ಸಾರಾಂಶ
ಶಿರಸಿ: ಸಹಕಾರ ಸಂಘಗಳ ಕಾಯ್ದೆ ಮತ್ತು ನಿಯಮಾವಳಿಗೆ ವಿರುದ್ಧವಾಗಿ ಸ್ವಂತ ಲಾಭಕ್ಕೆ ಟಿಎಸ್‌ಎಸ್‌ನ ಹಣ ದುರ್ಬಳಕೆ ಮಾಡಿಕೊಂಡು ಹಿಂದಿನ ಪ್ರಧಾನ ವ್ಯವಸ್ಥಾಪಕ ಮತ್ತು ಹಿಂದಿನ ಕಾರ್ಯಾಧ್ಯಕ್ಷನ ವಿರುದ್ಧ ಹೊಸ ಮಾರುಕಟ್ಟೆ ಪೊಲೀಸ್ ಠಾಣೆಯಲ್ಲಿ ಮೇ ೧೬ರಂದು ಪ್ರಕರಣ ದಾಖಲಾಗಿದೆ.
ಟಿಎಸ್‌ಎಸ್‌ನ ಹಿಂದಿನ ಪ್ರಧಾನ ವ್ಯವಸ್ಥಾಪಕ ರವೀಶ ಅಚ್ಯುತ ಹೆಗಡೆ ಮತ್ತು ಹಿಂದಿನ ಕಾರ್ಯಾಧ್ಯಕ್ಷ ರಾಮಕೃಷ್ಣ ಶ್ರೀಪಾದ ಹೆಗಡೆ ವಿರುದ್ಧ ಹಣ ದುರ್ಬಳಕೆಯ ವಿರುದ್ಧ ಪ್ರಕರಣ ದಾಖಲಾಗಿದೆ.ಟಿಎಸ್‌ಎಸ್‌ನ ಹಿಂದಿನ ಪ್ರಧಾನ ವ್ಯವಸ್ಥಾಪಕ ರವೀಶ ಅಚ್ಯುತ ಹೆಗಡೆ ಮತ್ತು ಹಿಂದಿನ ಕಾರ್ಯಾಧ್ಯಕ್ಷ ರಾಮಕೃಷ್ಣ ಶ್ರೀಪಾದ ಹೆಗಡೆ ಶಾಮೀಲಾಗಿ ಮತ್ತು ಇವರ ನೇರ ಸಹಾಯ ಮತ್ತು ಸಹಕಾರದಿಂದ ಕರ್ನಾಟಕ ಸಹಕಾರ ಸಂಘಗಳ ಕಾಯ್ದೆ ಮತ್ತು ನಿಯಮಗಳು ಹಾಗೂ ಸಂಘದ ನಿಯಮಾವಳಿಗಳಿಗೆ ವಿರುದ್ಧವಾಗಿ ನಡೆದುಕೊಂಡಿದ್ದಾರೆ. ಅಲ್ಲದೇ ಸ್ವಂತ ಲಾಭಕ್ಕಾಗಿ ಕಾನೂನುಬಾಹಿರವಾಗಿ ಭವಿಷ್ಯ ನಿಧಿ ವೇತನ, ಗ್ರಾಚುಟಿ, ಮತ್ತು ಇನ್ನಿತರ ನಿವೃತ್ತಿ ಸೌಲಭ್ಯಗಳನ್ನು ಮುಂಚಿತವಾಗಿಯೇ ಪಡೆದ ನಂತರ ಮುಂಗಡವಾಗಿ ಪಡೆದ ಪ್ರೋತ್ಸಾಹಧನದ ಹೆಸರಿನಲ್ಲಿ ₹೧೭,೦೯,೧೪೧ ಹಾಗೂ ಪ್ರತಿ ತಿಂಗಳು ಪ್ರೋತ್ಸಾಹಧನ/ ಆಡಳಿತ ಸಲಹೆಗಾರರ ಶುಲ್ಕ ಎಂಬ ಹೆಸರಿನಲ್ಲಿ ₹೧,೭೪,೨೯,೪೦೭ ಸೇರಿದಂತೆ ಒಟ್ಟೂ ₹೧,೯೧,೩೮,೫೪೮ ಹಣವನ್ನು 2020ರ ಜೂ. ೨೩ರಿಂದ 2023ರ ಜು. ೩೧ರ ವರೆಗಿನ ಅವಧಿಯಲ್ಲಿ ಅಧಿಕಾರ ದುರ್ಬಳಕೆ ಮಾಡಿ ಪಡೆದುಕೊಂಡು ಸಂಘಕ್ಕೆ ವಂಚಿಸುವ ಮೂಲಕ ಹಾನಿ ಮಾಡಿದ್ದಾರೆ. ಈ ಕುರಿತು ಟಿಎಸ್‌ಎಸ್‌ನ ಪ್ರಭಾರಿ ಪ್ರಧಾನ ವ್ಯವಸ್ಥಾಪಕ ವಿಜಯಾನಂದ ಸುಬ್ರಹ್ಮಣ್ಯ ಭಟ್ಟ ಅವರು ಹೊಸ ಮಾರುಕಟ್ಟೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪಿಎಸ್‌ಐ ರತ್ನಾ ತನಿಖೆ ಕೈಗೊಂಡಿದ್ದಾರೆ. ಗ್ರಾಪಂ ಉಪಾಧ್ಯಕ್ಷರ ಮೇಲೆ ಹಲ್ಲೆ, ದೂರು
ಭಟ್ಕಳ: ಬೇಂಗ್ರೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಗೋವಿಂದ ಮಾದೇವ ನಾಯ್ಕ ಅವರಿಗೆ ರಸ್ತೆ ಸಂಬಂಧ ದೂರು ಬಂದ ಹಿನ್ನೆಲೆಯಲ್ಲಿ ತನಿಖೆಗೆ ಹೋದಾಗ ಹಲ್ಲೆ ನಡೆಸಿದ ಬಗ್ಗೆ ಮುರ್ಡೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.ದೂರಿನಲ್ಲಿ ತಿಳಿಸಿದಂತೆ ಶಿರಾಲಿಯ ಸಮುದಾಯ ಆರೋಗ್ಯ ಕೇಂದ್ರದ ಓಡಾಟಕ್ಕೆ ತೊಂದರೆ ಆಗುತ್ತದೆ ಎಂದು ಗ್ರಾಮದ ಸಾರ್ವಜನಿಕರಿಂದ ದೂರು ಬಂದ ಹಿನ್ನೆಲೆಯಲ್ಲಿ ಪಂಚಾಯಿತಿ ಉಪಾಧ್ಯಕ್ಷ ಗೋವಿಂದ ನಾಯ್ಕ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳೊಂದಿಗೆ ಮಾವಿನಕಟ್ಟಾ ಕೋಕ್ತಿಗೆ ಹೋದಾಗ ರಸ್ತೆಯ ಬದಿಯಲ್ಲಿ ದೇವರಾಜ ಈಶ್ವರ ನಾಯ್ಕ, ಗುರು ಈಶ್ವರ ನಾಯ್ಕ ಹಾಗೂ ಸುಶೀಲಾ ಕೋಂ ಈಶ್ವರ ನಾಯ್ಕ ಅವರು ರಸ್ತೆ ಬದಿಯಲ್ಲಿ ಕಲ್ಲನ್ನು ಕಟ್ಟುತ್ತಿರುವುದನ್ನು ಕಂಡು ಸಾರ್ವಜನಿಕರ ಓಡಾಟಕ್ಕೆ ತೊಂದರೆ ಮಾಡಬಾರದು ಎಂದು ಹೇಳಿದ್ದನ್ನೇ ನೆಪ ಮಾಡಿಕೊಂಡ ದೇವರಾಜ ಮತ್ತು ಗುರು ಉಪಾಧ್ಯಕ್ಷರಿಗೆ ಅವಾಚ್ಯ ಶಬ್ದಗಳಿಂದ ಬೈದು, ಹಲ್ಲೆ ಮಾಡಿದ್ದಾರೆ. ಅಲ್ಲದೇ ಜೀವಬೆದರಿಕೆ ಹಾಕಿದ್ದಾರೆ. ಅದೇ ರೀತಿ ಸುಶೀಲಾ ಈಶ್ವರ ನಾಯ್ಕ ಎಂಬವರು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಪ್ರಕರಣವನ್ನು ದಾಖಲಿಸಿಕೊಂಡ ಮುರ್ಡೇಶ್ವರ ಸಬ್ ಇನ್ಸಪೆಕ್ಟರ್ ಮಂಜುನಾಥ ಅವರು ತನಿಖೆ ಕೈಗೊಂಡಿದ್ದಾರೆ.