರನ್ನು ಸನ್ಮಾನಿಸಲಾಯಿತು. 2023-24 ನೇ ಸಾಲಿನಲ್ಲಿ ಭತ್ತದ ಬೆಳೆಯಲ್ಲಿ ಕೃಷಿ ಪ್ರಶಸ್ತಿ ಪಡೆದವರನ್ನು ಗೌರವಿಸಲಾಯಿತು.ಜಿಲ್ಲಾ ಮಟ್ಟದ ಮಹಿಳಾ ವಿಭಾಗದಲ್ಲಿ ರತ್ನಮ್ಮ(ಪ್ರಥಮ), ಅನುಸೂಯ (ತೃತೀಯ), ಜಿಲ್ಲಾ ಮಟ್ಟದ ಪುರುಷ ವಿಭಾಗದಲ್ಲಿ ಕೆ.ವಿ.ಉಮೇಶ (ಪ್ರಥಮ), ಅರವಿಂದ (ದ್ವಿತೀಯ), ರೇವಣಪ್ಪ (ತೃತೀಯ) ಅವರನ್ನು ಸನ್ಮಾನಿಸಲಾಯಿತು.
ತಾಲೂಕು ಮಟ್ಟದಲ್ಲಿ ಮಹಿಳಾ ವಿಭಾಗದಲ್ಲಿ ವೆಂಕಮ್ಮ (ಪ್ರಥಮ) , ಸುಂದರಮ್ಮ (ದ್ವಿತೀಯ), ಕೊಲ್ಲಮ್ಮ(ತೃತೀಯ) ಅವರನ್ನು ಗೌರವಿಸಲಾಯಿತು. ಪುರುಷ ವಿಭಾಗದಲ್ಲಿ ಕುಮಾರೇಗೌಡ (ಪ್ರಥಮ), ಜಿ.ಆರ್.ಮಂಜುನಾಥ (ದ್ವಿತೀಯ), ರತ್ನಾಕರ (ತೃತೀಯ) ಅವರನ್ನು ಗೌರವಿಸಲಾಯಿತು.