ಸಚಿವ ಸುಧಾಕರ್ ಸೂಚನೆ ನಂತರ ಡಿಸಿ ಓಬಣ್ಣನಹಳ್ಳಿಗೆ ಭೇಟಿ

| Published : Aug 22 2024, 12:50 AM IST

ಸಾರಾಂಶ

ಮಳೆಯಿಂದ ಹಾನಿಗೊಳಗಾದ ಚಿತ್ರದುರ್ಗ ತಾಲೂಕಿನ ಓಬಣ್ಣನಹಳ್ಳಿಗೆ ಬುಧವಾರ ಮಧ್ಯಾಹ್ನ ಜಿಲ್ಲಾಧಿಕಾರಿ ಟಿ. ವೆಂಕಟೇಶ್ ಭೇಟಿ ನೀಡಿ ಪರಿಶೀಲಿಸಿದರು. ಸೂಕ್ತ ಪರಿಹಾರ ಕಾರ್ಯಗಳನ್ನು ತ್ವರಿತವಾಗಿ ಕೈಗೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಕನ್ನಡಪ್ರಭವಾರ್ತೆ ಚಿತ್ರದುರ್ಗಮಳೆಯಿಂದ ಹಾನಿಗೊಳಗಾದ ಚಿತ್ರದುರ್ಗ ತಾಲೂಕಿನ ಓಬಣ್ಣನಹಳ್ಳಿಗೆ ಬುಧವಾರ ಮಧ್ಯಾಹ್ನ ಜಿಲ್ಲಾಧಿಕಾರಿ ಟಿ. ವೆಂಕಟೇಶ್ ಭೇಟಿ ನೀಡಿ ಪರಿಶೀಲಿಸಿದರು. ಸೂಕ್ತ ಪರಿಹಾರ ಕಾರ್ಯಗಳನ್ನು ತ್ವರಿತವಾಗಿ ಕೈಗೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು. ಓಬಣ್ಣನಹಳ್ಳಿ ಗ್ರಾಮಸ್ಥರು ಡಿಸಿ ಕಚೇರಿ ಬಳಿ ಪ್ರತಿಭಟನೆ ನಡೆಸಿದ ನಂತರ, ಜಿಲ್ಲಾ ಉಸ್ತುವಾರಿ ಸಚಿವ ಡಿ. ಸುಧಾಕರ್ ಸ್ಥಳಕ್ಕೆ ಭೇಟಿ ನೀಡುವಂತೆ ಸೂಚಿಸಿದ್ದರು. ಸೂಚನೆ ತರುವಾಯ ಮಳೆ ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡಿ ಸರ್ಕಾರ ನಿಮ್ಮೊಂದಿಗಿದೆ. ಎಲ್ಲ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಭರವಸೆ ನೀಡಿದರು.ಓಬಣ್ಣನಹಳ್ಳಿ ಗ್ರಾಮದಲ್ಲಿ ಕಳೆದೆರಡು ದಿನಗಳ ಹಿಂದೆ ಹೆಚ್ಚಿನ ಮಳೆ ಸುರಿದ ಪರಿಣಾಮ ಸುಮಾರು 41 ಮನೆಗಳಿಗೆ ನೀರು ನುಗ್ಗಿತ್ತು. ಗುಡ್ಡದ ಮೇಲಿನಿಂದ ಬರುವ ಸಣ್ಣ ನೈಸರ್ಗಿಕ ಹಳ್ಳ ತುಂಬಿ ಹರಿದ ಪರಿಣಾಮ ಅನಾಹುತ ಸೃಷ್ಠಿಸಿತ್ತು. ಮನೆಗಳಿಗೆ ನೀರು ನುಗ್ಗಿ ಮನೆಯ ಸಾಮಗ್ರಿಗಳು ಹಾನಿಗೀಡಾಗಿರುವುದನ್ನು ವೀಕ್ಷಿಸಿದ ಜಿಲ್ಲಾಧಿಕಾರಿ ಟಿ. ವೆಂಕಟೇಶ್ ಮಳೆ ನೀರು ಸರಾಗವಾಗಿ ಹರಿದು ಹೋಗಲು ಹಳ್ಳದಲ್ಲಿ ತುಂಬಿದ ಮಣ್ಣನ್ನು ಶೀಘ್ರ ತೆರವುಗೊಳಿಸಲು ಅಧಿಕಾರಿಗಳಿಗೆ ಸೂಚಿಸಿದರು.ಮಳೆಯಿಂದ ನೀರು ನುಗ್ಗಿ ಹಾನಿಗೆ ಒಳಗಾಗಿರುವ ಮನೆಗಳಿಗೂ ತೆರಳಿ ಮಾಹಿತಿ ಪಡೆದುಕೊಂಡರು. ಮಳೆಯಿಂದ ಹಲವರ ರೇಷನ್, ಮಕ್ಕಳ ಪುಸ್ತಕಗಳು, ಸಾಮಗ್ರಿಗಳು ಹಾನಿಯಾಗಿರುವ ಬಗ್ಗೆಯೂ ಮಾಹಿತಿ ಪಡೆದು, ಹಾನಿಗೊಳಗಾದವರಿಗೆ ನಿಯಮಾನುಸಾರ ಪರಿಹಾರ ದೊರಕಿಸುವುದಾಗಿ ಹೇಳಿದರು. ಮಳೆಯಿಂದ ಹಾನಿಗೊಳಗಾದ ಗ್ರಾಮಸ್ಥರ ಅನುಕೂಲಕ್ಕಾಗಿ ಆಹಾರ ಇಲಾಖೆಯಿಂದ ಪಡಿತರ ವಿತರಣೆ ಮಾಡಲು ಕ್ರಮ ವಹಿಸಲಾಗುವುದು ಎಂದರು.

ಹಾಗೆಯೇ ಚಳ್ಳಕೆರೆ ತಾಲೂಕಿನ ಮನಮೈನಹಟ್ಟಿ, ಪರಶುರಾಂಪುರ ರಸ್ತೆ, ಬಳ್ಳಾರಿ ರಸ್ತೆ ಹಾಗೂ ರಹೀಂನಗರದ ಮಳೆಹಾನಿ ಪ್ರದೇಶಗಳಿಗೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಚಳ್ಳಕೆರೆ ತಹಶೀಲ್ದಾರ್ ರೆಹಾನ್ ಪಾಷಾ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.