ಸಾರಾಂಶ
ಯಳಂದೂರು ತಾಲೂಕು ವಿ. ಶ್ರೀನಿವಾಸಪ್ರಸಾದ್ ರವರ ಹಿತೈಷಿಗಳು ಹಾಗೂ ಅಭಿಮಾನಿಗಳ ಒಕ್ಕೂಟದಿಂದ ರಾಜಕೀಯ ಮುತ್ಸದ್ಧಿ ವಿ. ಶ್ರೀನಿವಾಸಪ್ರಸಾದ್ ಅವರಿಗೆ ಮೇ ೨೦ರ ಸೋಮವಾರ ಸ್ವಾಭಿಮಾನಿಗೆ ಸಾವಿರದ ನುಡಿ ನಮನ ಕಾರ್ಯಕ್ರಮ ವನ್ನು ಹಮ್ಮಿಕೊಳ್ಳಲಾಗಿದೆ ಎಂದು ಹಿರಿಯ ಕಾಂಗ್ರೆಸ್ ಮುಖಂಡ ಮಾಂಬಳ್ಳಿ ನಂಜುಂಡಸ್ವಾಮಿ ತಿಳಿಸಿದರು.
ಕನ್ನಡಪ್ರಭ ವಾರ್ತೆ ಚಾಮರಾಜನಗರ
ಯಳಂದೂರು ತಾಲೂಕು ವಿ. ಶ್ರೀನಿವಾಸಪ್ರಸಾದ್ ರವರ ಹಿತೈಷಿಗಳು ಹಾಗೂ ಅಭಿಮಾನಿಗಳ ಒಕ್ಕೂಟದಿಂದ ರಾಜಕೀಯ ಮುತ್ಸದ್ಧಿ ವಿ. ಶ್ರೀನಿವಾಸಪ್ರಸಾದ್ ಅವರಿಗೆ ಮೇ ೨೦ರ ಸೋಮವಾರ ಸ್ವಾಭಿಮಾನಿಗೆ ಸಾವಿರದ ನುಡಿ ನಮನ ಕಾರ್ಯಕ್ರಮ ವನ್ನು ಹಮ್ಮಿಕೊಳ್ಳಲಾಗಿದೆ ಎಂದು ಹಿರಿಯ ಕಾಂಗ್ರೆಸ್ ಮುಖಂಡ ಮಾಂಬಳ್ಳಿ ನಂಜುಂಡಸ್ವಾಮಿ ತಿಳಿಸಿದರು. ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಯಳಂದೂರಿನ ಡಾ. ಬಿ.ಆರ್. ಅಂಬೇಡ್ಕರ್ ಸಮುದಾಯ ಭವನದಲ್ಲಿ ಮೇ ೨೦ರ ಸೋಮವಾರ ಮಧ್ಯಾಹ್ನ ೩ ಗಂಟೆಗೆ ನಡೆಯುವ ಕಾರ್ಯಕ್ರಮದ ಸಾನ್ನಿಧ್ಯವನ್ನು ವಾಟಾಳು ಮಠದ ಶ್ರೀ ಸಿದ್ದಲಿಂಗಶಿವಾಚಾರ್ಯ ಸ್ವಾಮೀಜಿ ವಹಿಸಲಿದ್ದಾರೆ.ರಾಜ್ಯ ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ. ಮಹದೇವಪ್ಪ ಕಾರ್ಯಕ್ರಮವನ್ನು ಉದ್ಘಾಟಿಸುವವರು. ನಳಂದ ಬುದ್ಧ ವಿಹಾರದ ಪೂಜ್ಯ ಬಂತೇ ಭೋದಿ ರತ್ನ ಸ್ವಾಮೀಜಿ ದಿವ್ಯ ಉಪಸ್ಥಿತಿ ವಹಿಸುವರು. ಕೊಳ್ಳೇಗಾಲ ಕ್ಷೇತ್ರದ ಶಾಸಕ ಎ.ಆರ್. ಕೃಷ್ಣಮೂರ್ತಿ ಅಧ್ಯಕ್ಷತೆ ವಹಿಸಲಿದ್ದು, ಚಾಮರಾಜನಗರ ಕ್ಷೇತ್ರದ ಶಾಸಕ ಸಿ. ಪುಟ್ಟರಂಗಶೆಟ್ಟಿ ವಿ. ಶ್ರೀನಿವಾಸಪ್ರಸಾದ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಿದ್ದಾರೆ ಎಂದರು. ವಿವಿಧ ಗಣ್ಯರಿಂದ ನುಡಿನಮನ:
ವಿ. ಶ್ರೀನಿವಾಸಪ್ರಸಾದ್ ಅವರ ಪುತ್ರಿ ಪ್ರತಿಮಾ ಶ್ರೀನಿವಾಸಪ್ರಸಾದ್, ಶಾಸಕರಾದ ಗುಂಡ್ಲುಪೇಟೆ ಕ್ಷೇತ್ರದ ಎಚ್.ಎಂ. ಗಣೇಶ್ ಪ್ರಸಾದ್, ನಂಜನಗೂಡು ಕ್ಷೇತ್ರದ ದರ್ಶನ ಧ್ರುವನಾರಾಯಣ್, ಹನೂರು ಕ್ಷೇತ್ರದ ಎಂ.ಆರ್. ಮಂಜುನಾಥ್, ವಿಧಾನ ಪರಿಷತ್ ಸದಸ್ಯ ಡಾ. ತಿಮ್ಮಯ್ಯ, ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷ ಎಸ್. ಜಯಣ್ಣ, ಮಾಜಿ ಶಾಸಕರಾದ ಜಿ.ಎನ್. ನಂಜುಂಡಸ್ವಾಮಿ, ಆರ್. ನರೇಂದ್ರ, ಕಾಡಾ ಅಧ್ಯಕ್ಷ ಪಿ.ಮರಿಸ್ವಾಮಿ, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ ಹೊಂಗನೂರು ಚಂದ್ರು ಭಾಗವಹಿಸಲಿದ್ದಾರೆ. ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ನ ಹಿರಿಯ ಸಹ ಸಂಪಾದಕ ಕೆ. ಶಿವಕುಮಾರ್ ನುಡಿ ನಮನ ಸಲ್ಲಿಸಲಿದ್ದಾರೆ. ಯಳಂದೂರು ತಾಲೂಕು ಸುತ್ತಮುತ್ತಿನಲ್ಲಿರುವ ವಿ. ಶ್ರೀನಿವಾಸಪ್ರಸಾದ್ ಹಿತೈಷಿಗಳು ಹಾಗೂ ಅಭಿಮಾನಿಗಳ ಒಕ್ಕೂಟದಿಂದ ನಡೆಯುವ ಸ್ವಾಭಿಮಾನಿಗೆ ಸಾವಿರ ನುಡಿ ನಮನ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಅವರ ಅಭಿಮಾನಿಗಳು, ಹಿತೈಷಿಗಳು ಹಾಗೂ ಸಾರ್ವಜನಿಕರ ಆಗಮಿಸಿ, ಕಾರ್ಯಕ್ರಮವನ್ನು ಯಶಸ್ವಿಗೊಳಿಸಿಕೊಡಬೇಕೆಂದು ಮಾಂಬಳ್ಳಿ ನಂಜುಂಡಸ್ವಾಮಿ ಮನವಿ ಮಾಡಿದರು. ಯಳಂದೂರು ತಾಲೂಕಿನ ಪ್ರತಿ ಮನೆಮನೆಗೂ ಸಹ ವಿ. ಶ್ರೀನಿವಾಸಪ್ರಸಾದ್ ಹೆಚ್ಚು ಪರಿಚಿತರು ಹಾಗೂ ಅತ್ಮೀಯತೆ ಇತ್ತು. ತಾಲೂಕಿನಲ್ಲಿ ಜಾತ್ಯತೀತ ಮತ್ತು ವರ್ಗತೀತವಾಗಿ ಎಲ್ಲರು ಸಹ ವಿ. ಶ್ರೀನಿವಾಸಪ್ರಸಾದ್‌ರನ್ನು ಇಷ್ಟ ಪಡುತ್ತಿದ್ದರು. ಅವರ ಅನುಯಾಯಿಗಳಾಗಿದ್ದರು. ಆದೇ ರೀತಿ ವಿ. ಶ್ರೀನಿವಾಸಪ್ರಸಾದ್ ಯಳಂದೂರು ಜನತೆ ಬಗ್ಗೆ ಅಪಾರ ಅಭಿಮಾನ ಪ್ರೀತಿಯನ್ನು ಹೊಂದಿದ್ದರು. ಪ್ರತಿಯೊಬ್ಬರನ್ನು ಸಹ ಹೆಸರು ಗುರುತು ಮಾಡಿ ಪ್ರೀತಿಯಿಂದ ಮಾತನಾಡಿಸುತ್ತಿದ್ದರು. ವಿಶೇಷವಾಗಿ ಯಳಂದೂರು ತಾಲೂಕು ಅಭಿವೃದ್ಧಿಯಲ್ಲಿ ಅವರ ಕೊಡುಗೆ ಬಹಳ ಇದೆ. ಹೀಗಾಗಿ ಅವರಿಗೆ ಹಿತೈಷಿಗಳು ಮತ್ತು ಅಭಿಮಾನಿಗಳು ಸೇರಿ ಸ್ವಾಭಿಮಾನಿಗೆ ಸಾವಿರ ನುಡಿನಮನ ಕಾರ್ಯಕ್ರಮದ ಬಳಿಕ ಅವರಿಗೆ ಗೌರವ ಸಮರ್ಪಣೆ ಮಾಡಲಿದ್ದೇವೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಯಳಂದೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೊಂಗನೂರು ಚಂದ್ರು, ಜಿಪಂ ಮಾಜಿ ಉಪಾಧ್ಯಕ್ಷ ಯೋಗೇಶ್, ಕೆಪಿಸಿಸಿ ಮಾಜಿ ಸದಸ್ಯ ಗೌಡಹಳ್ಳಿ ಸ್ವಾಮಿ ಇದ್ದರು.