ನಿಮ್ಮ ಕಾರ್ಯಕರ್ತರು ಕೂಡ ಕೆರಳಿ ಗಲಾಟೆಯಾದರೆ ಇದಕ್ಕೆ ಹೊಣೆ ಯಾರು? ಇದಕ್ಕಾಗಿಯೇ ದ್ವೇಷ ಭಾಷಣ ಕಾನೂನು ಜಾರಿಗೆ ತಂದಿದ್ದು, ಇನ್ನು ಮುಂದೆ ಆದರೂ ಕೂಡ ಆರೋಗ್ಯಕರ ಅಭಿವೃದ್ಧಿ ವಿಚಾರವಾಗಿ ಟೀಕೆ ಮಾಡಲಿ, ನಾನು ಸ್ವೀಕರಿಸುತ್ತೇನೆ.

ಕನ್ನಡಪ್ರಭ ವಾರ್ತೆ ಮಾಗಡಿ

ಮಾಜಿ ಶಾಸಕ ಎ.ಮಂಜುನಾಥ್ ರವರು ನನ್ನ ವಿರುದ್ಧ ಏಕವಚನ ಪದಬಳಕೆ ನಿಲ್ಲಸಲಿ, ಅವರ ಹೇಳಿಕೆಗೆ ಉತ್ತರಿಸುತ್ತೇನೆ ಎಂದು ಶಾಸಕ ಎಚ್.ಸಿ. ಬಾಲಕೃಷ್ಣ ಹೇಳಿದರು.

ಪಟ್ಟಣದ ತಾಲೂಕು ಕಚೇರಿ ಮುಂಭಾಗ ಸುದ್ದಿಗಾರರೊಂದಿಗೆ ಮಾತನಾಡಿ, ನನ್ನ ವಿರುದ್ಧ ಮಾಜಿ ಶಾಸಕ ಎ. ಮಂಜುನಾಥ್ ರವರು ಏಕವಚನದಲ್ಲಿ ವೈಯಕ್ತಿಕ ವಿಚಾರಗಳನ್ನು ಇಟ್ಟುಕೊಂಡು ಟೀಕೆ ಮಾಡಿದ್ದಾರೆ. ನಾನು ಗೋಮಾಳ ಜಮೀನನ್ನು ಕಬಳಿಕೆ ಮಾಡಿದ್ದೇನೆ ಎಂದು ಆರೋಪ ಮಾಡಿದ್ದಾರೆ. ಹೇಮಾವತಿ ವಿಚಾರವಾಗಿ ಚರ್ಚೆ ಮಾಡಲಿ, ಅವರ ಅವಧಿಯಲ್ಲಿ ಏನಾಗಿದೆ, ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿರವರು ಏನು ಅನುದಾನ ಕೊಟ್ಟಿದ್ದಾರೆ. ಬಿಜೆಪಿ ಸರ್ಕಾರದ ಸಾಧನೆ ಏನು ಎಂಬುದರ ಬಗ್ಗೆ ಆರೋಗ್ಯಕರ ಚರ್ಚೆ ಮಾಡಿದರೆ ನಾನು ಪ್ರತಿಕ್ರಿಯೆ ನೀಡುತ್ತೇನೆ. ಅದನ್ನು ಬಿಟ್ಟು ನನ್ನ ವೈಯಕ್ತಿಕ ವಿಚಾರ ಇಟ್ಟುಕೊಂಡು ಮಿಸ್ಟರ್ ಬಾಲಕೃಷ್ಣ.., ನೀನು.. ಎಂದು ಪದ ಬಳಕೆ ಮಾಡುವುದು ಸರಿಯಲ್ಲ. ಎರಡು ಬಾರಿ ಇದೇ ರೀತಿ ನನ್ನ ವಿರುದ್ಧ ಮಾತನಾಡಿದ್ದು ನಾನು ಪ್ರತಿಕ್ರಿಯೆ ನೀಡಲಿಲ್ಲ. ನನ್ನ ಕಾರ್ಯಕರ್ತರು ನೀವು ಸುಮ್ಮನೆ ಇರಿ, ನಾವು ಮಾತನಾಡುತ್ತೇವೆ ಎಂದು ಹೇಳಿದ ಮೇಲೆ ಅವರು ಪತ್ರಿಕಾಗೋಷ್ಠಿ ನಡೆಸಿ ಅವರು ಕೂಡ ಏಕವಚನದಲ್ಲಿ ಮಾತನಾಡಿದ್ದಾರೆ. ನೀವು ಮೊದಲು ಈ ರೀತಿ ಮಾಡಿದ್ದರಿಂದ ನಮ್ಮ ಕಾರ್ಯಕರ್ತರು ಕೆರಳಿ ಮಾತನಾಡಿದ್ದಾರೆ. ನಿಮ್ಮ ಕಾರ್ಯಕರ್ತರು ಕೂಡ ಕೆರಳಿ ಗಲಾಟೆಯಾದರೆ ಇದಕ್ಕೆ ಹೊಣೆ ಯಾರು? ಇದಕ್ಕಾಗಿಯೇ ದ್ವೇಷ ಭಾಷಣ ಕಾನೂನು ಜಾರಿಗೆ ತಂದಿದ್ದು, ಇನ್ನು ಮುಂದೆ ಆದರೂ ಕೂಡ ಆರೋಗ್ಯಕರ ಅಭಿವೃದ್ಧಿ ವಿಚಾರವಾಗಿ ಟೀಕೆ ಮಾಡಲಿ, ನಾನು ಸ್ವೀಕರಿಸುತ್ತೇನೆ ಎಂದು ಬಾಲಕೃಷ್ಣ ಸ್ಪಷ್ಟನೆ ನೀಡಿದರು.

ಎಫ್ಐಆರ್ ಹಿಂಪಡೆಯುತ್ತೇನೆ:

ಇತ್ತೀಚೆಗಷ್ಟೇ ತಾಲೂಕು ಆಡಳಿತ ವಿರುದ್ಧ ತಮಟೆ ಚಳವಳಿ ಮಾಡಿದ್ದ ಕೆಲವರ ವಿರುದ್ಧ ತಹಸೀಲ್ದಾರ್ ಅವರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ನಾನು ಪ್ರತಿಭಟನೆ ಮಾಡಿದ ಮುಖಂಡರನ್ನು ಕರೆಸಿ ಅಧಿಕಾರಿಗಳ ಜೊತೆ ಸಮಸ್ಯೆ ಕೇಳಿದಾಗ ಅಧಿಕಾರಿಗಳದ್ದೇ ತಪ್ಪು ಎಂಬುದು ಗೊತ್ತಾಗಿದೆ, ಈ ಬಗ್ಗೆ ಅಧಿಕಾರಿಗಳಿಗೆ ಎಚ್ಚರಿಕೆ ಕೊಡಲಾಗಿದ್ದು ಜಿಲ್ಲಾಧಿಕಾರಿಗಳ ಗಮನಕ್ಕೂ ತಂದಿದ್ದೇನೆ. ಕೆಲವರ ಮೇಲೆ ಠಾಣೆಯಲ್ಲಿ ಆಗಿರುವ ಎಫ್ಐಆರ್ ತೆಗಿಸುವ ಕೆಲಸ ಮಾಡಲಾಗುತ್ತದೆ ಎಂದು ಬಾಲಕೃಷ್ಣ ವಿವರಿಸಿದ್ದರು.

ಡಿಸೆಂಬರ್ 25ರಿಂದ ಡಿಸೆಂಬರ್ 28ರ ವರೆಗೆ ಕೆಂಪೇಗೌಡ ಉತ್ಸವ ಅದ್ಧೂರಿಯಾಗಿ ನಡೆಯುತ್ತಿದ್ದು, ಗುರುವಾರ ಬೆಳಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿಯವರಿಂದ ನೂತನ ಗಾಂಧಿ ಪ್ರತಿಮೆ ಉದ್ಘಾಟನೆ ಹಾಗೂ ವಿವಿಧ ಕಾರ್ಯಕ್ರಮಗಳು ಆಯೋಜಿಸಿದ್ದು ಮಾಗಡಿಯಲ್ಲಿ ಕೆಂಪೇಗೌಡ ಉತ್ಸವ ಅದ್ಧೂರಿಯಾಗಿ ನಡೆಯುತ್ತಿದೆ, ಎಲ್ಲರೂ ಭಾಗವಹಿಸಬೇಕು ಎಂದು ಬಾಲಕೃಷ್ಣ ಮನವಿ ಮಾಡಿದರು.