ಸಾರಾಂಶ
ಮಾಗಡಿ: ತಾಲೂಕಿನ ಚಿಕ್ಕಸೋಲೂರು ಕಾಡುಗೊಲ್ಲರ ಹಟ್ಟಿಯಲ್ಲಿ ಮೂರು ವರ್ಷಕ್ಕೊಮ್ಮೆ ಆಚರಿಸುವ ಸೊರೆಕುಂಟಮ್ಮ ದೇವಿ ಜಾತ್ರೆಯ ಅಂಗವಾಗಿ ಹಾಲಪ್ಪನ ಗುಡ್ಡೆಗೆ ಹಾಲು ಮೀಸಲು ಉತ್ಸವಕ್ಕೆ ಅಜ್ಜಪ್ಪಸ್ವಾಮಿ ದೇವರ ಪಟ್ಟದ ಪೂಜಾರಿ ಕೃಷ್ಣಪ್ಪ ಚಾಲನೆ ನೀಡಿದರು.
ಕಾಡುಗೊಲ್ಲರು ತಮ್ಮ ಕುಲದ ಸಾಂಸ್ಕೃತಿಕ ವೀರರನ್ನೇ ದೈವಗಳನ್ನಾಗಿ ಪೂಜಿಸಿಕೊಂಡು ಬರುವುದು ನಮ್ಮ ಸಂಪ್ರದಾಯವಾಗಿದೆ. ಸೋರೆ ಕುಂಟಮ್ಮದೇವಿಯ ಜಾತ್ರೆಗೆ ಮುನ್ನ ನಮ್ಮ ಪೂರ್ವಿಕರು ಆಚರಿಸಿಕೊಂಡು ಬಂದಿರುವ ಬುಡಕಟ್ಟು ಸಂಪ್ರದಾಯವನ್ನು ಮುಂದುವರೆಸಿಕೊಂಡು ಹೋಗುತ್ತಿದ್ದೇವೆ. ಕಾಲ್ನಡಿಗೆಯಲ್ಲಿ ಮೀಸಲು ಹಾಲಿನ ಗಡಿಕೆಗಳನ್ನು ತಲೆಯ ಮೇಲೆ ಹೊತ್ತುಕೊಂಡು ಕುಣಿಗಲ್ ತಾಲೂಕಿನ ಹಾಲಪ್ಪ, ದೈವದ ಗುಡ್ಡೆ ಹೋಗಿ ಮೀಸಲು ಹಾಲನ್ನು ಹಾಲಪ್ಪನ ಗುಡ್ಡೆಗೆ ಸುರಿದು ಭಕ್ತಿ ಸಮರ್ಪಿಸಿ, ನಾವು ಸಾಕಿರುವ ದನಕರು, ಕುರಿ, ಮೇಕೆ ಜಾನುವಾರುಗಳಿಗೆ ರೋಗರುಜಿನಗಳು ಬಾರದಂತೆ ರಕ್ಷಿಸು ಎಂದು ಪ್ರಾರ್ಥನೆ ಸಲ್ಲಿಸುತ್ತೇವೆ ಎಂದು ಹೇಳಿದರು.ಸಂಶೋಧಕ ಡಾ.ಕೆಂಚಪ್ಪ ಹಾಲು ಮೀಸಲು ಪಾದಯಾತ್ರೆಗೆ ಚಾಲನೆ ನೀಡಿ ಮಾತನಾಡಿ, ಕಾಡುಗೊಲ್ಲರು ಕರ್ನಾಟಕ ಮೂಲ ಬುಡಕಟ್ಟು ಸಮುದಾಯದವರು. ತಮ್ಮ ಸಾಂಸ್ಕೃತಿಕ ವೀರರಾದ ಚಿತ್ತಯ್ಯ, ಕಾಟಯ್ಯ, ಜುಂಜಪ್ಪ, ಚಿಕ್ಕಣ್ಣಸ್ವಾಮಿ, ಹಾಲಪ್ಪಸ್ವಾಮಿ, ಗೌರಸಂದ್ರದ ಮಾರಮ್ಮ, ಬರಮಗಿರಿ ಈರಣ್ಣ ಇತರೆ ಸಾಂಸ್ಕೃತಿಕ ವೀರರ ಹೆಸರಿನಲ್ಲಿ ಹಬ್ಬ, ಜಾತ್ರೆ, ಹಾಲು ಹೊಯ್ಯುವ ಹಬ್ಬ ಆಚರಿಸಿಕೊಂಡು ಬಂದಿದ್ದಾರೆ. ಚಿಕ್ಕಸೋಲೂರು ಕಾಡುಗೊಲ್ಲರ ಹಟ್ಟಿಯಲ್ಲಿ ಅನಾದಿಯಿಂದಲೂ ಸೋರೆ ಕುಂಟಮ್ಮದೇವಿ ಜಾತ್ರೆಗೆ ಮುನ್ನಾದಿನ ಹಟ್ಟಿಯನ್ನು ಶುದ್ದೀಕರಣಗೊಳಿಸಲು ಪಟ್ಟದ ಪೂಜಾರಿ ಗೋವು ಕಚ್ಚಿ, ಬೇವು ಕಚ್ಚಿ ಹಟ್ಟಿಗೆಯಲ್ಲ ಹಟ್ಟಿ ಎಳ್ನೀರು ಹೆಸರಿನಲ್ಲಿ ತೀರ್ಥ ಹಾಕುತ್ತಾರೆ ಎಂದರು. ಮಾರನೆ ದಿನ ಮುಂಜಾನೆ ಹಸುಗಳನ್ನು ಮೈತೊಳೆದು ಮೀಸಲು ಹಾಲು ಕರೆದು ಗಡಿಕೆಗೆ ಹಾಕಿ, ದೇವರ ಉತ್ಸವ ಮೂರ್ತಿ ಶೃಂಗರಿಸಿ ಪೂಜಿಸುತ್ತೇವೆ. ಮೀಸಲು ಹಾಲಿನ ಗಡಿಗೆಗಳನ್ನು ನೂರಾರು ಯುವಕರು ತಲೆ ಮೇಲೆ ಹೊತ್ತುಕೊಂಡು ಕಾಲ್ನಡಿಗೆಯಲ್ಲಿ ಹಾಲಪ್ಪನ ಗುಡ್ಡೆಗೆ ಪಾದಯಾತ್ರೆ ಹೋಗಿ ಹಾಲಪ್ಪನ ಗುಡ್ಡೆಯ ಮೇಲೆ ಹಾಲು ಹಾಕಿ ಅಭಿಷೇಕ ಮಾಡಿ ಪೂಜಿಸುತ್ತಿದ್ದಾರೆ. ಹಾಲಪ್ಪನ ಗುಡ್ಡೆಯ ಬಳಿಯಿಂದ ಮಾರನೇ ದಿನ ತೀರ್ಥದ ಕಾಯಿಯನ್ನು ಚಿಕ್ಕಸೋಲೂರು ಕಾಡುಗೊಲ್ಲರ ಹಟ್ಟಿಗೆ ತಂದು ಕುಲದೈವಗಳ ಹೆಸರಿನಲ್ಲಿ ಸುತ್ತಮುದ್ರಿಕೆ ಮಾಡೋಕೆ ಹಾಲು ಮೀಸಲು ಹಬ್ಬ ಆಚರಿಸುತ್ತಿದ್ದೇವೆ. ಬುಡಕಟ್ಟು ಸಂಪ್ರದಾಯದಲ್ಲಿ ಸುತ್ತಮುದ್ರಿಕೆ ಲೋಕಕಲ್ಯಾಣಾರ್ಥವಾಗಿ ನಡೆಸಿಕೊಂಡು ಬಂದಿರುವ ಜನಪದ ಆಚರಣೆಯಾಗಿದೆ ಎಂದರು.
ಈ ಸಂದರ್ಭದಲ್ಲಿ ಅಜ್ಜಪ್ಪಸ್ವಾಮಿ ದೈವದ ಪ್ರಧಾನ ಅರ್ಚಕ ಅಣ್ಣಯ್ಯಪ್ಪ, ಪೂಜಾರಿ ರವಿಕುಮಾರ, ಗೌಡ ದೊಡ್ಡಮಾಸಯ್ಯ, ಮುಖಂಡರಾದ ಮಾಸಯ್ಯ, ದೊಡ್ಡಯ್ಯ, ಕೃಷ್ಣಪ್ಪ, ತಮ್ಮಣ್ಣ, ಪಾಪಣ್ಣ, ಚಿಕ್ಕಣ್ಣಸ್ವಾಮಿ, ನಾಗರಾಜು ಹಾಗೂ ಗೊಲ್ಲರ ಹಟ್ಟಿಯ ನೂರಾರು ಯುವಕರು ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.ಪೋಟೊ 2ಮಾಗಡಿ1 : ಮಾಗಡಿ ತಾಲೂಕಿನ ಚಿಕ್ಕಸೋಲೂರು ಕಾಡುಗೊಲ್ಲರ ಹಟ್ಟಿಯಲ್ಲಿ ಹಾಲಪ್ಪನ ಗುಡ್ಡೆಗೆ ಹಾಲು ಮೀಸಲು ಉತ್ಸವ ಅದ್ಧೂರಿ ಚಾಲನೆ ನೀಡಲಾಯಿತು.